ETV Bharat / bharat

ಪ್ರಕರಣದ ತನಿಖೆಯು ನ್ಯಾಯಾಲಯದ ಮನಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ: ಬೆಳ್ತಂಗಡಿ ಬಾಲಕಿ ಅತ್ಯಾಚಾರ, ಕೊಲೆ ಕೇಸ್​ ಮರು ತನಿಖೆಗೆ ಸುಪ್ರೀಂ ಆದೇಶ!

ಬೆಳ್ತಂಗಡಿ ಬಾಲಕಿ ಅತ್ಯಾಚಾರ, ಕೊಲೆ ಕೇಸ್​ ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಹಿಂದಿನ ಎಲ್ಲ ತನಿಖಾ ಸಂಸ್ಥೆಗಳ ತನಿಖೆಯನ್ನು ಕಟುವಾಗಿ ಟೀಕಿಸಿದೆ.

Belthangady Rape And Murder Case: Supreme Court Says Probe 'Shocked Its Conscience'; Orders Reinvestigation
Belthangady Rape And Murder Case: Supreme Court Says Probe 'Shocked Its Conscience'; Orders Reinvestigation (ETV Bharat)
author img

By ETV Bharat Karnataka Team

Published : September 21, 2026 at 9:12 PM IST

5 Min Read
Choose ETV Bharat

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಬೆಳ್ತಂಗಡಿಯ 17 ವರ್ಷದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ಅತ್ಯಂತ ಮಹತ್ವದ ಆದೇಶ ನೀಡಿದೆ. 14 ವರ್ಷಗಳ ಹಳೆಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ಇದಕ್ಕಾಗಿ ಹೊಸ ವಿಶೇಷ ತನಿಖಾ ತಂಡವನ್ನು (ಎಸ್​ಐಟಿ) ರಚಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ತನ್ನ ಮಗಳ ಹತ್ಯೆಗೆ ಕಾರಣವಾದವರನ್ನು ಪತ್ತೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್​ ಕುಮಾರ್​ ಸಂಜೀವ್ ಸಚ್ದೇವ್​ ಅವರಿದ್ದ ಪೀಠವು ವಿಚಾರಣೆ ನಡೆಸಿ, ಈ ತೀರ್ಪು ಪ್ರಕಟಿಸಿತು.

ಸಿಬಿಐ ತನಿಖೆಗೆ ತೀವ್ರ ಅಸಮಾಧಾನ: 2012ರಲ್ಲಿ ನಡೆದ 17 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯು ನ್ಯಾಯಾಲಯದ ಮನಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ. ತನಿಖೆಯ ರೀತಿಯು ಸಂತ್ರಸ್ತೆಗೆ ಎಸಗಲಾದ ಘೋರ ಅನ್ಯಾಯ ಎಂದು ಸುಪ್ರೀಂ ಕೋರ್ಟ್​ ಸಿಬಿಐ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ತಪ್ಪಾಗಿ ಬಂಧಿತನಾದ ಆರೋಪಿಗೆ ಮುಂದೊಂದು ದಿನ ಪರಿಹಾರ ಕೊಡಿಸಬಹುದು. ಆದರೆ, ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿಗೆ ಆದ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಸಮಾಜವು ಸಂತ್ರಸ್ತೆಗೆ ಅನ್ಯಾಯವೆಸಗಬಾರದು ಎಂದು ಹೇಳಿದ ನ್ಯಾಯಾಲಯವು, ಪ್ರಕರಣದ ಮರುತನಿಖೆಗೆ ಆದೇಶಿಸಿತು. ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಿ ಕಟಕಟೆಗೆ ತರುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿತು.

ಸುಪ್ರೀಂ ಕೋರ್ಟ್ ಹೊರಡಿಸಿದ ಪ್ರಮುಖ ನಿರ್ದೇಶನಗಳು

  • ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಆಧುನಿಕ ತನಿಖಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಸಮರ್ಥ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಾಜ್ಯ ಸರ್ಕಾರ ಹೊಸದಾಗಿ ರಚಿಸಬೇಕು.
  • ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐಡಿ ಅಥವಾ ಸಿಬಿಐ ತನಿಖಾ ತಂಡಗಳ ಯಾವುದೇ ಅಧಿಕಾರಿಯು ಈ ಹೊಸ ತನಿಖಾ ತಂಡದಲ್ಲಿ ಇರಕೂಡದು.
  • ಹೊಸದಾಗಿ ರಚನೆಯಾದ ಎಸ್​​​ಐಟಿ ತನಿಖೆಯನ್ನು ಮುಂದಿನ 3 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಅದರ ವರದಿಯನ್ನು ಕಾನೂನಿನ ಪ್ರಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು.
  • ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿ ಖುಲಾಸೆ ಮಾಡಿದೆ. ಸಂವಿಧಾನದ ವಿಧಿ 20(2) ಮತ್ತು ಸಿಆರ್‌ಪಿಸಿ ಸೆಕ್ಷನ್ 300ರ ಅಡಿಯಲ್ಲಿ ಆತ ಎರಡನೇ ಬಾರಿಗೆ ವಿಚಾರಣೆ ಅಥವಾ ಕಾನೂನು ಕ್ರಮ ಎದುರಿಸಬೇಕಾದ ಅವಶ್ಯಕತೆ ಇಲ್ಲ.

ಅಸಮರ್ಥ ತನಿಖೆ, ಆತ್ಮಸಾಕ್ಷಿಗೇ ಪೆಟ್ಟು: 17 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿವಿಧ ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯ ರೀತಿ ಹಾಗೂ ಸಂಗ್ರಹಿಸಿದ ವಿವಿಧ ಸಾಕ್ಷ್ಯಗಳನ್ನು ನೋಡಿದರೆ, ಇದು ಅಸಮರ್ಥ ಮತ್ತು ಆತ್ಮಸಾಕ್ಷಿಯನ್ನೇ ಅಲ್ಲಾಡಿಸಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಈ ಹಿಂದೆ ಯಾರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತೋ ಆತ ಈ ಅಪರಾಧ ಎಸಗಲು ಅಸಮರ್ಥನೆಂದು ನ್ಯಾಯಾಲಯ ಹೇಳಿದ್ದರೂ, ಸಂತ್ರಸ್ತೆಗೆ ಅನ್ಯಾಯವಾಗುವ ರೀತಿಯಲ್ಲಿ ತನಿಖೆ ನಡೆಸಲಾಗಿದೆ. ಇದು ಬೇಜವಾಬ್ದಾರಿ ಮತ್ತು ಅಸಮರ್ಥ ತನಿಖೆಗೆ ಹಿಡಿದ ಕನ್ನಡಿ ಎಂದು ಕಟು ಮಾತುಗಳಲ್ಲಿ ಟೀಕಿಸಿದೆ.

ಅಪರಾಧಿಗಳ ಪತ್ತೆ ಮಾಡದಿದ್ದರೆ ಸಮಾಜಕ್ಕೇ ಕಳಂಕ: ಸುಳ್ಳು ಆರೋಪಗಳನ್ನು ಹೊತ್ತ ವ್ಯಕ್ತಿಗೆ ಆದ ಅನ್ಯಾಯಕ್ಕೆ ಮುಂದೊಂದು ದಿನ ಪರಿಹಾರ ಕೊಡಿಸಬಹುದು. ಆದರೆ, ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ನಂತರ ಕೊಲೆಯಾದ ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಪರಿಹಾರ ನೀಡಲು ಸಾಧ್ಯವೇ?. ಇಂತಹ ಘೋರ ಅನ್ಯಾಯಕ್ಕೆ ತುತ್ತಾದ ಸಂತ್ರಸ್ತೆಗೆ ನ್ಯಾಯ ಸಿಗಬೇಕಾದರೆ ನಿಜವಾದ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷಿಸಬೇಕು. ಇಲ್ಲವಾದಲ್ಲಿ ಇದು ಸಮಾಜಕ್ಕೇ ಕಳಂಕವಾಗಿ ಉಳಿಯಲಿದೆ ಎಂದು ಕೋರ್ಟ್ ಹೇಳಿದೆ.

ಡಿಎನ್‌ಎ (DNA) ವಿಶ್ಲೇಷಣೆ ನಡೆಸಿದ ಟಾಕ್ಸಿಕಾಲಜಿ ವಿಭಾಗದ ಸಹಾಯಕ ನಿರ್ದೇಶಕರ ಹೇಳಿಕೆಯನ್ನು ಗಮನಿಸಿದ ನ್ಯಾಯಪೀಠ, ಶಂಕಿತ ವ್ಯಕ್ತಿಗಳು ಪತ್ತೆಯಾದರೆ ಸಂತ್ರಸ್ತೆಯ ಬಟ್ಟೆಗಳಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಯನ್ನು ಅವರೊಂದಿಗೆ ಹೋಲಿಕೆ ಮಾಡಬಹುದು ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ, 'ಗೋಲ್ಡನ್ ಅವರ್' (ಅಪರಾಧ ನಡೆದ ಕೆಲವು ಗಂಟೆಗಳು) ನಲ್ಲಿ ಸಂಗ್ರಹಿಸಲು ಸಾಧ್ಯವಾಗದ ಸಾಕ್ಷ್ಯಗಳು ಈಗಲೂ ಲಭ್ಯವಿರುವುದು ಅನುಮಾನಾಸ್ಪದ ಮತ್ತು ಮರುತನಿಖೆಗೆ ಅವಕಾಶ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬ ಹೈಕೋರ್ಟ್‌ನ ಅಭಿಪ್ರಾಯವು ಸ್ಪಷ್ಟವಾಗಿ ತಪ್ಪಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಮುಖ ಸಾಕ್ಷಿಗಳು ಲಭ್ಯವಿದ್ದಾರೆ. ಮಹಜರು ವಸ್ತುವಾಗಿ ಹಾಜರುಪಡಿಸಲಾದ ಇತರ ವ್ಯಕ್ತಿಗಳ ಕೂದಲು ಲಭ್ಯವಿದೆ. ಶಂಕಿತ ವ್ಯಕ್ತಿಗಳು ಪತ್ತೆಯಾದರೆ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ, ಡಿಎನ್‌ಎ ಪರೀಕ್ಷೆಯ ಮೂಲಕ ಹೋಲಿಕೆ ಮಾಡಬಹುದು ಎಂದು ಅದು ಗಮನಿಸಿದೆ.

ಏಪ್ರಿಲ್ 2026ರಲ್ಲಿ, ಅರ್ಜಿದಾರರು ಸಲ್ಲಿಸಿದ್ದ ಹೆಚ್ಚುವರಿ ಅಫಿಡವಿಟ್‌ನಲ್ಲಿ ಹೆಸರಿಸಲಾದ 8 ಸಂಭಾವ್ಯ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. "ರಾಜ್ಯ ಸರ್ಕಾರವು ಈ ಆದೇಶವನ್ನು ಪಾಲಿಸಿದ್ದು, ಆದೇಶ ಹೊರಬಿದ್ದ 3 ವಾರಗಳ ಒಳಗಾಗಿಯೇ ಆ ಸಂಭಾವ್ಯ ಸಾಕ್ಷಿಗಳನ್ನು ಪತ್ತೆಹಚ್ಚಿದೆ. ಕೇವಲ ಮೂರು ವಾರಗಳಲ್ಲಿ ಸಾಕ್ಷಿಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲು ಸರ್ಕಾರಕ್ಕೆ ಸಾಧ್ಯವಾಗಿರುವಾಗ, ಸೂಕ್ತ ಸಮಯದಲ್ಲಿ ಈ ಸುಳಿವುಗಳನ್ನು ಪರಿಶೀಲಿಸಲು ಮೂರು ತನಿಖಾ ಸಂಸ್ಥೆಗಳಿಗೆ ಏಕೆ ಸಾಧ್ಯವಾಗಲಿಲ್ಲ? ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಸಂತ್ರಸ್ತೆ ಕುಟುಂಬದ ಆಕ್ಷೇಪ: ಸಂತ್ರಸ್ತೆ ಯುವತಿಯ ತಂದೆಯ ಪ್ರಕಾರ, ರಾವ್ ಎಂಬಾತನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ಸ್ಥಳೀಯವಾಗಿ ಅತ್ಯಂತ ಪ್ರಭಾವಶಾಲಿ ಮತ್ತು ಶ್ರೀಮಂತ ವ್ಯಕ್ತಿಗಳೇ ಈ ಅಪರಾಧವನ್ನು ಎಸಗಿದ್ದಾರೆ ಎಂದು ಅವರು, ಅವರ ಕುಟುಂಬ ಮತ್ತು ಸಾರ್ವಜನಿಕರು ಶಂಕಿಸಿದ್ದಾರೆ. ಪ್ರಮುಖ ಸಾಕ್ಷ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ ಅವರು, ಸಿಐಡಿ ಮತ್ತು ಸಿಬಿಐ ತನಿಖೆಗಳಲ್ಲಿನ ಲೋಪದೋಷಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕದ ಅಪರಾಧ ತನಿಖಾ ದಳ (ಸಿಐಡಿ) ಮತ್ತು ಸಿಬಿಐ ತನಿಖೆ ನಡೆಸಿದ ಹೊರತಾಗಿಯೂ, ಆಕೆಯ ಸಾವಿಗೆ ಕಾರಣರಾದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸಂತೋಷ್​ ರಾವ್​​ನನ್ನು ಜೂನ್ 16, 2023 ರಂದು ಸಿಬಿಐ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು. 2024ರಲ್ಲಿ, ಹತ್ಯೆಯಾದ ಬಾಲಕಿಯ ತಾಯಿ ಸಿಬಿಐನಿಂದ ಮರುತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದರು. ಆಗಸ್ಟ್ 2024ರಲ್ಲಿ, ಹೈಕೋರ್ಟ್ ಅವರ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತಾದರೂ, ಹೆಚ್ಚಿನ ತನಿಖೆಯ ಅಗತ್ಯವಿರುವ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು.

ನನ್ನ ಮಗಳಿಗೆ ನ್ಯಾಯ ಒದಗಿಸಿಕೊಡಿ - ಮೃತ ಬಾಲಕಿಯ ತಾಯಿ ಮನವಿ: ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ, ನೊಂದ ತಾಯಿ ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿದ್ದಾರೆ.

"ಹಿಂದಿನ ಯಾವುದೇ ಅಧಿಕಾರಿಗಳಿಲ್ಲದೆ, ಹೊಸದಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ನನ್ನ ಮಗಳಿಗೆ ನ್ಯಾಯ ಒದಗಿಸಿಕೊಡಿ" ಎಂದು ಅವರು ರಾಜ್ಯ ಸರ್ಕಾರವನ್ನು ವಿನಂತಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶದ ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಭಾವುಕರಾಗಿ ತಮ್ಮ ಅಳಲನ್ನು ತೋಡಿಕೊಂಡರು.

"ಈ ಹಿಂದೆ ತನಿಖೆ ನಡೆಸಿದ ಅಧಿಕಾರಿಗಳು ಯಾರೂ ಈ ಹೊಸ ತನಿಖಾ ತಂಡದಲ್ಲಿ ಇರಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ. ಆದ್ದರಿಂದ ಸರ್ಕಾರವು ದಕ್ಷ ಮತ್ತು ಹೊಸ ಅಧಿಕಾರಿಗಳನ್ನು ನೇಮಕ ಮಾಡಿ, ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸಬೇಕು. ನಿಮ್ಮ ಸ್ವಂತ ಮಗಳೆಂದು ಭಾವಿಸಿ, ಆಕೆಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ಕೈಮುಗಿದು ಬೇಡಿಕೊಳ್ಳುತ್ತೇನೆ" ಎಂದು ಬಾಲಕಿಯ ತಾಯಿ ಭಾವುಕರಾಗಿ ನುಡಿದರು.

ಇವುಗಳನ್ನೂ ಓದಿ: