ETV Bharat / state

ಏಳನೇ ವೇತನ ಆಯೋಗ ತನ್ನ ವರದಿಯಲ್ಲಿ ಮಾಡಿದ ಪ್ರಮುಖ ಶಿಫಾರಸುಗಳೇನು?

author img

By ETV Bharat Karnataka Team

Published : Mar 16, 2024, 3:28 PM IST

ಏಳನೇ ವೇತನ ಆಯೋಗ ತನ್ನ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದೆ. ವರದಿಯಲ್ಲಿ ಆಯೋಗ ಸುಮಾರು 30 ವಿವಿಧ ಶಿಫಾರಸುಗಳನ್ನು ಮಾಡಿದೆ.

what-are-the-major-recommendations-of-the-seventh-pay-commission-report
ಏಳನೇ ವೇತನ ಆಯೋಗ ತನ್ನ ವರದಿಯಲ್ಲಿ ಮಾಡಿದ ಪ್ರಮುಖ ಶಿಫಾರಸುಗಳೇನು?

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ಏಳನೇ ವೇತನ ಆಯೋಗ ತನ್ನ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದೆ. ಆರ್ಥಿಕ ಇಲಾಖೆಯ ಜೊತೆ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ವರದಿಯಲ್ಲಿ ಆಯೋಗ ಸುಮಾರು 30 ವಿವಿಧ ಶಿಫಾರಸುಗಳನ್ನು ಮಾಡಿದೆ.

ಆಯೋಗ ನೀಡಿದ ಪ್ರಮುಖ ಶಿಫಾರಸು ಏನು?:

  • 7ನೇ ರಾಜ್ಯ ವೇತನ ಆಯೋಗವು ಶೇ.31 ತುಟ್ಟಿ ಭತ್ಯೆಯನ್ನು ವಿಲೀನಗೊಳಿಸುವ ಮೂಲಕ ಮತ್ತು ಶೇ. 27.50 ರಷ್ಟು ಫಿಟ್​ಮೆಂಟ್ ಪ್ರಯೋಜನವನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿಂದ ರೂ.27,000ಕ್ಕೆ ಪರಿಷ್ಕರಿಸಲು ಶಿಫಾರಸು ಮಾಡಿದೆ.
  • ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ ನಡುವೆ ಅಸ್ತಿತ್ವದಲ್ಲಿರುವ 1:8. 86ರ ಅನುಪಾತವನ್ನು ಹೆಚ್ಚು ಕಡಿಮೆ ಹಾಗೇ ಉಳಿಸಿಕೊಳ್ಳುವುದು ಮತ್ತು ಗರಿಷ್ಠ ವೇತನವನ್ನು ರೂ.2,41,200 ಗೆ ನಿಗದಿಪಡಿಸಲು ಆಯೋಗವು ಶಿಫಾರಸು ಮಾಡಿದೆ.
  • ಹೊಸ ವೇತನ ಶ್ರೇಣಿಗಳನ್ನು 1/07/2022 ರಿಂದ ಕಾಲ್ಪನಿಕವಾಗಿ ಅನ್ವಯಿಸುತ್ತದೆ. ಅನುಷ್ಠಾನಗೊಳಿಸುವ ನೈಜ್ಯ ದಿನಾಂಕವನ್ನು ರಾಜ್ಯ ಸರ್ಕಾರ ನಿರ್ಧರಿಸುವುದು ಎಂದು ಆಯೋಗವು ಶಿಫಾರಸು ಮಾಡಿದೆ.
  • ನೌಕರರ ಕುಟುಂಬದ ಕನಿಷ್ಠ ಬಳಕೆ ವೆಚ್ಚದ ಲೆಕ್ಕಾಚಾರಕ್ಕಾಗಿ ಬಳಸಲಾಗುವ ಅಕ್ರೋಯಾ ಸೂತ್ರವನ್ನು ಚಾಲ್ತಿಯಲ್ಲಿರುವ 'T' ಮತ್ತು '0.8' ರ ಪ್ರಮಾಣದ ಬದಲಿಗೆ ಪ್ರಾತಿನಿಧಿಕ ಕುಟುಂಬದ ವಯಸ್ಕ ಪುರುಷ ಮತ್ತು ಮಹಿಳಾ ಸದಸ್ಯರಿಗೆ '1' ಸಮಾನ ಪ್ರಮಾಣವನ್ನು ನೀಡುವ ಮೂಲಕ, ಎರಡೂ ಲಿಂಗಗಳನ್ನು ಸಮಾನವಾಗಿ ಪರಿಗಣಿಸಿ, ಸ್ವಲ್ಪ ಮಟ್ಟಿಗೆ ಮಾರ್ಪಡಿಸಲು ಶಿಫಾರಸು.
  • 25 ಪರಿಷ್ಕೃತ ಪ್ರತ್ಯೇಕ (individual) ವೇತನ ಶ್ರೇಣಿಗಳೊಂದಿಗೆ, ಪರಿಷ್ಕೃತ ಮುಖ್ಯ ಶ್ರೇಣಿಯನ್ನು ರೂಪಿಸಲಾಗಿದೆ. ಚಾಲ್ತಿಯಲ್ಲಿರುವ ರೂ.400 ರಿಂದ ರೂ.3,100 ರ ಬದಲಿಗೆ ವಾರ್ಷಿಕ ಬಡ್ತಿ ದರಗಳು ಮುಖ್ಯ ಶ್ರೇಣಿಯಾದ್ಯಂತ ರೂ.650 ರಿಂದ ರೂ.5,000 ರದವರೆಗೆ ಆಗಿರುತ್ತದೆ.
  • ಪ್ರಸ್ತುತ ಜಾರಿಯಲ್ಲಿರುವಂತೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ 1ನೇ ಜನವರಿ ಅಥವಾ 1ನೇ ಜುಲೈನಲ್ಲಿ ವಾರ್ಷಿಕ ಬಡ್ಡಿ ದರಗಳನ್ನು ಮಂಜುರೂ ಮಾಡುವುದನ್ನು ಮುಂದುವರೆಸಲು ಆಯೋಗವು ಶಿಫಾರಸು ಮಾಡಿದೆ.
  • ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕರಿಸಿದ ರೀತಿಯಲ್ಲಿಯೇ ಪರಿಷ್ಕರಿಸಬೇಕು.
  • ರಾಜ್ಯ ಸರ್ಕಾರ ಕೇಂದ್ರದ ವೇತನ ರಚನೆ ಅಳವಡಿಸಿಕೊಳ್ಳಲು ಒಂದು ವಿಧಾನವನ್ನು ಆಯೋಗವು ರೂಪಿಸಿದೆ. ಆದಾಗ್ಯೂ, ಪ್ರಸ್ತುತ ರಾಜ್ಯ ಸರ್ಕಾರವು ಮುಖ್ಯ ಶ್ರೇಣಿ ಮತ್ತು ವಿಭಜಿತ ಪ್ರತ್ಯೇಕ ವೇತನ ಶ್ರೇಣಿಗಳನ್ನು ಒಳಗೊಂಡಿರುವ ಅಸ್ತಿತ್ವದಲ್ಲಿರುವ ವೇತನದ ಮಾದರಿಯನ್ನು ರಾಜ್ಯ ಸರ್ಕಾರ ಉಳಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದಿನ ವೇತನ ಪರಿಷ್ಕರಿಸಿದಾಗ ರಾಜ್ಯ ಸರ್ಕಾರವು ಕೇಂದ್ರೀಯ ವೇತನ ರಚನೆಯ ಆಧಾರದ ಮೇಲೆ ಪರ್ಯಾಯ ರಚನೆಯನ್ನು ಅಳವಡಿಸಿಕೊಳ್ಳಲು ಸೂಕ್ತ ಸಮಯವಾಗಿರುತ್ತದೆ.
  • ಮಾಸಿಕ ಪಿಂಚಣಿ ಪ್ರಮಾಣವು ಅಂತಿಮವಾಗಿ ಪಡೆದ ಮೂಲ ವೇತನದ ಶೇ.50 ರಷ್ಟರಲ್ಲಿಯೇ ಮುಂದುವರೆಯುತ್ತದೆ ಮತ್ತು ಕುಟುಂಬ ಪಿಂಚಣಿಯು ಅಂತಿಮವಾಗಿ ಪಡೆದ ಮೂಲ ವೇತನದ ಶೇ.30 ರಷ್ಟರಲ್ಲಿ ಮುಂದುವರಿಯುತ್ತದೆ. ಅದರಂತೆ, ಕನಿಷ್ಠ ಪಿಂಚಣಿಯನ್ನು ರೂ.13,500 (ಕನಿಷ್ಠ ವೇತನ ರೂ. 27,000ರ ಶೇ.50ರಷ್ಟು ) ಮತ್ತು ಗರಿಷ್ಠ ಪಿಂಚಣಿಯನ್ನು 1,20,600 (ಗರಿಷ್ಠ ವೇತನ 2,41,200 ರೂ.ನ ಶೇ.50 ರಷ್ಟು) ಪರಿಷ್ಕರಿಸುವುದು.
  • 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ.10 ರಷ್ಟನ್ನು ಆಯೋಗವು ಶಿಫಾರಸು ಮಾಡಿದೆ.
  • ಪಿಂಚಣಿದಾರರು ಆತ ಅಥವಾ ಆಕೆ ಮರಣ ಹೊಂದಿದಲ್ಲಿ, ಅವರ ಅಂತ್ಯಕ್ರಿಯೆ ವೆಚ್ಚಗಳನ್ನು ಭರಿಸಲು ರೂ.10,000 ಗಳ ಮೊತ್ತವನ್ನು ಪಿಂಚಣಿದಾರರ ನಾಮ ನಿರ್ದೇಶಿತನಿಗೆ ಪಾವತಿಸಲು ಶಿಫಾರಸು ಮಾಡಲಾಗಿದೆ.
  • ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು, 2002 ರಲ್ಲಿ ಮಹಿಳಾ ಸರ್ಕಾರಿ ನೌಕರರು / ಪಿಂಚಣಿದಾರರು ತಮ್ಮ ಮಗು / ಮಕ್ಕಳನ್ನು ಕೆಲವು ಸಂದರ್ಭಗಳಲ್ಲಿ ಸಂಗಾತಿಯ ಬದಲಿಗೆ ಕುಟುಂಬ ಪಿಂಚಣಿಗೆ ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಬಹುದು ಎಂದು ಪ್ರಸ್ತಾಪಿಸಿದೆ.
  • ವೃಂದ ಸಿ ಮತ್ತು ಡಿ ನೌಕರರಿಗೆ ರಾಜ್ಯ ಗುಂಪು ವಿಮಾ ಯೋಜನೆಯ ಮಾಸಿಕ ವಂತಿಗೆಯನ್ನು ಶೇ.100 ರಷ್ಟು ಮತ್ತು ವೃಂದ ಎ ಮತ್ತು ಬಿ ನೌಕರರಿಗೆ ಶೇ.50 ರಷ್ಟು ಹೆಚ್ಚಿಸುವುದು.
  • ಬಿಬಿಎಂಪಿ ವ್ಯಾಪ್ತಿಯೊಳಗಿನ ವೃಂದ ಎ ಮತ್ತು ಬಿ ನೌಕರರಿಗೆ ಮಾಸಿಕ ಅಸ್ತಿತ್ವದಲ್ಲಿರುವ ನಗರ ಪರಿಹಾರ ಭತ್ಯೆಯನ್ನು ರೂ.600 ರಿಂದ ರೂ.900 ಕ್ಕೆ ಮತ್ತು ವೃಂದ ಸಿ ಮತ್ತು ಡಿ ನೌಕರರಿಗೆ ಮಾಸಿಕ ರೂ.500 ರಿಂದ ರೂ.750ಕ್ಕೆ ಹೆಚ್ಚಿಸಲಾಗಿದೆ. ನಗರ ಸಮುಚ್ಚಯಗಳಾದ ಬೆಳಗಾವಿ, ಮಂಗಳೂರು, ಮೈಸೂರು, ಹಾಗೂ ಪುರಸಭೆಗಳಾದ ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರಗಳ ವೃಂದ ಎ ಮತ್ತು ಬಿ ನೌಕರರಿಗೆ ಮಾಸಿಕ ರೂ.450 ರಿಂದ ರೂ.700 ಕ್ಕೆ ಮತ್ತು ವೃಂದ ಸಿ ಮತ್ತು ಡಿ ನೌಕರರಿಗೆ ಮಾಸಿಕ ರೂ.400 ರಿಂದ ರೂ.600 ಗಳಿಗೆ ನಗರ ಪರಿಹಾರ ಭತ್ಯೆಯನ್ನು ಪರಿಷ್ಕರಿಸಿದೆ.
  • ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ರಾಜ್ಯದೊಳಗೆ ಮತ್ತು ಹೊರಗೆ ತಂಗುವುದಕ್ಕಾಗಿ ದಿನಭತ್ಯೆ, ವರ್ಗಾವಣೆ ಅನುದಾನ ಮತ್ತು ಹೊರ ರಾಜ್ಯ ಭತ್ಯೆ (ದೆಹಲಿ ಹೊರತುಪಡಿಸಿ ಇತರ ಸ್ಥಳಗಳಿಗೆ) ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ದರಗಳಿಗಿಂತ ಶೇ.25 ರಷ್ಟನ್ನು ಮೇಲ್ಮುಖವಾಗಿ ಹೆಚ್ಚಿಸಿ ಪರಿಷ್ಕರಿಸಲಾಗಿದೆ.
  • ಇನ್ನು ಮುಂದೆ ಅಗತ್ಯವಿಲ್ಲದ ಹಲವಾರು ಹುದ್ದೆಗಳಿಗೆ ವಿಶೇಷ ಭತ್ಯೆಗಳನ್ನು ರದ್ದುಪಡಿಸಲು ಪೊಲೀಸ್ ಇಲಾಖೆ ಮಾಡಿದ ಪ್ರಸ್ತಾವನೆಗೆ ಆಯೋಗವು ಸಹಮತ ವ್ಯಕ್ತಪಡಿಸಿದೆ.
  • ವಿಶೇಷ ಚೇತನ ನೌಕರರಿಗಾಗಿ ಆಯೋಗ ವಾಹನ ಭತ್ಯೆಯನ್ನು ಕೇವಲ ಅಂಧ ಮತ್ತು ಚಲನವಲನ ವೈಕಲ್ಯತೆಯುಳ್ಳ ವಿಶೇಷ ಚೇತನ ನೌಕರರಿಗೆ ಸೀಮಿತಗೊಳಿಸುವ ಬದಲಾಗಿ ಎಲ್ಲ ವಿಶೇಷ ಚೇತನ ನೌಕರರಿಗೆ ಈ ಸೌಲಭ್ಯವನ್ನು ವಿಸ್ತರಿಸಬೇಕು. ಸರ್ಕಾರಿ ನೌಕರರ ವಿಕಲ ಚೇತನ ಮಕ್ಕಳ ಶಿಕ್ಷಣ ಭತ್ಯೆಯನ್ನು ಪ್ರತಿ ಮಗುವಿಗೆ ತಿಂಗಳಿಗೆ ರೂ.1,000 ರಿಂದ ರೂ.2,000 ಕ್ಕೆ ಹೆಚ್ಚಿಸುವುದು.
  • ಆಂತರಿಕ ದಹನ (ಐಸಿ) ಇಂಜಿನ್ ಹೊಂದಿರುವ ನಾಲ್ಕು ಚಕ್ರದ ವಾಹನಗಳಿಗೆ ಮುಂಗಡವನ್ನು ಈಗಿರುವ ರೂ.3 ಲಕ್ಷದಿಂದ ಗರಿಷ್ಠ ರೂ.6 ಲಕ್ಷಕ್ಕೆ ಹೆಚ್ಚಿಸುವುದು. ಐಸಿ ಇಂಜಿನ್‌ಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳಿಗೆ ಮುಂಗಡವನ್ನು ಈಗಿರುವ ರೂ.50,000 ದಿಂದ ಗರಿಷ್ಠ ರೂ.80,000 ಹೆಚ್ಚಿಸುವುದು.

ಪರಿಸರ ಸ್ನೇಹಿ ವಾಹನ ಉತ್ತೇಜಿಸಲು ಶಿಫರಾಸು:

  • ಆಯೋಗವು ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಶಿಫಾರಸು ಮಾಡಿದೆ. ಬೈಸಿಕಲ್ ಮುಂಗಡವನ್ನು ಗರಿಷ್ಠ ರೂ.10,000 ಕ್ಕೆ ಹೆಚ್ಚಿಸುವುದು. ವಿದ್ಯುತ್ ಚಾಲಿತ ಬೈಸಿಕಲ್‌ಗಳಿಗೆ ಮುಂಗಡವನ್ನು ಗರಿಷ್ಠ ರೂ.30,000 ಕ್ಕೆ ಹೆಚ್ಚಿಸುವುದು.
  • ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಮುಂಗಡವನ್ನು ಗರಿಷ್ಠ ರೂ.1.25 ಲಕ್ಷಕ್ಕೆ ಹೆಚ್ಚಿಸುವುದು. ವಿದ್ಯುತ್ ಚಾಲಿತ ನಾಲ್ಕು ಚಕ್ರದ ವಾಹನಗಳಿಗೆ ಮುಂಗಡವನ್ನು ಗರಿಷ್ಠ ರೂ.10ಲಕ್ಷಕ್ಕೆ ಹೆಚ್ಚಿಸುವುದು‌. ಗಣಕಯಂತ್ರ ಮುಂಗಡವನ್ನು ಗರಿಷ್ಠ ರೂ.60,000 ಕ್ಕೆ ಪರಿಷ್ಕರಿಸುವುದು .
  • ಸೋಲಾರ್ ವಾಟರ್ ಹೀಟರ್, ಸೋಲಾರ್ ಕುಕ್ಕರ್, ಮೊಪೆಡ್ ಮತ್ತು ಮೋಟಾರು ವಾಹನಗಳ ದುರಸ್ತಿ ಮತ್ತು ಉಪಕರಣಗಳಿಗೆ ಮುಂಗಡಗಳನ್ನು ಸ್ಥಗಿತಗೊಳಿಸುವುದು .
  • ವೃಂದ ಎ ನೌಕರರಿಗೆ ಗರಿಷ್ಠ ರೂ.65 ಲಕ್ಷ ಮತ್ತು ಇತರ ನೌಕರರಿಗೆ ರೂ.40 ಲಕ್ಷಗಳ ಗೃಹ ನಿರ್ಮಾಣ ಭತ್ಯೆಯನ್ನು ಪರಿಷ್ಕರಿಸಿದೆ
    ನೌಕರರ ಸೇವಾವಧಿಯಲ್ಲಿ ರಜೆ ಪ್ರಯಾಣ ಭತ್ಯೆಯ ಪ್ರಯೋಜನವನ್ನು ಎರಡು ಬಾರಿಯಿಂದ ಮೂರು ಬಾರಿಗೆ ಹೆಚ್ಚಿಸುವುದು.

ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಶಿಫಾರಸು:

  • ಆಯೋಗ ಕೆಲಸ - ವಿರಾಮ ಸಮತೋಲನವನ್ನು ಸುಧಾರಿಸಲು ಮತ್ತು ಆ ಮೂಲಕ ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ಐದು ದಿನಗಳ ಕೆಲಸದ ವಾರವನ್ನು ಪರಿಚಯಿಸಬೇಕೆಂದು ಶಿಫಾರಸು ಮಾಡಿದೆ.
  • ಇನ್ನು ಪೋಷಕರು ಅಥವಾ ಅತ್ತೆ/ಮಾವಂದಿರು ಅಥವಾ ಕುಟುಂಬದ ಹಿರಿಯರು ಅಥವಾ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಸಣ್ಣ ಮಕ್ಕಳನ್ನು ಆರೈಕೆ ಮಾಡಲು ನೌಕರರಿಗೆ ಆರೈಕೆ ರಜೆ ಎಂಬ ಹೊಸ ಪ್ರಯೋಜನವನ್ನು ಒದಗಿಸಬೇಕೆಂದು ಹಾಗೂ ರಜೆಯ ಅವಧಿಯಲ್ಲಿ ಶೇ.50 ರಷ್ಟು ವೇತನದೊಂದಿಗೆ ಈ ರಜೆಯ ಗರಿಷ್ಠ ಅವಧಿಯು 180 ದಿನಗಳಿಗೆ (6 ತಿಂಗಳುಗಳು) ನಿಗದಿಪಡಿಸಲು ಶಿಫಾರಸು ಮಾಡಿದೆ.
  • ಸೇವೆಗೆ ಸೇರುವ 60 ದಿನಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ಸೇವೆಗೆ ಸೇರುವ ಸಮಯದಲ್ಲಿ ನವಜಾತ ಶಿಶುವಿನ ಆರೈಕೆಯ ಅವಧಿಯಲ್ಲಿ ಇರುವವರಿಗೆ 18 ವಾರಗಳ ಹೆರಿಗೆ ರಜೆಯನ್ನು ಶಿಫಾರಸು ಮಾಡಿದೆ.

ಇದನ್ನೂ ಓದಿ: ಏಳನೇ ವೇತನ ಆಯೋಗದ ವರದಿ ಸಲ್ಲಿಕೆ: ಸರ್ಕಾರಿ ನೌಕರರ ವೇತನ ಶೇ.27.5ರಷ್ಟು ಹೆಚ್ಚಳ, ಕನಿಷ್ಠ ಮೂಲವೇತನದಲ್ಲೂ ಗಣನೀಯ ಏರಿಕೆಗೆ ಶಿಫಾರಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.