ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು: ಅರಣ್ಯ ಇಲಾಖೆ ವಿರುದ್ಧ ಬೃಹತ್​ ಪ್ರತಿಭಟನೆ

By ETV Bharat Karnataka Team

Published : Feb 17, 2024, 3:00 PM IST

thumbnail

ಪುಲ್ಪಲ್ಲಿ (ಕೇರಳ): ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು ಖಂಡಿಸಿ ವಯನಾಡ್ ನಿವಾಸಿಗಳು ಶನಿವಾರ ಅರಣ್ಯ ಇಲಾಖೆಯ ವಿರುದ್ಧ ಬೃಹತ್​ ಪ್ರತಿಭಟನೆ ನಡೆಸಿದರು. ಕಾಡಾನೆ ದಾಳಿಗೆ ಬಲಿಯಾದ ವಕ್ತಿಯ ಶವಸಂಸ್ಕಾರ ಮಾಡಲು ಪ್ರತಿಭಟನಾಕಾರರು ನಿರಾಕರಿಸಿದರು. ಪುಲ್ಪಲ್ಲಿ ಬಸ್ ನಿಲ್ದಾಣದ ಬಳಿ ಪಾರ್ಥಿವ ಶರೀರ ಇರಿಸಿ ಪ್ರತಿಭಟನೆಯನ್ನು ಮುಂದುವರೆಸಿದರು. ಶುಕ್ರವಾರದಂದು ತಾತ್ಕಾಲಿಕ ಪ್ರವಾಸಿ ಮಾರ್ಗದರ್ಶಿ ಪಾಲ್ ಅವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು.

ಇಂದು ಬೆಳಗ್ಗೆ ಪುಲ್ಪಲ್ಲಿ ಪಕ್ಕಂ ಮೂಲದ ಪಾಲ್ ಅವರ ಮೃತ ದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಅಂತಿಮ ವಿಧಿವಿಧಾನಕ್ಕಾಗಿ ಪುಲ್ಪಲ್ಲಿಗೆ ತರಲಾಯಿತು. ಆದರೆ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಮೃತದೇಹವನ್ನು ರಸ್ತೆಯಲ್ಲಿ ಇರಿಸಿ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿತ್ತು.

ಜೊತೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಅರಣ್ಯ ಇಲಾಖೆ ಜೀಪ್ ಮೇಲೆ ದಾಳಿ ಮಾಡಿ ಕಿಡಿಕಾರಿದರು. ಜೀಪಿನ ಗಾಜು ಒಡೆದು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಹುಲಿ ದಾಳಿಗೆ ಬಲಿಯಾದ ಹಸುವಿನ ಶವವನ್ನು ತಂದು ಪ್ರತಿಭಟನೆ ಮುಂದುವರಿಸಿದರು.

ಪ್ರತಿಭಟನಾಕಾರರು ಹಸುವಿನ ಶವವನ್ನು ಅರಣ್ಯ ಇಲಾಖೆ ಜೀಪಿನ ಮೇಲೆ ಇಟ್ಟು ಸರಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಹಲವು ಗಂಟೆಗಳ ಕಾಲ ಮುಂದುವರೆಯಿತು. ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸರ ವಿರುದ್ಧವೂ ಘೋಷಣೆಗಳು ಮೊಳಗಿದವು.

ಇದನ್ನೂ ಓದಿ: ಕಾಟನ್​​​ ಕ್ಯಾಂಡಿ ನಿಷೇಧಿಸಿದ ತಮಿಳುನಾಡು: ಈ ಕಾರಣಕ್ಕೆ ಬ್ಯಾನ್​

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.