ETV Bharat / state

ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್ ಇದೆ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

author img

By ETV Bharat Karnataka Team

Published : Feb 25, 2024, 8:43 PM IST

ನಿರುದ್ಯೋಗ ಸಮಸ್ಯೆಗೂ, ಕೋಮುವಾದ ಮತ್ತು ಅಪರಾಧಕ್ಕೂ ಲಿಂಕ್ ಇದೆ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ತಿಳಿಸಿದ್ದಾರೆ.

Etv Bharat
Etv Bharat

ಮಂಗಳೂರು: ನಿರುದ್ಯೋಗ ಯುವಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ, ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚಾಗುತ್ತದೆ. ನಿರುದ್ಯೋಗ ಸಮಸ್ಯೆಗೂ, ಕೋಮುವಾದ, ಅಪರಾಧಕ್ಕೂ ಲಿಂಕ್ ಇದೆ ಎಂದು ಸರ್ಕಾರ ತಿಳಿದುಕೊಳ್ಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಹೇಳಿದ್ದಾರೆ.

ನಗರದ ಕಲ್ಲಾಪಿನಲ್ಲಿರುವ ಯುನಿಟಿ ಸಭಾಂಗಣದಲ್ಲಿ ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತಾನಾಡಿದರು. ಬಡತನ, ನಿರುದ್ಯೋಗ, ಕೋಮುವಾದದ ಬಲೆಯೊಳಗೆ ಭಾರತ ಸಿಕ್ಕು ನರಳುತ್ತಿದೆ. ಇದರ ವಿರುದ್ಧ ಯುವಕರು ಹೋರಾಡಬೇಕಿದೆ. ಶಿಕ್ಷಣದಲ್ಲಿ ತಾರತಮ್ಯ ಹೆಚ್ಚಾಗುತ್ತಿದೆ. ಶ್ರೀಮಂತರಿಗೆ ಒಂದು, ಬಡವರಿಗೆ ಇನ್ನೊಂದು ಎಂಬ ಆಯ್ಕೆಯ ಮೂಲಕ ಮಕ್ಕಳಲ್ಲಿ ಅಸಮಾನತೆ, ಅಸೂಯೆ ಸೃಷ್ಟಿಯಾಗುತ್ತಿದೆ. ಈ ತಾರತಮ್ಯ ನಿಲ್ಲಬೇಕಾದರೆ, ಸಮಾನ ಗುಣಮಟ್ಟದ ಶಿಕ್ಷಣ ಸಿಗಬೇಕು, ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಬೇಕು ಎಂದರು.

ಎಲ್ಲಾ ಮಕ್ಕಳು ಒಂದೇ ಎನ್ನುತ್ತೇವೆ. ಆದರೆ ಶಿಕ್ಷಣದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸಮಾನ ಶಿಕ್ಷಣದ ನೀತಿ ಜಾರಿಯಾಗಬೇಕಿದೆ. ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.

ಸ್ವಾಗತ ಭಾಷಣ ಮಾಡಿದ ನಿವೃತ್ತ ಜಿಲ್ಲಾಧಿಕಾರಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎ.ಬಿ. ಇಬ್ರಾಹೀಂ, ಜನರು ಭ್ರಮಾಲೋಕದಲ್ಲಿ ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇ100 ರಷ್ಟು ಅಕ್ಷರಸ್ಥರು ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಜಿಲ್ಲೆ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, "ನಾವು ಆದರ್ಶ ವ್ಯಕ್ತಿಗಳ ಚಿತ್ರವನ್ನು ಪೋಸ್ಟರ್ನಲ್ಲಿ ಬಳಸಿದ್ದಕ್ಕೆ ವಿರೋಧ ಮಾಡಲಾಯಿತು. ಟಿಪ್ಪು ಸುಲ್ತಾನ್ ಚಿತ್ರ ಬಳಸಬಾರದು ಎಂದು ಪೊಲೀಸರು ನೋಟಿಸ್​ ನೀಡಿದರು. ಆದರೆ ನಾವು ಅದಕ್ಕೆ ಪ್ರತಿಯಾಗಿ ಹೇಳಿಕೆಯನ್ನು ನೀಡಿದ್ದೇವೆ. ನೀವು ನಂಬುವ ಸಿದ್ಧಾಂತವನ್ನೇ ನಾವು ನಂಬಬೇಕು, ನೀವು ಇಷ್ಟಪಡುವವರನ್ನೇ ನಾವು ಇಷ್ಟಪಡಬೇಕು ಎಂಬುದು ಪ್ಯಾಸಿಸಂ ಎಂದು ಟೀಕಿಸಿದರು.

ಅಪಪ್ರಚಾರದಲ್ಲಿ ಬಲಪಂಥೀಯರು ಕೆಲಸ ಮಾಡುತ್ತಲೇ ಇದ್ದಾರೆ. ಕೋಟಿ ಚೆನ್ನಯ್ಯರ ಫೋಟೋ ಬಳಸಿದ್ದಕ್ಕೆ ರಾಮ ಪ್ರತಿಷ್ಠಾಪನೆ ನಂತರ ಎಡಪಂಥಿಯರು ನಮ್ಮ ರಾಮಲಕ್ಷಮಣರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಂಬಿಸಿ ನಮ್ಮ ವಿರುದ್ಧ ಅಪಪ್ರಚಾರ ಆರಂಭಿಸಿದರು. ನಾರಾಯಣ ಗುರು, ಕೋಟಿ ಚೆನ್ನಯ್ಯರ ಚಿತ್ರಗಳನ್ನು ಪೋಸ್ಟರ್​ಲ್ಲಿ ಬಳಸಿ ನಿಮ್ಮ ಧಾರ್ಮಿಕ ಭಾವನೆಗೆ ನಾವು ಧಕ್ಕೆ ತಂದಿದ್ದೇವೆ ಎಂದು ನೀವು ಹೇಳುತ್ತೀರಿ. ನಿಜವಾಗಿ ಈ ನೆಲದಲ್ಲಿ ಕೋಟಿ ಚೆನ್ನಯ್ಯರ ವಾರಸುದಾರರು, ಅವರ ಆದರ್ಶವನ್ನು ಪಾಲಿಸುವವರು ಇದ್ದರೆ ಅವರು ಡಿವೈಎಫ್ಐ ಸಂಘಟನೆಯವರು ಮಾತ್ರ ಎಂದು ತಿಳಿಸಿದರು.

ವೇದಿಕೆಯಲ್ಲಿ ಡಿವೈಎಫ್ಐ ಅಖಿಲ ಭಾರತ ಸಮಿತಿ ಸದಸ್ಯರಾದ ಜ್ಯಾಕ್ ಸಿ ಥಾಮಸ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಡಿವೈಎಫ್ಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್, ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹಾರ್, ಆಶಾ ಬೋಳೂರು, ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ಭೀಮನಗೌಡ, ಸ್ವಾಗತ ಸಮಿತಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ವಕೀಲ ರಾಮಚಂದ್ರ ಬಬ್ಬುಕಟ್ಟೆ, ಡಾ. ಜೀವನ್ ರಾಜ್ ಕುತ್ತಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.