ETV Bharat / state

ಬರಗಾಲ ನಿರ್ವಹಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಬಿ.ವೈ.ವಿಜಯೇಂದ್ರ

author img

By ETV Bharat Karnataka Team

Published : Mar 9, 2024, 3:10 PM IST

ವಿಕಸಿತ ಭಾರತ ಎಲ್​ಇಡಿ ಪ್ರಚಾರ ವಾಹನಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಇಂದು ಮಲ್ಲೇಶ್ವರದಲ್ಲಿ ಉದ್ಘಾಟಿಸಿದರು.

Inauguration of Viksita Bharat LED Campaign Vehicles
ವಿಕಸಿತ ಭಾರತ ಎಲ್​ಇಡಿ ಪ್ರಚಾರ ವಾಹನಗಳ ಉದ್ಘಾಟನೆ

ಬೆಂಗಳೂರು: "ಬರಗಾಲ ನಿರ್ವಹಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ .

ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು ವಿಕಸಿತ ಭಾರತ ಎಲ್​ಇಡಿ ಪ್ರಚಾರ ವಾಹನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಭೀಕರ ಬರಗಾಲ ಇದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬರದ ಸಮಸ್ಯೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಇದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

ಕಾಳಜಿ ಇಲ್ಲದ ಸರ್ಕಾರ ಇದು. ದರಿದ್ರ ಸರ್ಕಾರ ಇದೆಂದು ಸಾಮಾನ್ಯ ಜನರು ಹೇಳುತ್ತಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಗರ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆಯತ್ತ ಗಮನ ಕೊಡುತ್ತಿಲ್ಲ. ಕುಡಿವ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ" ಎಂದು ದೂರಿದರು.

"ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ - ಜೆಡಿಎಸ್ ಗೆಲ್ಲಿಸಲು ಪ್ರಜ್ಞಾವಂತ ಜನರು ನಿರ್ಧರಿಸಿದ್ದಾರೆ. ಸಾಮಾನ್ಯ ಜನರ ಅಭಿಪ್ರಾಯ, ವಿವಿಧ ಕ್ಷೇತ್ರಗಳ ಜನರ ಅಭಿಮತ ಪಡೆದು ಸಂಕಲ್ಪ ಪತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರದ ಸಾಧನೆ ತಿಳಿಸುವುದು ಮಾತ್ರವಲ್ಲದೇ ಸಲಹಾ ಪೆಟ್ಟಿಗೆಯೊಂದಿಗೆ ಈ ವಾಹನ ತೆರಳಲಿದೆ. ಜನರ ಅಭಿಪ್ರಾಯ ಪಡೆಯುವುದು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ಶ್ರಮಿಸುವುದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ" ಎಂದರು.

ರಾಹುಲ್ ಎಂದರೆ ಏನಿಲ್ಲ..ಏನಿಲ್ಲ: ಇದೇ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್, "ನರೇಂದ್ರ ಮೋದಿಯವರು ವಿಕಸಿತ ಭಾರತದ ಕೇಂದ್ರ ಬಿಂದು. ಮೋದಿ ಅವರ ಗ್ಯಾರಂಟಿ ಮೂಲಕ ನಾವು ಚುನಾವಣೆ ಎದುರಿಸೋಣ. ಕಾಂಗ್ರೆಸ್ ನಾಯಕರೇ ಇಲ್ಲದ ಪಕ್ಷ. ರಾಹುಲ್ ಎಂದರೆ ಏನಿಲ್ಲ; ಏನಿಲ್ಲ. ಅವರ ಹೆಸರು ಹೇಳಲು ಹಿಂದೇಟು ಹಾಕುವ ಸ್ಥಿತಿ ಆ ಪಕ್ಷದಲ್ಲೇ ಇದೆ" ಎಂದು ಟೀಕಿಸಿದರು.

"ದಲಿತರ ಬಗ್ಗೆ ಕಾಂಗ್ರೆಸ್‍ನಲ್ಲಿ ಅಸಹನೆ ಇದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ 'ಇಂಡಿ' ನೇತೃತ್ವ ನೀಡಲು ಕಾಂಗ್ರೆಸ್ಸಿನವರೇ ಹಿಂದೇಟು ಹಾಕುತ್ತಾರೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ನಾವು ಪ್ರಯತ್ನದ ಮೂಲಕ ಮೋದಿಜೀ ಅವರನ್ನು ಗೆಲ್ಲಿಸಬೇಕಿದೆ" ಎಂದು ತಿಳಿಸಿದರು.

"ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ತಮಿಳುನಾಡಿಗೆ ನೀರು ಕೊಡುವ ಮೂಲಕ ಕಾಂಗ್ರೆಸ್ ಮಾಡಿದ ತಪ್ಪಿನಿಂದ ನಾವು ನೀರಿನ ಬವಣೆ ಎದುರಿಸಬೇಕಾಗಿದೆ. ಬೋರ್​ವೆಲ್​ ಕೊರೆಸಲೂ ಅವರ ಬಳಿ ಹಣ ಇಲ್ಲ. ಜನರೆಲ್ಲ ಗುಳೆ ಹೋಗುವಂತಾಗಿದೆ. 2 ಸಾವಿರ ಕೊಟ್ಟಿದ್ದೇವೆ ಎನ್ನುತ್ತಾರೆ. ಜನರಿಗೆ ಉದ್ಯೋಗ, ನೀರು, ಆಹಾರ ಬೇಕಿದೆ. ಅದನ್ನು ಕೊಡಲಾಗದ ದಿವಾಳಿ ಸರ್ಕಾರ ಇಲ್ಲಿದೆ" ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ತಪ್ಪು ನಡವಳಿಕೆಯಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಇದೊಂದು ಕೆಟ್ಟ ಸರ್ಕಾರ. ಅದನ್ನು ತೊಲಗಿಸಬೇಕು. ಎಲ್ಲರೂ ಇಡೀ ರಾಜ್ಯ ಪ್ರವಾಸ ಮಾಡೋಣ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋಣ" ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಬೈರತಿ ಬಸವರಾಜ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್. ದತ್ತಾತ್ರೀ ಮತ್ತು ನಿವೃತ್ತ ಐ.ಎ.ಎಸ್. ಅಧಿಕಾರಿ ಸಿ. ಸೋಮಶೇಖರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಮುಖಂಡರಾದ ಎಸ್.ವಿ. ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು. ಮೋದಿ ಅವರ ಸಾಧನೆ ಕುರಿತ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಎರಡನೇ ಪಟ್ಟಿ ಅದಷ್ಟು‌ ಬೇಗ ಬಿಡುಗಡೆ ಆಗಲಿದೆ: ಬಿ.ಎಸ್. ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.