ETV Bharat / state

ಲೋಕಸಭೆ ಮಾದರಿಯಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ: ಡಿಸಿಎಂ ಡಿಕೆಶಿ - Council Election

author img

By ETV Bharat Karnataka Team

Published : May 12, 2024, 9:30 PM IST

ಲೋಕಸಭೆ ಇಲೆಕ್ಷನ್ ಮಾದರಿಯಲ್ಲಿಯೇ ವಿಧಾನ ಪರಿಷತ್ ​ಚುನಾವಣೆಯನ್ನೂ ಎದುರಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

CONGRESS MEETING
ಕಾಂಗ್ರೆಸ್​ ನಾಯಕರು (ETV Bharat)

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

ಸಭೆಯಲ್ಲಿ ಪರಿಷತ್ ಚುನಾವಣೆಯ ಅಭ್ಯರ್ಥಿಗಳು, ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಸಚಿವರಾದ ಕೆ.ಎನ್. ರಾಜಣ್ಣ, ಮಧು ಬಂಗಾರಪ್ಪ, ಮುಖಂಡರಾದ ತನ್ವಿರ್ ಸೇಠ್, ಜಿ.ಸಿ. ಚಂದ್ರಶೇಖರ್, ಪುಟ್ಟಣ್ಣ, ಬೇಳೂರು ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಪರಿಷತ್ ಚುನಾವಣೆ ಪೂರ್ವಭಾವಿ ಸಭೆ ಬಗ್ಗೆ ಮಾತನಾಡಿದ ಡಿಸಿಎಂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ''ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಎಲ್ಲ ಮುಖಂಡರೂ ಸೇರಿ ಈ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ'' ಎಂದು ತಿಳಿಸಿದರು. ಲೋಕಸಭೆ ಮಾದರಿಯಲ್ಲೇ ಚುನಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ''ಹೌದು, ಲೋಕಸಭೆ ಚುನಾವಣೆ ಮಾದರಿಯಲ್ಲಿ ಈ ಚುನಾವಣೆ ಎದುರಿಸುತ್ತೇವೆ'' ಎಂದರು.

ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ ಡಿಕೆಶಿ: ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್​​ಗೆ ಮುಂದಿನ ತಿಂಗಳು ನಡೆಯುತ್ತಿರುವ ಚುನಾವಣೆಗೆ ಕೆ.ಕೆ. ಮಂಜುನಾಥ್ ಕುಮಾರ್, ಮರಿತಿಬ್ಬೇಗೌಡ, ಆಯನೂರು ಮಂಜುನಾಥ್ ಹಾಗೂ ಡಾ. ಚಂದ್ರಶೇಖರ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಇವರೆಲ್ಲರಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ನೀಡಿದರು.

ಜೊತೆಗೆ, ವಿಧಾನ ಪರಿಷತ್​​ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ಶ್ರೀನಿವಾಸ್ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸದಾಶಿವನ‌ನಗರ ನಿವಾಸದಲ್ಲಿ ಬಿ ಫಾರಂ ನೀಡಿದ್ದಾರೆ.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ: ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ - JDS Meeting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.