ಅಥಣಿಯ ಕೋಹಳ್ಳಿಯಲ್ಲಿ ಕಾಡುಕೋಣ ಪ್ರತ್ಯಕ್ಷ: ಗಾಯಗೊಂಡ ರೈತ

By ETV Bharat Karnataka Team

Published : Feb 21, 2024, 9:43 AM IST

Updated : Feb 21, 2024, 12:23 PM IST

thumbnail
ಚಿಕ್ಕೋಡಿ/ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಂಗಳವಾರ ಮುಂಜಾನೆಯಿಂದಲೇ ಗ್ರಾಮದಲ್ಲಿ ಕಾಡುಕೋಣ ಕಾಣಿಸಿಕೊಂಡು ಎದುರಿಗೆ ಬಂದವರ ಮೇಲೆ ದಾಳಿ ನಡೆಸುತ್ತಿದೆ. ಕೋಣವನ್ನು ಹಿಡಿಯಲು ಗ್ರಾಮದ ರೈತರು, ಅಥಣಿ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಯಾಚರಣೆಯಲ್ಲಿ, ರೈತ ದತ್ತು ಕಾಂಡೆ ಎಂಬುವರ ಮೇಲೆ ಕೋಣ ದಾಳಿ ನಡೆಸಿದ್ದು, ಗಾಯಗೊಂಡಿದ್ದಾರೆ.ಗಾಯಾಳುವನ್ನು ಐಗಳಿ ಗ್ರಾಮದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ಫಲಕಾರಿಯಾಗಿದ್ದು, ರೈತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನಿನ್ನೆ ಮುಂಜಾನೆಯಿಂದಲೇ ಕೋಣವನ್ನು ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ರೈತರ ಜಮೀನುಗಳಲ್ಲಿ ಅಡ್ಡಾದಿಡ್ಡಿ ಓಡಾಟ ನಡೆಸಿ ವಿವಿಧ ಬೆಳೆಗಳನ್ನು ನಾಶ ಮಾಡಿದೆ. ರಾತ್ರಿ ಆಗುತ್ತಿದ್ದಂತೆ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇಂದು ಕಾರ್ಯಾಚರಣೆ ಮುಂದುವರಿಯಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಾಣಿಗೇರ ಮಾಹಿತಿ ನೀಡಿದ್ದಾರೆ.ಕಳೆದ ವರ್ಷವೂ ಕಾಣಿಸಿಕೊಂಡಿತ್ತು ಕಾಡುಕೋಣ: ಕೋಹಳ್ಳಿ ಗ್ರಾಮ ಸಂಪೂರ್ಣವಾಗಿ ಮಳೆಯಾಶ್ರಿತ ಜಮೀನು ಪ್ರದೇಶ. ಇಲ್ಲಿ ಬಯಲು ಪ್ರದೇಶ ಹೆಚ್ಚಾಗಿದೆ. ಗ್ರಾಮದ ಸುತ್ತಮುತ್ತಲು ಯಾವುದೇ ಕಾಡು ಪ್ರದೇಶ ಇಲ್ಲ. ಆದರೂ ಈ ಗ್ರಾಮಕ್ಕೆ ಕಳೆದ ವರ್ಷ ಒಂದು ಕಾಡುಕೋಣ ಬಂದು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ವರ್ಷವೂ ಕಾಡುಕೋಣ ಪ್ರತ್ಯಕ್ಷವಾಗಿ ಗ್ರಾಮದಲ್ಲಿ ಭಯ ಹುಟ್ಟಿಸಿದೆ. ಖಾನಾಪುರ ಕಾಡು ಪ್ರದೇಶದಿಂದ ಈ ಕಾಡುಕೋಣ ಬಂದಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಕೋಣವನ್ನು ಸುರಕ್ಷಿತವಾಗಿ ಸೆರೆಹಿಡಿದು, ಅರಣ್ಯ ಪ್ರದೇಶಕ್ಕೆ ಬಿಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಮತದಾರರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೃತಘ್ಞತೆ
Last Updated : Feb 21, 2024, 12:23 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.