ಕರ್ನಾಟಕ

karnataka

ಬಿಎಸ್​ಎಫ್​ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇ 10 ಮೀಸಲಾತಿ

By

Published : Mar 10, 2023, 5:26 PM IST

ಭಾರತೀಯ ಸೇನಾಪಡೆಯಲ್ಲಿ ಅಗ್ನಿವೀರ್​ ಆಗಿ ಸೇರ್ಪಡೆಯಾಗುವವರಿಗೆ ಸರ್ಕಾರ ಒಳ್ಳೆಯ ಸುದ್ದಿಯೊಂದನ್ನು ನೀಡಿದೆ. ಬಿಎಸ್‌ಎಪ್​​​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಮಾಜಿ ಅಗ್ನಿವೀರ್​ಗಳಿಗೆ ಶೇ 10 ರಷ್ಟು ಮೀಸಲಾತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

Central govt has declared 10 percent reservation
Central govt has declared 10 percent reservation

ನವದೆಹಲಿ: ಅಗ್ನಿವೀರ್​ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಮಾಜಿ ಅಗ್ನಿವೀರ್‌ಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ ಮತ್ತು ಮಾಜಿ ಅಗ್ನಿವೀರರು ಮೊದಲ ಬ್ಯಾಚ್​ನವರಾ ಅಥವಾ ನಂತರದ ಬ್ಯಾಚ್​ನವರಾ ಎಂಬುದನ್ನು ಆಧರಿಸಿ ಗರಿಷ್ಠ ವಯೋಮಿತಿ ನಿಯಮಗಳನ್ನು ಸಡಿಲಿಸಿದೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಆಕ್ಟ್, 1968 (1968 ರ 47) ಸೆಕ್ಷನ್ 141 ರ ಉಪ-ವಿಭಾಗ (2) ರ ಷರತ್ತುಗಳು (ಬಿ) ಮತ್ತು (ಸಿ) ಗಳ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೇಂದ್ರ ಗೃಹ ಸಚಿವಾಲಯವು (MHA) ಗುರುವಾರ ಹೊರಡಿಸಿದ ಅಧಿಸೂಚನೆ ಮೂಲಕ ಈ ಘೋಷಣೆ ಮಾಡಿದೆ.

ಪ್ರದತ್ತ ಅಧಿಕಾರಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) ನೇಮಕಾತಿ ನಿಯಮಗಳು, 2015, ಅಂದರೆ ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಜನರಲ್ ಡ್ಯೂಟಿ ಕೇಡರ್ (ನಾನ್-ಗೆಜೆಟೆಡ್) (ತಿದ್ದುಪಡಿ) ನೇಮಕಾತಿ ನಿಯಮಗಳು, 2023 ಅನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.

ಕಾನ್ಸ್‌ಟೇಬಲ್ (ಸಾಮಾನ್ಯ ಕರ್ತವ್ಯ)/ರೈಫಲ್‌ಮ್ಯಾನ್ ಹುದ್ದೆಗೆ ನೇಮಕಾತಿಯಲ್ಲಿ ಮಾಜಿ ಅಗ್ನಿವೀರ್‌ಗಳಿಗೆ 10 ಪ್ರತಿಶತದಷ್ಟು ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಅಸ್ಸೋಂ ರೈಫಲ್ಸ್​ಗಳ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮತ್ತು ದೈಹಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಳೆದ ತಿಂಗಳು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ (MoS) ನಿತ್ಯಾನಂದ ರೈ ಲೋಕಸಭೆಗೆ ಮಾಹಿತಿ ನೀಡಿದ್ದರು.

ಪ್ರಸ್ತುತ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸೋಂ ರೈಫಲ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 83,127. ಜನವರಿ 1, 2023 ರವರೆಗೆ ಇವುಗಳ ಒಟ್ಟು ಯೋಧರ ಸಾಮರ್ಥ್ಯ 10,15,237 ಆಗಿದೆ. ಸದ್ಯ ಬಿಎಸ್​ಎಫ್​ 19,987 ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಇದರಲ್ಲಿ 464 ಗೆಜೆಟೆಡ್ ಅಧಿಕಾರಿಗಳು (GOs), 1,314 ಅಧೀನ ಅಧಿಕಾರಿಗಳು (SOs) ಮತ್ತು 18,209 ಇತರ ಶ್ರೇಣಿಗಳ ಸಿಬ್ಬಂದಿಯ (ORs) ಕೊರತೆಯಿದೆ.

ಗೃಹ ಸಚಿವಾಲಯದ ಗೆಜೆಟ್ ಅಧಿಸೂಚನೆಯ ಪ್ರಕಾರ, ಮಾಜಿ ಅಗ್ನಿವೀರ್‌ಗಳನ್ನು ಬಿಎಸ್‌ಎಫ್‌ನಲ್ಲಿ ನೇಮಕ ಮಾಡಿಕೊಳ್ಳುವ ಸಮಯದಲ್ಲಿ ದೈಹಿಕ ದಕ್ಷತೆಯ (ಫಿಸಿಕಲ್ ಫಿಟ್ನೆಸ್) ಪರೀಕ್ಷೆಯಿಂದ ಅವರಿಗೆ ವಿನಾಯಿತಿ ನೀಡಲಾಗುತ್ತದೆ. ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಐದು ವರ್ಷಗಳವರೆಗೆ ಸಡಿಲಿಸಬಹುದಾಗಿದೆ. ಹಾಗೆಯೇ ಇನ್ನುಳಿದ ಬ್ಯಾಚ್​ಗಳ ಮಾಜಿ ಅಗ್ನಿವೀರ್‌ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಸಬಹುದಾಗಿದೆ ಎಂದು ಅದು ಹೇಳಿದೆ.

ಅಗ್ನಿವೀರರನ್ನು ಅರೆಸೈನಿಕ ಪಡೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಗೃಹ ಸಚಿವಾಲಯದ ನಿರ್ಧಾರವು ಮಹತ್ವದ್ದಾಗಿದೆ. ಏಕೆಂದರೆ ಇದು ಮಾಜಿ ಅಗ್ನಿವೀರ್‌ಗಳಿಗೆ ನಿವೃತ್ತಿ ವಯಸ್ಸಿನವರೆಗೆ ಉದ್ಯೋಗದ ಅವಕಾಶ ನೀಡಲಿದೆ. 70,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತರಬೇತಿ ಪಡೆದ ಸಿಬ್ಬಂದಿಯನ್ನು ಪಡೆಯುವುದರಿಂದ ಅರೆಸೇನಾ ಪಡೆಗಳು ಸಹ ಈ ಯೋಜನೆಯಿಂದ ಪ್ರಯೋಜನ ಪಡೆಯಲಿವೆ.

ಇದನ್ನೂ ಓದಿ : ಭಾರತೀಯ ಸೇನೆ ಸೇರಲು ಇನ್ನು ಆನ್​ಲೈನ್​ ಪರೀಕ್ಷೆ : ಹೊಸ ನಿಯಮ ಜಾರಿಗೆ

ABOUT THE AUTHOR

...view details