ETV Bharat / state

ಮೇಕೆದಾಟು ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ದ: ಡಿ ಕೆ ಸುರೇಶ್ - Lok Sabha Election 2024

author img

By ETV Bharat Karnataka Team

Published : Mar 28, 2024, 10:59 PM IST

ರಾಮನಗರದಲ್ಲಿ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

Congress candidate DK Suresh spoke.
ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಮಾತನಾಡಿದರು.

ಮೇಕೆದಾಟು ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ದ: ಡಿ ಕೆ ಸುರೇಶ್

ರಾಮನಗರ: ನನ್ನನ್ನು ಸೋಲಿಸಬೇಕು ಎಂದು ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು, ನಟ, ಬಂಡವಾಳ ಹೂಡಿಕೆ ಮಾಡುವವರು ಎಲ್ಲರೂ ಒಂದಾಗಿದ್ದಾರಂತೆ. ಸಿನಿಮಾ ರೀಲ್ ಬಿಟ್ಟಂತೆ ಇಲ್ಲಿ ಬಿಟ್ಟರೇ ಜನ ಒಪ್ಪುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ತಿಳಿಸಿದರು.

ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಮೊದಲ ದಿನ ಇಂದು ಡಿ ಕೆ ಸುರೇಶ್ ಅವರು ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಎಲ್ಲರೂ ಒಂದಾಗಿದ್ದಾರಂತೆ ಅದಕ್ಕೆ ನನ್ನನ್ನು ಸೋಲಿಸುತ್ತಾರಂತೆ? ಏತಕ್ಕೆ ನನ್ನ ಸೋಲಿಸುತ್ತೀರಿ? ಬಡವರ ಪರವಾಗಿ, ರೈತರ ಪರವಾಗಿ, ಕನ್ನಡಿಗರ ಪರವಾಗಿ ದನಿ ಎತ್ತಿದಕ್ಕಾ? ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಸೋಲಿಸಲು ಹೊರಟ್ಟಿದ್ದೀರಾ? ಅವರಿಗೆ ನಿಜ ಜೀವನಕ್ಕೂ, ಸಿನಿಮಾಗೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೆ ಹೊರತು, ಸಿನಿಮಾದಲ್ಲಿ ಅಲ್ಲ. ನೀವು ಬಿಟ್ಟಿರುವ ಎಲ್ಲ ರೀಲುಗಳು ಡಬ್ಬ ಸೇರಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.

ನಾವು ಮುಂದಿನ 4 ವರ್ಷಗಳ ಕಾಲ ರಾಜ್ಯದ ಜನರ ಕಷ್ಟಗಳನ್ನು ಪರಿಹರಿಸಲು ಬದ್ಧರಾಗಿದ್ದೇವೆ. ಸುಳ್ಳಿನ ಗ್ಯಾರಂಟಿಗಳನ್ನು ಹೊತ್ತುಕೊಂಡು ಬಿಜೆಪಿಯವರು ಮತ ಕೇಳಲು ಬರುತ್ತಿದ್ದಾರೆ. ಸುಳ್ಳು ಹೇಳುವವರ ಜೊತೆ ಕಣ್ಣೀರು ಹಾಕುವವರು ಸೇರಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

ಇಂದು ಇತಿಹಾಸ ಬದಲಾಗಿದೆ. ಐದು ಗ್ಯಾರಂಟಿಗಳನ್ನು ರಾಜ್ಯದ ಎಲ್ಲ ಜನರಿಗೆ ನೀಡಿದ್ದೇವೆ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಗೆ ಮತಹಾಕಿದ ಜನರಿಗೂ ನಮ್ಮ ಗ್ಯಾರಂಟಿಗಳು ತಲುಪುತ್ತಿವೆ. ಎಲ್ಲರ ಮನೆಯಲ್ಲಿ ವಿದ್ಯುತ್ ದೀಪ ಉರಿಯುತ್ತಿದೆ. ಗೃಹಲಕ್ಷ್ಮಿ ತಲುಪುತ್ತಿದೆ, ಅಕ್ಕಿ, ಹಣ, ಯುವನಿಧಿ ತಲುಪುತ್ತಿದೆ. ಇವು ಮೋದಿ ಗ್ಯಾರಂಟಿಯಿಂದಾಗಿಲ್ಲ, ಕಾಂಗ್ರೆಸ್ ಗ್ಯಾರಂಟಿಯಿಂದ ಆಗಿದೆ ಎಂದು ತಿಳಿಸಿದರು.

ಈಗ ಮೇಕೆದಾಟು ಜಪ: ಇಂದು ಚುನಾವಣೆ ಸಮಯದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಮಾಡಿದ ಹೋರಾಟದ ವೇಳೆ ಒಂದೇ ಒಂದು ದನಿ ಎತ್ತಿದ್ದರೆ, ಯೋಜನೆಗೆ ಅನುಮತಿ ನೀಡಿ ಎಂದು ಪ್ರಧಾನಿಗಳಿಗೆ ಮನವಿ ಸಲ್ಲಿಸಿದ್ದರೆ ಅವರ ಬದ್ಧತೆಯನ್ನು ಒಪ್ಪುತ್ತಿದ್ದೆ. ಇಷ್ಟು ದಿನ ಮೌನವಾಗಿದ್ದವರು ಈಗ ಮೇಕೆದಾಟು ಜಪ ಮಾಡುತ್ತಿದ್ದಾರೆ. ಇವರ ನಾಟಕ ಸರಿಯೇ ಎಂದು ರೈತರು, ಬೆಂಗಳೂರಿಗರು ತೀರ್ಮಾನ ಮಾಡಬೇಕು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಮುಂದಿನ ಆರು ತಿಂಗಳಲ್ಲಿ ಸಂಪೂರ್ಣ ಬೆಂಗಳೂರಿಗೆ ಕುಡಿಯುವ ನೀರನ್ನು ನೀಡಲಿದ್ದಾರೆ. 6 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ನೀಡುತ್ತಿದ್ದಾರೆ. ಮೇಕೆದಾಟು ಯೋಜನೆಗೆ ಪಕ್ಷಾತೀತವಾಗಿ ಬೆಂಬಲ ಕೇಳಿದರು ನೀಡಲಿಲ್ಲ. ನಿಮ್ಮನ್ನು ಜನ ನೋಡಿದ್ದಾರೆ, ಅವರು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ದೇಶದ್ರೋಹಿ ಪಟ್ಟ ಕಟ್ಟಿದರು: ಕನ್ನಡಿಗರ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ನೀಡಿ ಲೂಟಿ ಮಾಡಲಾಗುತ್ತಿದೆ ಎಂದು ದನಿ ಎತ್ತಿದ ಕಾರಣಕ್ಕೆ ಬಿಜೆಪಿಯವರು ದೇಶದ್ರೋಹಿ ಪಟ್ಟ ಕಟ್ಟಿದರು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. 4.30 ಲಕ್ಷ ಕೋಟಿ ತೆರಿಗೆ ಹಣವನ್ನು ಕನ್ನಡಿಗರು ಕೇಂದ್ರಕ್ಕೆ ನೀಡಿದ್ದಾರೆ. ರಾಜ್ಯದ ಬಜೆಟ್ 3.71 ಲಕ್ಷ ಕೋಟಿ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಿಂದ ಕೇಂದ್ರಕ್ಕೆ 24 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ನೀಡಿದ್ದೇವೆ. ಆದರೆ, ಅವರು ನಮಗೆ ಮರಳಿ ಕೊಟ್ಟಿರುವುದು ಕೇವಲ 2.94 ಲಕ್ಷ ಕೋಟಿ ಮಾತ್ರ ಎಂದು ಹೇಳಿದರು.

ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಕಳೆದ 10 ವರ್ಷಗಳಲ್ಲಿ ಕರ್ನಾಟಕ, ಬೆಂಗಳೂರು ಅಭಿವೃದ್ದಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು? ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ನಿರುದ್ಯೋಗ ಸಮಸ್ಯೆ, ನೀರಿನ ಸಮಸ್ಯೆ ಪರಿಹಾರಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಕೇಳಿದರೆ, ನನಗೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ ಎಂದು ಆಪಾದಿಸಿದರು.

ಕನ್ನಡ ಪೇಟ ಧರಿಸಿ ನಾಮಪತ್ರ ಸಲ್ಲಿಕೆ: ಗುರುವಾರ ಬೆಳಗ್ಗೆ ತಮ್ಮ ತಾಯಿ ಗೌರಮ್ಮ, ಸಹೋದರ ಡಿ.ಕೆ ಶಿವಕುಮಾರ್, ಅತ್ತಿಗೆ ಉಷಾ, ಅಣ್ಣನ ಮಗಳು ಐಶ್ವರ್ಯ, ಡಿ ಕೆ ಎಸ್ ಜೊತೆಗೂಡಿ ಸಾತನೂರಿನ ಕಬ್ಬಾಳಮ್ಮ, ಮನೆದೇವರಾದ ಕನಕಪುರದ ಕೆಂಕೇರಮ್ಮ, ರಾಮನಗರದ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ನಂತರ ರಾಮನಗರದಲ್ಲಿ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜತೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುರೇಶ್ ಅವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟದ ಪೇಟ ಧರಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ, ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ಇದನ್ನೂಓದಿ:593 ಕೋಟಿ ರೂ. ಆಸ್ತಿ ಘೋಷಿಸಿದ ಡಿ.ಕೆ.ಸುರೇಶ್​: 2019ರಲ್ಲಿ ಘೋಷಿಸಿದ್ದಕ್ಕಿಂತ 259 ಕೋಟಿ ಏರಿಕೆ - D K Suresh Declared Assets

ETV Bharat Logo

Copyright © 2024 Ushodaya Enterprises Pvt. Ltd., All Rights Reserved.