ಕರ್ನಾಟಕ

karnataka

ಆಂಧ್ರ ರೈಲು ದುರಂತ: ಹಳಿಗಳ ಮರುಜೋಡಣೆ, ಸಂಚಾರ ಪುನಾರಂಭ

By ETV Bharat Karnataka Team

Published : Oct 30, 2023, 5:40 PM IST

ಆಂಧ್ರಪ್ರದೇಶ ರೈಲು ದುರಂತದ ಮಾರ್ಗವನ್ನು ಮರುಸ್ಥಾಪಿಸಲಾಗಿದ್ದು, ಸಂಚಾರ ಪುನಾರಂಭವಾಗಿದೆ. ಸಿಎಂ ಜಗನ್​ ಮೋಹನ್​ ರೆಡ್ಡಿ ವೈಮಾನಿಕ ಸಮೀಕ್ಷೆ ನಡೆಸಿದರು.

ಆಂಧ್ರ ರೈಲು ದುರಂತ
ಆಂಧ್ರ ರೈಲು ದುರಂತ

ವಿಜಯನಗರ (ಆಂಧ್ರಪ್ರದೇಶ):ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಒಡಿಶಾದ ಬಾಲಾಸೋರ್​ ದುರಂತದ ಮಾದರಿ ನಡೆದ ಪ್ಯಾಸೆಂಜರ್​ ರೈಲು ಅಪಘಾತದಲ್ಲಿ 14 ಮಂದಿ ಸಾವಿಗೀಡಾಗಿದ್ದು, 100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ನಿರಂತರ ಕಾರ್ಯಾಚರಣೆಯ ಬಳಿಕ ನಾಶವಾಗಿದ್ದ ಹಳಿಗಳನ್ನು ಸೋಮವಾರ ಮರುಜೋಡಿಸಲಾಗಿದೆ. ಸರಕು ಸಾಗಣೆ ರೈಲಿನ ಬಳಿಕ, ಪ್ರಶಾಂತಿ ಎಕ್ಸ್​ಪ್ರೆಸ್​ ರೈಲು ಸಂಚಾರ ನಡೆಸಿದವು.

ಸಿಎಂ ಜಗನ್​ ವೈಮಾನಿಕ ಸಮೀಕ್ಷೆ:ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಅವರು ರೈಲು ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಇದಾದ ಬಳಿಕ ಘಟನಾ ಸ್ಥಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ಮುಖ್ಯಮಂತ್ರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದಲ್ಲಿ ದಟ್ಟಣೆ ಉಂಟಾಗಿ, ಹಳಿಗಳ ಮರು ಜೋಡಣೆ ಕೆಲಸ ವಿಳಂಬವಾಗಲಿದೆ ಎಂಬ ಕಾರಣಕ್ಕಾಗಿ ಅಧಿಕಾರಿಗಳ ಮನವಿಯ ಮೇರೆಗೆ ಸಿಎಂ ಜಗನ್​ ಮೊದಲು ವೈಮಾನಿಕ ಸಮೀಕ್ಷೆ ಮಾತ್ರ ನಡೆಸಿದರು. ಇದರಿಂದಾಗಿ ಹಳಿಗಳ ಮರುಜೋಡಣೆ ಕಾರ್ಯ ಭರದಿಂದ ಸಾಗಿತು.

ವಿಜಯವಾಡದಿಂದ ಅವರು ವಿಶಾಖಪಟ್ಟಣಕ್ಕೆ ವಿಮಾನದಲ್ಲಿ ಬಂದಿಳಿದರು. ಬಳಿಕ ನೇರವಾಗಿ ಘಟನಾ ಸ್ಥಳಕ್ಕೆ ತೆರಳಲು ಯೋಜಿಸಲಾಗಿತ್ತು. ಆದರೆ, ರೈಲ್ವೆ ಅಧಿಕಾರಿಗಳು ಸಿಎಂ ಆಗಮಿಸಿದಲ್ಲಿ ಕಾರ್ಯಾಚರಣೆ ವಿಳಂಬವಾಗುವ ಬಗ್ಗೆ ತಿಳಿಸಿದ್ದರು. ಹೀಗಾಗಿ ಅವರು ನೇರವಾಗಿ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು.

ಡ್ರೋನ್​ ಕಣ್ಣಲ್ಲಿ ದುರಂತ:ರೈಲು ದುರಂತದ ಸ್ಥಳವನ್ನು ಡ್ರೋನ್​ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ರೈಲು ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಭೀಕರ ಅಪಘಾತಕ್ಕೆ ಸಾಕ್ಷಿಯಾಗಿವೆ. ಇದಾದ ಬಳಿಕ ಮತ್ತೊಂದು ದೃಶ್ಯದಲ್ಲಿ ಹಳಿಗಳನ್ನು ಮರು ಜೋಡಿಸಲಾಗಿದ್ದು, ರೈಲು ಸಂಚಾರ ಆರಂಭವಾಗಿದ್ದು ಕಾಣಬಹುದು. ಮೊದಲು ಸರಕು ಸಾಗಣೆಯ ರೈಲನ್ನು ಕಳುಹಿಸಿದ ಬಳಿಕ, ಪ್ರಶಾಂತಿ ಎಕ್ಸ್​ಪ್ರೆಸ್​ ರೈಲಿನ ಸಂಚಾರಕ್ಕೆ ಅನುಮತಿ ನೀಡಲಾಯಿತು.

ಕೇಂದ್ರ, ರಾಜ್ಯದಿಂದ ಪರಿಹಾರ ಘೋಷಣೆ:ರೈಲು ದುರಂತದ ಬಳಿಕ ಈ ಮಾರ್ಗವಾಗಿ ಸಂಚರಿಸಬೇಕಿದ್ದ 20 ಕ್ಕೂ ಅಧಿಕ ರೈಲುಗಳನ್ನು ರದ್ದು ಮಾಡಲಾಗಿತ್ತು. ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ, ಸಣ್ಣಪುಟ್ಟ ಗಾಯಕ್ಕೆ 50 ಸಾವಿರ ರೂ. ಘೋಷಿಸಲಾಗಿದೆ. ಇದೇ ವೇಳೆ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ ರೂ.50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ.

ರಾಜ್ಯ ಸರ್ಕಾರವೂ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ. ಸಿಎಂ ಜಗನ್ ಮೃತರಿಗೆ 10 ಲಕ್ಷ ರೂಪಾಯಿ, ಗಂಭೀರ ಗಾಯಾಳುಗಳಿಗೆ 2 ಲಕ್ಷ, ಇತರ ರಾಜ್ಯಗಳ ಪ್ರಯಾಣಿಕರ ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.

ಇದನ್ನೂ ಓದಿ:ಆಂಧ್ರ ರೈಲು ಅಪಘಾತ : ಸಾವಿನ ಸಂಖ್ಯೆ 14ಕ್ಕೆ ಏರಿಕೆ..ಸಿಎಂ ಜಗನ್​ ಜೊತೆ ಮಾತುಕತೆ ನಡೆಸಿದ ರೈಲ್ವೆ ಸಚಿವ

ABOUT THE AUTHOR

...view details