ಕರ್ನಾಟಕ

karnataka

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ: ಬಿಜೆಪಿ- ಕಾಂಗ್ರೆಸ್​ ಪಡೆದ ಮತ ಪ್ರಮಾಣ ಎಷ್ಟಿದೆ?

By ETV Bharat Karnataka Team

Published : Dec 4, 2023, 5:10 PM IST

ಬಿಜೆಪಿ ಗೆದ್ದಿರುವ ಮೂರು ರಾಜ್ಯಗಳಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಕಾಂಗ್ರೆಸ್​ ಹಿಂದಿದ್ದರೂ, ಮತ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವೇನು ಕಂಡುಬಂದಿಲ್ಲ. ಮಧ್ಯಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಅಂತರ ಕಾಯ್ದುಕೊಂಡಿದೆ.

ಮತ ಪ್ರಮಾಣ
ಮತ ಪ್ರಮಾಣ

ನವದೆಹಲಿ:ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ. ತೆಲಂಗಾಣದಲ್ಲಿ ಸೋತರೂ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಜೊತೆಗೆ ಕಾಂಗ್ರೆಸ್​ ಆಡಳಿತದ ಎರಡು ರಾಜ್ಯಗಳನ್ನು ಕಸಿದುಕೊಳ್ಳುವ ಮೂಲಕ 'ಕೈ' ಪಕ್ಷಕ್ಕೆ ಮರ್ಮಾಘಾತ ನೀಡಿದೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಉತ್ಸಾಹ ಹೆಚ್ಚಿಸಿಕೊಂಡಿದೆ.

ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಅಧಿಕಾರವನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ತನ್ನ ಮತದಾರರನ್ನೂ ಹೆಚ್ಚಿಸಿಕೊಂಡಿದೆ. ಈ ಚುನಾವಣಾ ಫಲಿತಾಂಶ ದೇಶದಲ್ಲಿ ಬಿಜೆಪಿಯ ಹವಾ ಕುಗ್ಗಿಲ್ಲ ಎಂಬುದನ್ನು ತೋರ್ಪಡಿಸಿದೆ. ಯಾವೆಲ್ಲಾ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಪಡೆದುಕೊಂಡ ಮತಗಳ ಪ್ರಮಾಣ ಹೇಗಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

'ಕೈ' ಬಿಟ್ಟ ಛತ್ತೀಸ್​ಗಢ ಜನರು:ಛತ್ತೀಸ್​ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿದೆ. 90 ಸ್ಥಾನಗಳ ಪೈಕಿ ಕೇಸರಿ ಪಡೆ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಅಧಿಕಾರದಲ್ಲಿದ್ದ ಕಾಂಗ್ರೆಸ್​ 35, ಇತರೆ 1 ಸ್ಥಾನ ಬಂದಿದೆ. ಇಲ್ಲಿ ಬಿಜೆಪಿಗೆ ಜನರು ಹೋಲ್​ಸೇಲ್​ ಮತದಾನ ನೀಡಿದ್ದು, ಅಧಿಕಾರ ರಚನೆಗೆ ಬೇಕಾದ 46 ಸ್ಥಾನಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವಿನ ಆಶೀರ್ವಾದ ಮಾಡಿದ್ದಾರೆ. ಶೇ. 46.27 ರಷ್ಟು ಮಂದಿ ಕೇಸರಿ ಪಡೆಗೆ ಮತ ನೀಡಿದ್ದಾರೆ. ಕಾಂಗ್ರೆಸ್​ಗೆ ಶೇಕಡಾ 42.23 ರಷ್ಟು ಮತ ಪ್ರಮಾಣ ದಾಖಲಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಕಮಾಲ್​:ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ ಬಿಜೆಪಿ 163 ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ 66 ರಲ್ಲಿ ಗೆದ್ದಿದೆ. ಶೇಕಡಾ 48.55 ರಷ್ಟು ಮತ ಪ್ರಮಾಣ ಬಂದಿದೆ. ಕಾಂಗ್ರೆಸ್​ 66 ಸ್ಥಾನಗಳಲ್ಲಿ ಗೆದ್ದು 40.40 ಪ್ರತಿಶತ ಜನರು ಮತ ಹಾಕಿದ್ದಾರೆ. ಅಂದರೆ ಇಲ್ಲಿ ಸುಮಾರು 9 ಪ್ರತಿಶತದಷ್ಟು ವ್ಯತ್ಯಾಸ ಇದೆ.

ಮರಳಲ್ಲಿ ಅರಳಿದ ಕಮಲ:ರಾಜಸ್ಥಾನದಲ್ಲಿ ಅಧಿಕಾರಲ್ಲಿದ್ದ ಕಾಂಗ್ರೆಸ್​ ಸೋಲನುಭವಿಸಿದೆ. 199 ಸ್ಥಾನಗಳ ಪೈಕಿ 69 ರಲ್ಲಿ ಗೆದ್ದಿದೆ. 39.53 ಪ್ರತಿಶತದಷ್ಟು ಜನರು ದೇಶದ ಹಳೆಯ ಪಕ್ಷಕ್ಕೆ ಮತ ನೀಡಿದ್ದಾರೆ. ಬಿಜೆಪಿ 115 ಸ್ಥಾನಗಳಲ್ಲಿ ಜಯಿಸಿ ಅಧಿಕಾರವನ್ನು ಮರಳಿ ಪಡೆದಿದೆ. ಕೇಸರಿ ಪಡೆಗೆ ಇಲ್ಲಿ 41.69 ರಷ್ಟು ಮತ ಪ್ರಮಾಣ ಸಿಕ್ಕಿದೆ.

ತೆಲಂಗಾಣದಲ್ಲಿ ಕಳೆದ ಸಲ 1 ಸ್ಥಾನದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 8 ಸ್ಥಾನ ಪಡೆದುಕೊಂಡಿದೆ. ಶೇಕಡಾ 13.90 ರಷ್ಟು ಮತ ಪ್ರಮಾಣ ಪಡೆದಿದೆ. ಅಧಿಕಾರ ಪಡೆದಿರುವ ಕಾಂಗ್ರೆಸ್​ ಇಲ್ಲಿ 39.40 ರಷ್ಟು ಮತ ಗಳಿಕೆ ಮಾಡಿದೆ. ಅಧಿಕಾರ ಕಳೆದುಕೊಂಡ ಭಾರತ ರಾಷ್ಟ್ರ ಸಮಿತಿ(ಬಿಆರ್​ಎಸ್​) 37.35 ರಷ್ಟು ಮತ ಪ್ರಮಾಣ ದಾಖಲಿಸಿದೆ.

ಸೋತಿರುವ ಮೂರು ರಾಜ್ಯಗಳಲ್ಲಿ ಮತ ಪ್ರಮಾಣ ನೋಡಿದರೆ, ಜನರು ನಮ್ಮನ್ನು ಪೂರ್ಣವಾಗಿ ಕೈಬಿಟ್ಟಿಲ್ಲ. ಬಿಜೆಪಿಗಿಂತ ಅಲ್ಪ ಪ್ರಮಾಣದಲ್ಲಿ ಮತ ಗಳಿಕೆಯಲ್ಲಿ ಹಿಂದಿದ್ದೇವೆ ಎಂದು ಕಾಂಗ್ರೆಸ್​ ಸೋಮವಾರ ಹೇಳಿದೆ.

ಇದನ್ನೂ ಓದಿ:ರಾಜಸ್ಥಾನ ವಿಧಾನಸಭೆ ಚುನಾವಣೆ: ಕಾಂಗ್ರೆಸ್​ನ 25 ಸಚಿವರ ಪೈಕಿ 17 ಮಂದಿಗೆ ಸೋಲು

ABOUT THE AUTHOR

...view details