ETV Bharat / state

ಪುತ್ರನ ಅಂತ್ಯಕ್ರಿಯೆಗೆ ಪರದಾಡುತ್ತಿದ್ದ ತಾಯಿಗೆ ಯಂಗ್ ಬೆಲಗಾಮ್ ಫೌಂಡೇಶನ್ ನೆರವು: ಸರ್ಕಾರದ 2 ಸಾವಿರ ರೂ. ನೆನೆದ ಅಜ್ಜಿ

author img

By ETV Bharat Karnataka Team

Published : Feb 17, 2024, 10:58 PM IST

Updated : Feb 18, 2024, 10:29 PM IST

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗ ವಿಶ್ವನಾಥ ಅಂತ್ಯಕ್ರಿಯೆಗೆ ಹಣ ಇಲ್ಲದ್ದರಿಂದ ಮರಕುಂಬಿ ಗ್ರಾಮದ ತಾಯಿ‌ ನೀಲವ್ವ ದಿಕ್ಕು ತೋಚದಂತಾಗಿ ಸಹಾಯಕ್ಕಾಗಿ ಅಂಗಲಾಚಿದ್ದರು. ಈ ವೇಳೆ ಅಜ್ಜಿ ನೆರವಿಗೆ ಬಂದ ಯಂಗ್ ಬೆಲಗಾಮ್ ಫೌಂಡೇಶನ್ ಯುವಕರು ಅಂತ್ಯಕ್ರಿಯೆ ಕೈಗೊಂಡು ವಿಧಿ ವಿಧಾನ ನೆರವೇರಿಸಿದರು.

mother grieving the death of her son
ಪುತ್ರನ ಸಾವಿನಿಂದಾಗಿ ದು:ಖಿಸುತ್ತಿರುವ ತಾಯಿ ನೀಲವ್ವ

ಪುತ್ರನ ಅಂತ್ಯಕ್ರಿಯೆಗೆ ಪರದಾಡುತ್ತಿದ್ದ ತಾಯಿಗೆ ಯಂಗ್ ಬೆಲಗಾಮ್ ಫೌಂಡೇಶನ್ ನೆರವು

ಬೆಳಗಾವಿ: ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಅಂತ್ಯಕ್ರಿಯೆಗೆ ದುಡ್ಡಿಲ್ಲದೇ ಪರದಾಡುತ್ತಿದ್ದ ತಾಯಿಗೆ ಬೆಳಗಾವಿಯ ವಿಜಯ ಮೋರೆ ಅವರ ಯಂಗ್ ಬೆಲಗಾಮ್ ಫೌಂಡೇಶನ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಹೌದು, ಸವದತ್ತಿ ತಾಲೂಕು ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಅನಾರೋಗ್ಯದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಮೃತ ವಿಶ್ವನಾಥನ ತಾಯಿ‌ ನೀಲವ್ವ ದಿಕ್ಕು ತೋಚದಂತಾಗಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಗ ಸಹಾಯಕ್ಕೆ ಬಂದಿದ್ದೇ ಯಂಗ್ ಬೆಲಗಾಮ್ ಫೌಂಡೇಶನ್. ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಆ ಅಜ್ಜಿಗೆ ಸಾಂತ್ವನ ಹೇಳಿ ನಿಮ್ಮ ಜೊತೆ ನಾವಿದ್ದೇವೆ. ನಾವೇ ಮುಂದೆ ನಿಂತು ನಿಮ್ಮ ಮಗನ ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದು ಹೇಳುವ ಮೂಲಕ ಅಜ್ಜಿಗೆ ಧೈರ್ಯ ತುಂಬಿದ್ದಾರೆ.

ನಂತರ ಮಹಾನಗರ ಪಾಲಿಕೆ ಆಂಬ್ಯುಲೆನ್ಸ್​ನಲ್ಲಿ ಸದಾಶಿವನಗರದ ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಹೋದ ಯಂಗ್ ಬೆಲಗಾಮ್ ಫೌಂಡೇಶನ್ ಯುವಕರು, ವಿಧಿ ವಿಧಾನ ಪೂರ್ಣಗೊಳಿಸಿದರು. ಬಳಿಕ ತಮ್ಮ ಕೈಯಾರೆ ತಂಡದ ಪದಾಧಿಕಾರಿಗಳು ಅಗ್ನಿ ಸ್ಪರ್ಶ ಮಾಡಿ ಮಾದರಿಯಾದರು. ಈ ವೇಳೆ ಮೃತ ವಿಶ್ವನಾಥನ ತಾಯಿ ನೀಲವ್ವ ಮಗನ ನೆನೆದು ಕಣ್ಣೀರು ಹಾಕಿದರು. ಅಲ್ಲದೇ ಈ ಯುವಕರ ಸಹಾಯಕ್ಕೆ ಕೃತಜ್ಞತೆ ತಿಳಿಸಿದರು.

ಈ ಮೊದಲು ಈಟಿವಿ ಭಾರತ ಜೊತೆಗೆ ಮಾತನಾಡಿದ ಅಜ್ಜಿ ನೀಲವ್ವ, ಗಂಡನ ಕಳೆದುಕೊಂಡು ಬಿದ್ದ ಮನೆಯಲ್ಲಿ ವಾಸವಿದ್ದೆವು. ಕೂಲಿ ನಾಲಿ ಮಾಡಿಕೊಂಡು ಜೊತೆಗಿದ್ದ ಮಗ ನೋಡಿದ್ರೆ ಈಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಈ ಬೆಳಗಾವಿ ಯುವಕರು ನನ್ನ ಸಹಾಯಕ್ಕೆ ಬಂದಿದ್ದಾರೆ. ಅವರಿಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದರು.

ಫೌಂಡೇಶನ್​ದಿಂದ ಈವರೆಗೆ 948 ಮೃತದೇಹಗಳ ಅಂತ್ಯಕ್ರಿಯೆ: ಅಂತ್ಯಕ್ರಿಯೆಗೆ ನೆರವು ನೀಡಿದ ಅಲನ್ ಮೋರೆ ಮಾತನಾಡಿ, ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಅಜ್ಜಿಯ ಮಗ ವಿಶ್ವನಾಥ ಮೃತರಾಗಿದ್ದರು. ಆಗ ಅಜ್ಜಿ ನಮ್ಮ ತಂದೆ ಮಾಜಿ ಮೇಯರ್ ವಿಜಯ ಮೋರೆ ಅವರಿಗೆ ತಿಳಿಸಿದ್ದರು. ನಮ್ಮ ತಂಡ ಆಗಮಿಸಿ ಮೃತ ಯುವಕನ ಅಂತ್ಯಕ್ರಿಯೆ ಮಾಡಿದ್ದೇವೆ. ಆ ಅಜ್ಜಿಗೆ ಸಂಬಂಧಿಕರು ಯಾರೂ ಇಲ್ಲ. ಕೈಯಲ್ಲಿ ಹಣವೂ ಇರಲಿಲ್ಲ. ಈವರೆಗೆ 948 ಮೃತದೇಹಗಳ ಅಂತ್ಯಕ್ರಿಯೆಗೆ ಸಹಾಯ ಮಾಡಿದ್ದು, ಈ ಸೇವೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ 2 ಸಾವಿರ ರೂ. ನೆನೆದ ಅಜ್ಜಿ: ಮೃತ ಪುತ್ರನಿಗೆ ಅಂತಿಮ‌ ನಮನ ಸಲ್ಲಿಸುವ ವೇಳೆ ಅಜ್ಜಿ ನೀಲವ್ವ ಸಿದ್ದರಾಮಯ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ 2 ಸಾವಿರ ರೂ. ನೆನೆಸಿಕೊಂಡರು. ಪ್ರತಿ ತಿಂಗಳು 2 ಸಾವಿರ ರೂ. ಬರುತ್ತೆ. ಅದರಲ್ಲಿ ನಮ್ಮ ಅವ್ವನ ಹೊಟ್ಟೆ ತುಂಬುತ್ತೆ ಎಂದು ಮಗ ಹೇಳಿದ್ದ ಎಂದು ಕಣ್ಣೀರು ಹಾಕಿದರು. ಪುತ್ರ ಅಗಲಿದರೂ ಸಿದ್ದರಾಮಯ್ಯ ಅವರ ಗ್ಯಾರಂಟಿ ಹಣ ನನ್ನ ಕೈ ಹಿಡಿಯುತ್ತೆ ಎಂಬ ಅರ್ಥದಲ್ಲಿ ಅಜ್ಜಿ ಮಾತಾಡಿದ್ದು, ಗೃಹ ಲಕ್ಷ್ಮೀ ಯೋಜನೆ ಕಷ್ಟದಲ್ಲಿರುವ ಜನರಿಗೆ ಯಾವ ರೀತಿ ಸಹಾಯಕ್ಕೆ ಬಂದಿದೆ ಎನ್ನುವುದನ್ನು ದು:ಖದಲ್ಲಿರುವ ಅಜ್ಜಿ ಹೇಳಿದರು.

ಇದನ್ನೂಓದಿ:ದಾವಣಗೆರೆ: ಅಡಿಕೆ, ಬಾಳೆ ತೋಟಕ್ಕೆ ಕೊಳ್ಳಿ ಇಟ್ಟ ಕೀಚಕರು; ಸುಟ್ಟು ಕರಕಲಾದ ಫಸಲು ಕಂಡು ರೈತ ಕಂಗಾಲು

Last Updated : Feb 18, 2024, 10:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.