ಧರ್ಮಗಳ ಗಡಿ ಮೀರಿ ನಿಂತ ಕೋಣೆವಾಡ: ಗಣೇಶೋತ್ಸವಕ್ಕೆ ಮುಸ್ಲಿಂ ಯುವಕನೇ ಅಧ್ಯಕ್ಷ, ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕಾರವಾರ
ಕಾರವಾರದ ಕೋಣೆವಾಡದಲ್ಲಿ ಕಳೆದ 26 ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಯುವಕರು ಯಾವುದೇ ಭೇದ -ಭಾವವಿಲ್ಲದೇ ಗಣೇಶ ಹಬ್ಬವನ್ನು ಆಚರಿಸಿಕೊಂಡು ಆಚರಿಸಿಕೊಂಡು ಬರುತ್ತಿದ್ದಾರೆ.

Published : September 21, 2026 at 9:02 PM IST
ಕಾರವಾರ: ನಗರದ ಕೋಣೆವಾಡದ ಯುವಕರು ಭೇದ- ಭಾವವಿಲ್ಲದೆ ಒಟ್ಟಾಗಿ ಗಣೇಶ ಹಬ್ಬಗಳನ್ನು ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದು, ಕೋಮು ಸೌಹಾರ್ದತೆಯ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಗಣೇಶನಿಗೆ ಮುಸ್ಲಿಂ ಅಧ್ಯಕ್ಷ, ಈದ್ ಮಿಲಾದ್‌ಗೆ ಹಿಂದೂಗಳ ಸಾಥ್: ಕೋಣೆವಾಡದಲ್ಲಿ ಕಳೆದ 26 ವರ್ಷಗಳಿಂದ 'ಶ್ರೀ ಗಜಾನನ ಉತ್ಸವ ಸಮಿತಿ'ಯನ್ನು ರಚಿಸಿಕೊಂಡು ವಿಜೃಂಭಣೆಯಿಂದ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ವಿಶೇಷವೆಂದರೆ, ಈ ಬಾರಿಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಬ್ಬೀರ್ ಶೇಖ್ ಹಾಗೂ ಉಪಾಧ್ಯಕ್ಷರಾಗಿ ನಹಿಮ್ ಶೇಖ್ ನೇತೃತ್ವ ವಹಿಸಿಕೊಂಡಿದ್ದಾರೆ. ಇವರ ಮುಂದಾಳತ್ವದಲ್ಲೇ 9 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನವೂ ಪೂಜೆ ಸಲ್ಲಿಸಲಾಗುತ್ತಿದೆ.
8ನೇ ದಿನವಾದ ಸೋಮವಾರ ಎರಡೂ ಧರ್ಮಗಳ ಯುವಕರು ಸೇರಿ ಗಣೇಶನಿಗೆ ಮಹಾಪೂಜೆ ನೆರವೇರಿಸಿದರು. ದಾರಿ ಉದ್ದಕ್ಕೂ ತಳಿರು-ತೋರಣ, ಕೇಸರಿ ಪತಾಕೆಗಳನ್ನು ಕಟ್ಟಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ, ಮಹಾಪೂಜೆಯ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಮುಸ್ಲಿಂ ಯುವಕರು ಖುರ್ಚಿ, ಟೇಬಲ್ ಹಾಕಿ, ಗಣೇಶನನ್ನು ನೋಡಲು ಬಂದ ಭಕ್ತರಿಗೆ ಯಾವುದೇ ಭೇದ - ಭಾವವಿಲ್ಲದೇ ಊಟ ಬಡಿಸುವ ಮೂಲಕ ಕೈಜೋಡಿಸಿದರು.
ಇದಲ್ಲದೆ, ಇತ್ತೀಚೆಗೆ ನಡೆದ 'ಈದ್ ಮಿಲಾದ್' ಹಬ್ಬದ ಸಂದರ್ಭದಲ್ಲೂ ಸ್ಥಳೀಯ ಹಿಂದೂ ಯುವಕರು ಸಕ್ರಿಯವಾಗಿ ಸಹಕರಿಸಿದ್ದರು. ಮದೀನಾ ಜಾಮಿಯಾ ಮಸ್ಜಿದ್ ಎದುರು ಲೈಟಿಂಗ್ಸ್ ಹಾಗೂ ಬಾವುಟಗಳನ್ನು ಕಟ್ಟಿ ಹಬ್ಬದ ಸಿದ್ಧತೆ ಮಾಡಿಕೊಳ್ಳಲು ಹಿಂದೂ ಯುವಕರು ಮುಸ್ಲಿಂ ಬಾಂಧವರೊಂದಿಗೆ ಭುಜಕೊಟ್ಟು ಕೆಲಸ ಮಾಡಿದ್ದರು. "ಅವರ ಹಬ್ಬದ ದಿನ ನಾವು ಕೂಡ ಸಂಭ್ರಮಿಸಿದ್ದೆವು, ಇಂದು ನಮ್ಮ ಹಬ್ಬದಲ್ಲಿ ಅವರೂ ಜೊತೆಗಿದ್ದಾರೆ" ಎನ್ನುತ್ತಾರೆ ಸ್ಥಳೀಯರಾದ ಬಾಬು ಶೇಖ್.
26 ವರ್ಷಗಳ ಬಾಂಧವ್ಯ: ಕರೋಣೆವಾಡ ವಾರ್ಡ್‌ನಲ್ಲಿ 26 ವರ್ಷಗಳ ಹಿಂದೆ ಗಣಪತಿಯನ್ನು ಕೂರಿಸಲು ತೀರ್ಮಾನಿಸಿದಾಗ, ಅಂದು ಮುಸ್ಲಿಂ ಸಮುದಾಯದವರೇ ಸ್ವತಃ ಗಣಪತಿ ಮೂರ್ತಿಯನ್ನು ನೀಡಿದ್ದರು ಎಂಬುದು ಇಲ್ಲಿನ ವಿಶೇಷತೆಯಾಗಿದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಹಿಂದೂ-ಮುಸ್ಲಿಂ ಎನ್ನುವ ಯಾವುದೇ ಕಂದಕವಿಲ್ಲ. ಮಂಗಳವಾರ ನಡೆಯಲಿರುವ ಗಣೇಶನ ನಿಮಜ್ಜನ ಮೆರವಣಿಗೆಯು ಮಸೀದಿ ಎದುರು ಹಾದುಹೋಗುವಾಗ, ಸೌಂಡ್ (ಧ್ವನಿವರ್ಧಕ) ಬಂದ್ ಮಾಡಿಕೊಂಡು ತೆರಳಲು ಈಗಾಗಲೇ ಸೌಹಾರ್ದಯುತವಾಗಿ ನಿರ್ಧರಿಸಲಾಗಿದೆ.
"ಎಲ್ಲಿಯೇ ಗಲಾಟೆಗಳಾದರೂ ಅದರಲ್ಲಿ ರಾಜಕೀಯ ಮಾಡುವವರು ನಮಗೆ ಬೇಕಾಗಿಲ್ಲ. ನಾವು ಇಲ್ಲಿ ಅಣ್ಣ-ತಮ್ಮಂದಿರಂತೆ ಇದ್ದೇವೆ, ಮುಂದೆಯೂ ಹಾಗೆಯೇ ಇರುತ್ತೇವೆ" ಎಂದು ಸ್ಥಳೀಯರಾದ ರತ್ನಾಕರ್ ನಾಯ್ಕ ಹೆಮ್ಮೆಯಿಂದ ನುಡಿಯುತ್ತಾರೆ.

