ETV Bharat / state

ಮೈಸೂರು ಅರಮನೆ ಮುಂಭಾಗ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಲು ಡಿಸಿಗೆ ಪತ್ರ - Grain To Pigeons

author img

By ETV Bharat Karnataka Team

Published : May 9, 2024, 7:20 AM IST

ಮೈಸೂರು ಅರಮನೆ ಮುಂಭಾಗ ಧಾನ್ಯ ಚೆಲ್ಲುವುದನ್ನು ನಿಷೇಧಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಅವರು ಡಿಸಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Stop Throwing Grain To Pigeons
ಅರಮನೆ ಮುಂಭಾಗ ಪಾರಿವಾಳಗಳು (ETV Bharat)

ಮೈಸೂರು: ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಿ, ಅರಮನೆಯ ಸೌಂದರ್ಯ ಹಾಗೂ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು (ಕೌಟಿಲ್ಯರಘು) ಪತ್ರ ಬರೆದಿದ್ದಾರೆ.

ಅರಮನೆಯ ಅಂದಗೆಡುತ್ತಿದೆ, ಆವರಣ ಕಲುಷಿತವಾಗಿದೆ: ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಕೆಲವರು ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಸುರಿಯುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಹಾರಿ ಬರುವ ಪಾರಿವಾಳಗಳು ಅರಮನೆಯ ಅಂದಗೆಡಿಸುತ್ತಿವೆ. ನಾಲ್ವಡಿಯವರ ತಂದೆ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಹಾಗೂ ಅದರ ಆವರಣ ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾರಿತ್ರಿಕ ಕೊಡುಗೆಗಳನ್ನು ನೀಡಿದ ಅವರನ್ನು ನಿತ್ಯವೂ ಅಪಮಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ, ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿ: ಅರಮನೆಯ ಸುತ್ತಮುತ್ತ ವ್ಯಾಪಾರವನ್ನು ಆಶ್ರಯಿಸಿರುವ, ದೇವಸ್ಥಾನಗಳ ಪೂಜಾ ಕೈಂಕರ್ಯ ಕೈಗೊಳ್ಳುವ ಅರ್ಚಕರು ಹಾಗೂ ಭೇಟಿ ನೀಡುವ ಸಾರ್ವಜನಿಕರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ. ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗುತ್ತಿದೆ. ಮೈಸೂರಿನ ಹೆಮ್ಮೆಯ, ವಿಶ್ವ ವಿಖ್ಯಾತ ಸುಂದರ ಅರಮನೆಯ ಆಯಕಟ್ಟಿನ ಸ್ಥಳಗಳಲ್ಲಿ ಗೂಡು ಕಟ್ಟಿಕೊಂಡಿರುವ ಪಾರಿವಾಳಗಳು ಅರಮನೆಯ ಸೌಂದರ್ಯ ಹಾಗೂ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಅವರು ವಿವರಿಸಿದ್ದಾರೆ.

ನಿಷೇಧಿಸಿ: ಈ ಹಿನ್ನೆಲೆಯಲ್ಲಿ ಕೂಡಲೇ ಮೈಸೂರು ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಪಾರಿವಾಳಗಳಿಗೆ ಧಾನ್ಯ ತಂದು ಚೆಲ್ಲುವವರಿಗೆ ತಡೆಯೊಡ್ಡಿ ಅರಮನೆಯ ಸುತ್ತಳತೆಯ 2 ಕಿ.ಮೀ ವ್ಯಾಪ್ತಿಯವರೆಗೂ ಇಂತಹ ಚಟುವಟಿಕೆಗಳಿಗೆ ಆಸ್ಪದ ನೀಡದೇ ನಿಷೇಧಿಸುವಂತೆ ಪರಂಪರೆ ಹಾಗೂ ಪರಿಸರ ಕಾಳಜಿಯ ನಾಗರಿಕರ ಪರವಾಗಿ ಒತ್ತಾಯಿಸುತ್ತೇನೆ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ, ಕಾಫಿ ಬೆಳೆಗಾರರಲ್ಲಿ ಖುಷಿಯೋ ಖುಷಿ - GOOD RAIN IN CHIKKMAGALURU

ಕ್ರಮ ಕೈಗೊಳ್ಳದಿದ್ದರೆ ಹೋರಾಟ: ಅಲ್ಪ ವೆಚ್ಚದಲ್ಲಿ ಮಹಾನ್ ಪುಣ್ಯ ಕಟ್ಟಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಕೆಲವರು ಪಾರಿವಾಳಗಳಿಗೆ ಧಾನ್ಯಗಳನ್ನು ತಂದು ಹಾಕುತ್ತಿದ್ದಾರೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಂಡು ಪಾರಂಪರಿಕ ಅರಮನೆಯ ಸುರಕ್ಷತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪರ ಪ್ರಚಾರ ಆರೋಪ: ಹುದ್ದೆಯಿಂದ ಅಮಾನತು ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ - allegation of Campaign for BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.