ETV Bharat / state

ಭಗವಂತ ಖೂಬಾ ಹಾದಿ ಸುಗಮ: ವಿರೋಧಿಗಳ ಮನವೊಲಿಕೆ ಮಾಡುವಲ್ಲಿ ವಿಜಯೇಂದ್ರ ಸಫಲ

author img

By ETV Bharat Karnataka Team

Published : Feb 27, 2024, 7:52 AM IST

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌ ಜಗನ್ನಾಥ ಭವನದಲ್ಲಿ ಸೋಮವಾರ ಸಭೆ ನಡೆಸಿದರು.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬೀದರ್, ಚಿಕ್ಕಬಳ್ಳಾಪುರ, ಕೋಲಾರ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಭೆ ನಡೆಸಲಾಯಿತು. ಇನ್ನೂ ಕೆಲವು ಕ್ಷೇತ್ರಗಳ ಸಭೆ ನಡೆಯಲಿದ್ದು ಅಭ್ಯರ್ಥಿ ಆಯ್ಕೆ ಕಗ್ಗಂಟು ಆಗಿರುವ ಕ್ಷೇತ್ರಗಳಲ್ಲಿ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಭೆ ನಡೆಸಿದರು.

ಕೆಲ ದಿನಗಳ ಹಿಂದೆ ಕ್ಲಸ್ಟರ್ ಮಟ್ಟದಲ್ಲಿ ಎಲ್ಲ ಕ್ಷೇತ್ರಗಳ ಸಭೆ ನಡೆದಿತ್ತು. ಇದೀಗ ಮತ್ತೊಮ್ಮೆ ಚುನಾವಣೆ ಉಸ್ತುವಾರಿ ಸಮ್ಮುಖದಲ್ಲಿ ಕಠಿಣ ಕ್ಷೇತ್ರದ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಒಮ್ಮತದ ಅಭ್ಯರ್ಥಿ ಕಣಕ್ಕೆ ಇಳಿಸಲು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌ ಯತ್ನಿಸುತ್ತಿದ್ದು, ಅದರ ಭಾಗವಾಗಿ ಜಗನ್ನಾಥ ಭವನದಲ್ಲಿ ಸೋಮವಾರ ಸಭೆ ನಡೆಸಲಾಯಿತು.

ಮೊದಲಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರ ಸಭೆ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ್ ಹೆಗ್ಡೆ ಉಪಸ್ಥಿತರಿದ್ದರು. ಅನಂತ್ ಕುಮಾರ್ ಹೆಗ್ಡೆ ಟಿಕೆಟ್ ಆಕಾಂಕ್ಷಿಯಾಗಿರುವ ನಡುವೆ ಅವರಿಗಿರುವ ವಿರೋಧ ಹಾಗೂ ಇತರ ಆಕಾಂಕ್ಷಿಗಳ ಕುರಿತು ಚರ್ಚಿಸಲಾಯಿತು.

ನಂತರ ಕೇಂದ್ರ ಸಚಿವ ಭಗವಂತ ಖೂಬಾಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೀದರ್ ನಾಯಕರ ಜೊತೆಯೂ ಸಭೆ ನಡೆಸಲಾಯಿತು. ಭಗವಂತ ಖೂಬಾಗೆ ಟಿಕೆಟ್ ಫಿಕ್ಸ್ ಎನ್ನುವ ಸುಳಿವು ಸಿಕ್ಕಿದೆ. ಸ್ಥಳೀಯ ಶಾಸಕರ ವಿರೋಧದ ನಡುವೆಯೂ ಖೂಬಾಗೆ ಟಿಕೆಟ್ ಕನ್ಫರ್ಮ್ ಮಾಡುವುದು ಖಚಿತವಾಗಿದೆ. ಅಭ್ಯರ್ಥಿ ಪರ ಕೆಲಸ ಮಾಡುವಂತೆ ವಿಜಯೇಂದ್ರ ಶಾಸಕರಿಗೆ ಸೂಚನೆ ನೀಡಿದ್ದಾರೆ. ನಮ್ಮ ಪಕ್ಷದ ಸಿಂಬಲ್ ಕಮಲ. ಕಮಲ ಅಂತ ಕೆಲಸ‌ ಮಾಡುತ್ತೇವೆ ಎಂದು ಶಾಸಕರು ನಿರ್ಧಾರ ಮಾಡಿದ್ದಾರೆ. ಬೀದರ್ ಜಿಲ್ಲೆಯ ಶಾಸಕರಾದ ಪ್ರಭು ಚೌಹಾಣ್, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್ ಕಮಲದ ಚಿಹ್ನೆ ಹಾಗೂ ಮೋದಿಗಾಗಿ ಕೆಲಸ ಮಾಡೋದಾಗಿ ಹೇಳಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಲಾಯಿತು.

ಸಭೆ ನಂತರ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್, ಸೋಮವಾರ ನಮ್ಮ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಉಸ್ತುವಾರಿ ನೇತೃತ್ವದಲ್ಲಿ ಸಭೆ ನಡೆಯಿತು. ಹಾಲಿ ಶಾಸಕರು, ಚುನಾವಣಾ ಅಭ್ಯರ್ಥಿಗಳ ಸಭೆ ಕರೆಯಲಾಗಿತ್ತು. ಬೂತ್ ಕಾರ್ಯಕರ್ತರ ಸಂಘಟನೆ ಮಾಡಿ ಕೇಂದ್ರದಿಂದ ಚುನಾವಣಾ ಸಾಮಗ್ರಿಗಳನ್ನು ಕಳಿಸುತ್ತೇವೆ. ಚುನಾವಣೆಗೆ ಮೊದಲು ಮನೆ ಮನೆಗೆ ತಲುಪಿಸಿ, ಕಾಂಗ್ರೆಸ್ ಗ್ಯಾರಂಟಿಗೆ ಲಿಖಿತ ಮೂಲಕ, ಮೋದಿ ಅಧಿಕಾರದ ಅವಧಿಯಲ್ಲಿ ಏನೆಲ್ಲಾ ಆಗಿದೆ ಅನ್ನೋದನ್ನ ತಿಳಿಸಿ ಎಂದಿದ್ದಾರೆ.

ಹಾಲಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ನಿವೃತ್ತಿ ಆಗುತ್ತಿದ್ದಾರೆ. ಅಲ್ಲಿ ಶೀಘ್ರವೇ ಅಭ್ಯರ್ಥಿ ಹಾಕಿದರೆ ಕೆಲಸ ಮಾಡಲು ಅನುಕೂಲ ಅಂತ ಹೇಳಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಕ್ಷೇತ್ರದಲ್ಲಿ ಪ್ರಚಾರ ನಡೆದಿದೆ. ಉಳಿದ ಕ್ಷೇತ್ರದ ಪ್ರಚಾರ ಕಾರ್ಯ ಕೂಡ ನಡೆಯುತ್ತಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಯಾರಿಗೇ ಕೊಟ್ಟರೂ ಕೆಲಸ‌ ಮಾಡಬೇಕು ಎಂದರು.

ಇದನ್ನೂ ಓದಿ: 'ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ, ನನ್ನ ಪಕ್ಷ ನಿಷ್ಠೆಯನ್ನು ಎದೆ ಬಗೆದು ತೋರಿಸಲು ಸಾಧ್ಯವಿಲ್ಲ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.