ETV Bharat / state

ಯುವಕನಿಗೆ ಅಪಾರ್ಟ್​​ಮೆಂಟ್​​ ಸೆಕ್ಯೂರಿಟಿ ಗಾರ್ಡ್​ಗಳಿಂದ ಹಲ್ಲೆ: ಪ್ರಕರಣ ದಾಖಲು

author img

By ETV Bharat Karnataka Team

Published : Feb 21, 2024, 10:24 AM IST

ಯುವಕನ ಮೇಲೆ ಅಪಾರ್ಟ್​​ಮೆಂಟ್​​ ಸೆಕ್ಯೂರಿಟಿ ಗಾರ್ಡ್​ಗಳು ದೊಣ್ಣೆಯಿಂದ ಥಳಿಸಿರುವ ಬಗ್ಗೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

youth-assaulted-by-apartment-security-guards
ಯುವಕನಿಗೆ ಅಪಾರ್ಟ್​​ಮೆಂಟ್​​ ಸೆಕ್ಯೂರಿಟಿ ಗಾರ್ಡ್​ಗಳಿಂದ ಹಲ್ಲೆ: ಪ್ರಕರಣ ದಾಖಲು

ಯಲಹಂಕ : ಅಪಾರ್ಟ್​​ಮೆಂಟ್​​ಗೆ ಸ್ನೇಹಿತನನ್ನು ಡ್ರಾಪ್ ಮಾಡಲು ಬಂದ ಯುವಕನ ಮೇಲೆ ಸೆಕ್ಯೂರಿಟಿ ಗಾರ್ಡ್​​ಗಳು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಯಲಹಂಕ ತಾಲೂಕಿನ ಮಾರಸಂದ್ರ ಬಳಿ ನಡೆದಿದೆ. ಘಟನೆಯ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ಇದೇ ವೇಳೆ, ಹೊಡೆಯುವ ಅಧಿಕಾರವನ್ನು ನಿಮಗೆ ಕೊಟ್ಟಿದ್ದು ಯಾರು? ಎಂದು ಸಾರ್ವಜನಿಕರು ಸೆಕ್ಯೂರಿಟಿ ಗಾರ್ಡ್​​ಗಳಿಗೆ ಪ್ರಶ್ನೆ ಮಾಡಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.

ಮಾರಸಂದ್ರ ಬಳಿ ಇರುವ ಪ್ರಾವಿಡೆಂಟ್ ವೆಲ್ವರ್ಥ್​​​​​ ಸಿಟಿ ಅಪಾರ್ಟ್​ಮೆಂಟ್​ನಲ್ಲಿ ಫೆಬ್ರವರಿ 18ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರ್ಚನ್ (19) ಎಂಬ ಯುವಕನಿಗೆ ಸೆಕ್ಯೂರಿಟಿ ಗಾರ್ಡ್​ಗಳು ದೊಣ್ಣೆಯಿಂದ ಥಳಿಸಿದ್ದಾರೆ. ಅರ್ಚನ್ ದೊಡ್ಡಬಳ್ಳಾಪುರ ನಗರ ಹೊರವಲಯದ ಪಾಲನಜೋಗಿಹಳ್ಳಿ ನಿವಾಸಿಯಾಗಿದ್ದು, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂದು ಸ್ನೇಹಿತ ರಫಿಯನ್ನು ಡ್ರಾಪ್ ಮಾಡಲು ಅಪಾರ್ಟ್​ಮೆಂಟ್ ಬಳಿ ಹೋಗಿದ್ದ.

ಈ ವೇಳೆ ಅರ್ಚನ್ ಮತ್ತು ಅಪಾರ್ಟ್​​ಮೆಂಟ್​​ನಲ್ಲಿರುವ ನಿತೀಶ್​​ ಹಾಗೂ ಆತನ ಸ್ನೇಹಿತರ ಜೊತೆ ಜಗಳವಾಗಿದೆ. ತಕ್ಷಣವೇ ಅರ್ಚನ್ ಬೈಕ್ ತೆಗೆದುಕೊಂಡು ಅಲ್ಲಿಂದ ಹೊರಗೆ ಬರಲು ಪ್ರಯತ್ನಿಸಿದ್ದಾನೆ. ಈ ವೇಳೆ, ಸೆಕ್ಯೂರಿಟಿ ಆಫೀಸರ್​ ಮಂಜುನಾಥ್ ಮತ್ತು 10 ಮಂದಿ ಸೆಕ್ಯೂರಿಟಿ ಗಾರ್ಡ್​ಗಳು ಯುವಕನ ಮೇಲೆ ಮನಸ್ಸೋ ಇಚ್ಚೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲಿಯೇ ಇದ್ದ ಸ್ಥಳೀಯರು ಅರ್ಚನ್​ನನ್ನು ಅಲ್ಲಿಂದ ಪಾರು ಮಾಡಿ, ಹೊರಗೆ ಕಳಿಸಿದ್ದಾರೆ. ಅಲ್ಲದೆ, ಯುವಕನ ಮೇಲೆ ಹಲ್ಲೆ ನಡೆಸುವ ಅಧಿಕಾರವನ್ನು ಸೆಕ್ಯೂರಿಟಿ ಗಾರ್ಡ್​ಗಳಿಗೆ ಕೊಟ್ಟಿದ್ಯಾರು ಎಂದು ಜನರು ಪ್ರಶ್ನಿಸಿದ್ದಾರೆ.

ಇದೇ ವೇಳೆ, ನೀನು ಸ್ಲಮ್ ಹುಡುಗ, ಇಲ್ಲಿಗ್ಯಾಕೆ ಬರ್ತಿಯಾ, ಇನ್ನೊಮ್ಮೆ ಬಂದರೆ ಕೊಲ್ಲುವುದಾಗಿ ಸೆಕ್ಯೂರಿಟಿ ಗಾರ್ಡ್​ಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಘಟನೆ ಸಂಬಂಧ ಅರ್ಚನ್ ಸಹೋದರ ದರ್ಶನ್ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಾಗರ: ಪತ್ನಿ ಜೊತೆ ಮಾತನಾಡಿದ ಎದುರು ಮನೆ ಯುವಕನಿಗೆ ಚಾಕು ಇರಿದ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.