ನವದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಸೋಮವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ನ್ಯಾ. ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಮೂರ್ತಿಗಳ ಸಂವಿಧಾನ ಪೀಠವು ತೀರ್ಪು ಪ್ರಕಟಿಸಲಿದೆ.
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. ಬಳಿಕ ಈ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡನೆ ಮಾಡಿತ್ತು. ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಸೋಮವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು.
ಇದಕ್ಕೂ ಮುನ್ನ, 16 ದಿನಗಳ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆ ಸಂದರ್ಭ ಕೇಂದ್ರದ ಪರವಾಗಿ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ, ವಿ ಗಿರಿ ಹಾಗೂ ಇತರರು ಆರ್ಟಿಕಲ್ 370 ರದ್ದತಿಯನ್ನು ಸಮರ್ಥಿಸಿಕೊಂಡಿದ್ದರು. ಇನ್ನೊಂದೆಡೆ ಅರ್ಜಿದಾರರ ಪರವಾಗಿ ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣ್ಯಂ, ರಾಜೀವ್ ಧವನ್, ಜಾಫರ್ ಶಾ ಮತ್ತು ದುಷ್ಯಂತ್ ದವೆ ಸೇರಿದಂತೆ ಹಲವು ಹಿರಿಯ ವಕೀಲರು ವಾದ ಮಂಡಿಸಿದ್ದರು. ಈ ವೇಳೆ 370 ನೇ ವಿಧಿ ರದ್ದತಿ ಮತ್ತು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿರುವುದಕ್ಕೆ ಅರ್ಜಿದಾರರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಆಗಸ್ಟ್ 2ರಂದು ಸುಪ್ರೀಂ ಕೋರ್ಟ್ನಲ್ಲಿ ಆರ್ಟಿಕಲ್ 370 ರದ್ದತಿ ಮತ್ತು "ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ"ಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಪ್ರಾರಂಭವಾಯಿತು. ವಿಚಾರಣೆ ವೇಳೆ ಸಂವಿಧಾನದಲ್ಲಿ ಆರ್ಟಿಕಲ್ 370ಯನ್ನು ತಾತ್ಕಾಲಿಕ ಎಂದು ಉಲ್ಲೇಖಿಸಲಾಗಿದ್ದು, ಇದು ಹೇಗೆ ಶಾಶ್ವತವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರ ಪರ ವಕೀಲರಲ್ಲಿ ಪ್ರಶ್ನಿಸಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವಲ್ಲಿ ಯಾವುದೇ "ಸಾಂವಿಧಾನಿಕ ವಂಚನೆ" ನಡೆದಿಲ್ಲ ಎಂದು ಕೇಂದ್ರವು ವಾದಿಸಿತ್ತು.
ಜಮ್ಮು & ಕಾಶ್ಮೀರದ ಜನರ ಪರವಾಗಿ ತೀರ್ಪು ಬರುತ್ತದೆ ಎಂದು ಭಾವಿಸುತ್ತೇನೆ- ಆಜಾದ್ : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ತೀರ್ಪು ಜಮ್ಮು ಮತ್ತು ಕಾಶ್ಮೀರದ ಜನರ ಪರವಾಗಿ ಬರುತ್ತದೆ ಎಂದು ಭಾವಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಜನರಿಗೆ ಆರ್ಟಿಕಲ್ 370 ಮತ್ತು 35ಎಯನ್ನು ಹಿಂತಿರುಗಿಸಲು ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನಿಂದ ಮಾತ್ರ ಸಾಧ್ಯ. ಸುಪ್ರೀಂ ಕೋರ್ಟ್ ಪಕ್ಷಾತೀತವಾಗಿದ್ದು, ಅದು ಜಮ್ಮು ಮತ್ತು ಕಾಶ್ಮೀರದ ಜನರ ಪರವಾಗಿ ತೀರ್ಪು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಆರ್ಟಿಕಲ್ 370 ಮತ್ತು 35A ಅನ್ನು ತೆಗೆದು ಹಾಕುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು.
ಇದನ್ನೂ ಓದಿ :ಆರ್ಟಿಕಲ್ 35A ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ: ಸುಪ್ರೀಂ ಕೋರ್ಟ್