ಇಡೀ ಒಕ್ಕಲಿಗ ಸಮಾಜ ಒಟ್ಟಾಗಿ ಹೋದ್ರೆ ಯಶಸ್ಸು ಸಾಧ್ಯ: ಡಿ ಕೆ ಶಿವಕುಮಾರ್

author img

By ETV Bharat Karnataka Team

Published : Jan 19, 2024, 10:39 PM IST

ಡಿ ಕೆ ಶಿವಕುಮಾರ್

ಬೆಂಗಳೂರು ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಉದ್ಯಮಿ ಒಕ್ಕಲಿಗ ಸಮ್ಮೇಳನವನ್ನು ಉದ್ಘಾಟಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.

ಬೆಂಗಳೂರು: ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದರಂತೆ ನೀವೆಲ್ಲರೂ ಒಟ್ಟಾಗಿ ಚರ್ಚಿಸಿ ಕೆಲಸ ಮಾಡಿದರೆ ಯಶಸ್ಸು ಕಾಣುತ್ತೀರಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಉದ್ಯಮಿ ಒಕ್ಕಲಿಗ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನೀವೆಲ್ಲ ಭೂಮಿ ತಾಯಿ ಮಕ್ಕಳು. ಒಕ್ಕಲಿಗರಾಗಿರುವುದೇ ನಮ್ಮ, ನಿಮ್ಮ ಭಾಗ್ಯ. ಭೂಮಿಗೂ ನಿಮಗೂ ಒಂದು ನಂಟಿದೆ. ಭೂಮಿಯನ್ನು ತಾಯಿ ಎಂದು ಪರಿಗಣಿಸಿರುವವರು ನಾವು. ಈ ಸಮಾಜಕ್ಕೆ ಕೃಷಿಕ, ಕಾರ್ಮಿಕ, ಶಿಕ್ಷಕ, ಸೈನಿಕ ಬಹಳ ಮುಖ್ಯ. ಇವರು ಇದ್ದರಷ್ಟೇ ಸಮಾಜ ಸುಸ್ಥಿರ ಎಂದು ಹೇಳಿದರು.

ಒಕ್ಕಲಿಗ ಸಮಾಜದ ಉದ್ಯಮಿಗಳೆಲ್ಲರೂ ಇಲ್ಲಿ ಸೇರಿರುವುದು ಉತ್ತಮ ಬೆಳವಣಿಗೆ. ಹಿಂದೆಯೇ ಆಗಬೇಕಿದ್ದ ಸಮಾವೇಶ ಈಗಲಾದರೂ ನಡೆಯುತ್ತಿರುವುದು ಸಂತೋಷದ ವಿಚಾರ. ನೀವು ನಿಮ್ಮ ರಂಗದಲ್ಲಿ ಬೆಳೆಯಿರಿ. ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ನನಗೆ ನಿಮ್ಮ ಮುಂದೆ ನಿಂತು ಮಾತನಾಡುವ ಶಕ್ತಿ ಬಂದಿದೆ.

ಈ ಮಧ್ಯೆ ಸಾಕಷ್ಟು ಪೆಟ್ಟುಗಳನ್ನು ಕೂಡ ತಿಂದಿದ್ದೇನೆ. ನಾನು ಕಲ್ಲುಗಳ ಭೂಮಿಯಿಂದ ಬಂದಿದ್ದೇನೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಅದೇ ರೀತಿ ನನಗೆ ಏಟು ಬಿದ್ದು, ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಬಳಿ ಕಲಿಯಲು ನನಗೆ ಆಸೆಯಿದೆ. ಬಿಡುವು ಮಾಡಿಕೊಂಡು ಬಂದು ನಿಮ್ಮ ಪರಿಚಯ ಮಾಡಿಕೊಂಡು ನನ್ನಿಂದಾಗುವ ಸಹಾಯ ಮಾಡುತ್ತೇನೆ. ಡಿ.ಕೆ. ಶಿವಕುಮಾರ್ ನಿಮ್ಮ ಜತೆ ಇದ್ದಾನೆ ಎಂದು ಸಂದೇಶ ರವಾನಿಸಲು ಬಂದಿದ್ದೇನೆ ಎಂದರು.

ಆಹಾರ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯಮಿಗಳನ್ನು ನೋಡಿದೆ. ನಮ್ಮ ಸಮಾಜದಲ್ಲಿ ದಯಾನಂದ ಸಾಗರ ಶಿಕ್ಷಣ ಸಂಸ್ಥೆ ಬಿಟ್ಟರೆ ಬೇರಾರೂ ಶಿಕ್ಷಣ ಕ್ಷೇತ್ರದಲ್ಲಿ ಇರಲಿಲ್ಲ. ಆದರೆ ಈಗ ಸುಮಾರು 20-25 ಮಂದಿ ಉತ್ತಮ ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ಹೊಂದಿದ್ದಾರೆ. ಇವರೆಲ್ಲರು ಕಷ್ಟಕಾಲದಲ್ಲಿ ಸಹಾಯ ಮಾಡಬೇಕಾಗುತ್ತದೆ. ನಿಮಗೆ ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡಿ: ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ಶ್ರೀಕಂಠಯ್ಯನವರಿಗೆ ಕಂದಾಯ ಸಚಿವ ಸ್ಥಾನ ನೀಡಲಾಗಿತ್ತು. ಆಗ ಕೃಷ್ಣ ಅವರು ಶ್ರೀಕಂಠಯ್ಯ ಅವರ ಕಿವಿಯಲ್ಲಿ ಒಂದು ಮಾತು ಹೇಳಿದ್ದರು. ನಮ್ಮ ಸಮಾಜದವರು ಯಾರೇ ಸಹಾಯ ಕೇಳಿ ಬಂದರೂ ಅವರಿಗೆ ಸಹಾಯ ಮಾಡಬೇಕು ಎಂದಿದ್ದರು.

ಅವರ ಕೈಗೆ ಅಧಿಕಾರ ಕೊಟ್ಟಾಗ ನೂರಾರು ಜನರಿಗೆ ಭೂಮಿಯನ್ನು ಹಂಚಿದ್ದರು. ನೀವು ಬೆಳೆಯಿರಿ, ನಿಮ್ಮ ಜೊತೆಯಲ್ಲಿರುವವರನ್ನೂ ಬೆಳೆಸಿರಿ. ನಾಯಕರುಗಳನ್ನು ಬೆಳೆಸಿರಿ. ಗೊಬ್ಬರ ನೀರು ಹಾಕಿದರಷ್ಟೇ ಗಿಡ ಬೆಳೆಯಲು ಸಾಧ್ಯ. ನಾನು ರಾಜಕಾರಣಿಯಾದರೂ "By Birth I am an Agriculturist, By Profession I am a Businessman, By Choice I am an Educationist, By Passion I am a Politician. (ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ) ಎಂದರು.

ನಾಡಪ್ರಭು ಕೆಂಪೇಗೌಡರು ನಮ್ಮವರು ಹಮ್ಮೆ:ಇಂದು ಬೆಂಗಳೂರನ್ನು ವಿಶ್ವ ನೋಡುತ್ತಿದೆ. ಬೆಂಗಳೂರಿನ ಮುಖಾಂತರ ಭಾರತವನ್ನು ನೋಡುತ್ತಿದ್ದಾರೆ. ಇಲ್ಲಿರುವ ಮಾನವ ಸಂಪನ್ಮೂಲ, ನವೋದ್ಯಮ, ಶಿಕ್ಷಣ, ಆರೋಗ್ಯ, ಪರಿಸರ ಎಲ್ಲರ ಆಕರ್ಷಣೆಯಾಗಿದೆ. ಬೆಂಗಳೂರಿಗರು ಮೂವರನ್ನು ಸದಾ ನೆನೆಸಿಕೊಳ್ಳಬೇಕು. ನಾಡಪ್ರಭು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ ಅವರು ನಮ್ಮ ಸಮಾಜದವರು ನಮ್ಮ ಹೆಮ್ಮೆ ಆಗಿದ್ದಾರೆ.

ಬಾಲಗಂಗಾಧರನಾಥ ಶ್ರೀಗಳು ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ರಾಜಕೀಯವಾಗಿ ಹಾಗೂ ಇತರ ರೀತಿಯಲ್ಲಿ ಶಕ್ತಿ ತುಂಬಿದ್ದಾರೆ. ಈಗ ನಿರ್ಮಲಾನಂದ ಶ್ರೀಗಳು ಅವರ ಸ್ಥಾನ ತುಂಬಿದ್ದು, ಹಿಂದಿನವರಿಗಿಂತಲೂ ಉತ್ತಮವಾಗಿ ಸಮಾಜವನ್ನು ಬೆಳಗಿಸುವ ವಿಶ್ವಾಸ ನನಗಿದೆ ಎಂದು ನುಡಿದರು.

ನೀವೇ ನಮಗೆ ಆಸ್ತಿ. ನಿಮಗೆ ಒಳ್ಳೆಯದಾದರೆ ಸಾಕು. ನೀವು ನಾಯಕರಾಗಿ ಬೆಳೆಯುವುದಷ್ಟೇ ನಮಗೆ ಬೇಕು. ನಿಮ್ಮ ಸಮಾಜದ ವ್ಯಕ್ತಿಯಾಗಿ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮ ಮೂಲ, ನಿಮ್ಮ ಹಿರಿಯರು, ನಿಮ್ಮ ಕುಲವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.ಸಮ್ಮೇಳನದಲ್ಲಿ ಮಾಜಿ ಸಚಿವ ಬಿ ಎನ್ ಬಚ್ಚೇಗೌಡ, ಜಿ ಟಿ ದೇವೇಗೌಡ, ಕೆ. ಗೋಪಾಲಯ್ಯ, ಮಾಜಿ ಶಾಸಕ ಎ. ಟಿ. ರಾಮಸ್ವಾಮಿ, ಫಸ್ಟ್ ಸರ್ಕಲ್ ಸೊಸೈಟಿ ಮುಖ್ಯಸ್ಥ ಜಯರಾಮ್ ರಾಯಪುರೆ, ಉದ್ಯಮಿ ಸುದರ್ಶನ್ ಕಾರ್ಲೆ ಮತ್ತಿತರರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.