ETV Bharat / state

ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್​​ ಚುನಾವಣಾ ಅಧಿಕಾರಿಗಳ ವಶಕ್ಕೆ​​ - LOK SABHA ELECTION

author img

By ETV Bharat Karnataka Team

Published : Mar 21, 2024, 12:25 PM IST

ತುಮಕೂರಿನಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್​ ದಾಸ್ತಾನು ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದು 80ಕ್ಕೂ ಹೆಚ್ಚು ಕುಕ್ಕರ್​​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕುಕ್ಕರ್​​ ಚುನಾವಣಾ ಅಧಿಕಾರಿಗಳ ವಶಕ್ಕೆ​​
ಕುಕ್ಕರ್​​ ಚುನಾವಣಾ ಅಧಿಕಾರಿಗಳ ವಶಕ್ಕೆ​​

ತುಮಕೂರು: ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್​ ದಾಸ್ತಾನು ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಕುಕ್ಕರ್​ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುಣಿಗಲ್​​ ಪಟ್ಟಣದ 22ನೇ ವಾರ್ಡ್​ನ ಮಲ್ಲಿ ಪಾಳ್ಯದಲ್ಲಿ ಘಟನೆ ನಡೆದಿದ್ದು, ಬೆಟ್ಟಸ್ವಾಮಿ ಎಂಬಾತನಿಗೆ ಸೇರಿದ ಗೋದಾಮಿನಲ್ಲಿ ಕುಕ್ಕರ್​ಗಳ ಸಂಗ್ರಹ ಮಾಡಲಾಗಿತ್ತು. ಜೆಡಿಎಸ್​​ ಕಾರ್ಯಕರ್ತರ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 80ಕ್ಕೂ ಹೆಚ್ಚು ಕುಕ್ಕರ್​​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕ ಡಾ.ರಂಗನಾಥ್ ಭಾವಚಿತ್ರವಿರುವ ಕುಕ್ಕರ್​ ಬಾಕ್ಸ್​ಗಳನ್ನು ಟ್ರಾನ್ಸ್​ಫರ್​ ರಿಪೇರಿ ಮಾಡುವ ಗೋದಾಮಿನಲ್ಲಿ ಇರಿಸಲಾಗಿತ್ತು. ಕುಕ್ಕರ್​ಗಳನ್ನು ವಶಕ್ಕೆ ಪಡೆದು ಚುನಾವಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕುಣಿಗಲ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಲ್ಲೂ ಹದ್ದಿನ ಕಣ್ಣು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20ರ ವರೆಗೆ(ಬುಧವಾರ) 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು, 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್​ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಜನ ಖರ್ಚು ವೆಚ್ಚ ಪರಿವೀಕ್ಷಕರನ್ನು, 72 ಫ್ಲೈಯಿಂಗ್​ ಸ್ಕ್ವಾಡ್​ (ಎಫ್.ಎಸ್.ಟಿ), 69 ಎಸ್.ಎಸ್.ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20ರ ವರೆಗೆ ದೂರವಾಣಿ ಮೂಲಕ (1950) 75 ಸಾರ್ವಜನಿಕರಿಂದ ಮಾಹಿತಿ ಮತ್ತು ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್​ ಆ್ಯಪ್​​ ಮೂಲಕ ಇಲ್ಲಿಯವರೆಗೆ 11 ದೂರುಗಳು ಸ್ವೀಕೃತಗೊಂಡಿದ್ದು, ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಎನ್.ಜಿ.ಆರ್.ಎಸ್​ ಪೋರ್ಟಲ್​ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ) ಮೂಲಕ ಜಿಲ್ಲೆಯಲ್ಲಿ ಒಟ್ಟು 27 ದೂರುಗಳು ಸ್ವೀಕೃತಗೊಂಡಿದ್ದು, 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಜಾರಿ, ಫೀಲ್ಡಿಗಿಳಿದು ವಾಹನ ತಪಾಸಣೆ ಮಾಡಿದ ದಾವಣಗೆರೆ ಜಿಲ್ಲಾಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.