ETV Bharat / state

ಪಿಎಸ್ಐಗೆ ಶಾಸಕರ ಪುತ್ರಿಯಿಂದ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದರೆ ನಿರೀಕ್ಷಣಾ ಜಾಮೀನು ಪರಿಗಣಿಸಬಹುದು - ಹೈಕೋರ್ಟ್

ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ ಪ್ರಕರಣದಲ್ಲಿ ಶಾಸಕರ ಪುತ್ರಿ ಐಶ್ವರ್ಯಾ ಕ್ಷಮೆಯಾಚಿಸಿದರೆ ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

BENGALURU  ANTICIPATORY BAIL  MLA DAUGHTER  SLAPPING WOMAN PSI
ಹೈಕೋರ್ಟ್ (ETV Bharat)
author img

By ETV Bharat Karnataka Team

Published : September 22, 2026 at 7:49 AM IST

1 Min Read
Choose ETV Bharat

ಬೆಂಗಳೂರು: ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್​ಇನ್ಸ್​ಪೆಕ್ಟರ್​ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ಐಶ್ವರ್ಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ, ಮಹಿಳಾ ಪಿಎಸ್ಐ ಬಳಿ ಐಶ್ವರ್ಯಾ ಕ್ಷಮೆಯಾಚಿಸಿದರೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಬಹುದು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಈ ಕುರಿತು ಐಶ್ವರ್ಯಾ ಅವರಿಂದ ಸೂಚನೆ ಪಡೆದು, ನ್ಯಾಯಾಲಯಕ್ಕೆ ಪ್ರತಿಕ್ರಿಯಿಸುವುದಕ್ಕಾಗಿ ಅವರ ಪರ ವಕೀಲರು ಮಂಗಳವಾರದವರೆಗೆ ಕಾಲಾವಕಾಶ ಕೋರಿದರು.

ಪ್ರಕರಣದ ಹಿನ್ನೆಲೆ: ಆಗಸ್ಟ್ 12 ರಂದು ಭೀಮನ ಅಮಾವಾಸ್ಯೆಯಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯದೇವಿ ದೇವಸ್ಥಾನಕ್ಕೆ ಐಶ್ವರ್ಯಾ ತಮ್ಮ ಮಕ್ಕಳೊಂದಿಗೆ ತೆರಳಿದ್ದರು. ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ವಿಚಾರವಾಗಿ ಅಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಸವಿತಾ ಪಾಟೀಲ್ ಅವರೊಂದಿಗೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಐಶ್ವರ್ಯಾ ಪಿಎಸ್ಐಗೆ ಕಪಾಳಮೋಕ್ಷ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪಿಎಸ್​ಐ ಸವಿತಾ ಬಿ.ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಗಾಯಗೊಳಿಸುವುದು, ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ಐಶ್ವರ್ಯಾ ಕೂಡ ಪೊಲೀಸ್‌ ಅಧಿಕಾರಿಯ ವಿರುದ್ಧ ಪ್ರತಿದೂರು ನೀಡಿದ್ದರು. ಪೊಲೀಸ್‌ ಅಧಿಕಾರಿಯೇ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಅವರು ಆರೋಪಿಸಿದ್ದರು.

ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು. ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಐಶ್ವರ್ಯಾ ಮೊದಲು ಶ್ರೀರಂಗಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲಿನ ಹಲ್ಲೆಆರೋಪದ ಗಂಭೀರತೆಯನ್ನು ಪರಿಗಣಿಸಿದ್ದ ಸೆಷನ್ಸ್ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಐಶ್ವರ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಶಾಸಕ ಸುರೇಶ್‌ಗೌಡ ಪುತ್ರಿಯ ಜಾಮೀನು ಅರ್ಜಿ ವಜಾ