ETV Bharat / state

ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬರದಿದ್ದಲ್ಲಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿದ್ದಾರೆ: ಜಿ ಟಿ ದೇವೇಗೌಡ - LOK SABHA ELECTION

author img

By ETV Bharat Karnataka Team

Published : Apr 2, 2024, 11:14 AM IST

ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​​ನಲ್ಲಿ ಇಂದು ಅಮಿತ್ ಶಾ ಸಭೆ ಕರೆದಿದ್ದು, ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಭಾಗಿಯಾಗಲಿದ್ದಾರೆ.

Etv Bharat
Etv Bharat

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​​ಗೆ ಮೆಜಾರಿಟಿ ಬರದೇ ಇದ್ರೆ ತಾನು ಬದಲಾವಣೆ ಆಗೋದು ಗ್ಯಾರಂಟಿ ಅನ್ನೋ ಭಯ ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅದಕ್ಕಾಗಿ ಸಿಎಂ ಸೀಟ್​​ನಲ್ಲಿ ಮುಂದುವರೆಯಬೇಕಾದರೆ 60 ಸಾವಿರ ಲೀಡ್ ಬೇಕು ಎಂದಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ತಿಳಿಸಿದ್ದಾರೆ.

ಇಂದು ಇಲ್ಲಿನ ಖಾಸಗಿ ಹೋಟೆಲ್​ನಲ್ಲಿ ಅಮಿತ್ ಶಾ ಜೊತೆಗಿನ ಸಭೆಗೂ ಮುನ್ನ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕ ಗೃಹ ಸಚಿವ ಅಮಿತ್ ಶಾ ಇಂದು ಕರ್ನಾಟಕ ಸಭೆ ಕರೆದಿದ್ದಾರೆ. ಕೋರ್ ಕಮಿಟಿ ಮುಖಂಡರ ಸಭೆ ಇದೆ. ನಮ್ಮ ಕಡೆಯಿಂದ ಆರು ಮುಖಂಡರನ್ನು ಸಭೆಗೆ ಕರೆದಿದ್ದಾರೆ. ಎರಡೂ ಪಕ್ಷದ ಮುಖಂಡರ ಸಭೆ ಕರೆದು, ಚುನಾವಣೆ ಸಿದ್ಧತೆ ಹೇಗೆ ಸಾಗುತ್ತಿದೆ ಎನ್ನುವ ಕುರಿತು ಮುಕ್ತವಾಗಿ ಚರ್ಚೆ ಮಾಡಲಾಗುತ್ತದೆ. ಮುಂದೇನು ಮಾಡಬೇಕು ಅಂತ ಮುಕ್ತವಾಗಿ ಚರ್ಚಿಸಿ ಎಲ್ಲ ಕ್ಷೇತ್ರ ಗೆಲ್ಲಲು ರಣತಂತ್ರ ಹೆಣೆಯಲಾಗುತ್ತದೆ ಎಂದರು.

ಸಿಎಂ ಸೀಟ್​​ನಲ್ಲಿ ಮುಂದುವರೆಯಬೇಕಾದರೆ 60 ಸಾವಿರ ಲೀಡ್ ಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಜಿ ಟಿ ದೇವೇಗೌಡ, ಸಿದ್ದರಾಮಯ್ಯ ಅವರ ಮನಸಲ್ಲಿ ಇರೋದನ್ನ ಹೇಳಿದ್ದಾರೆ. ಒಂದು ವರ್ಷದಿಂದ ಸಿಎಂ ಬದಲಾವಣೆ, ನಾಲ್ವರು ಡಿಸಿಎಂ ನೇಮಕದ ಬಗ್ಗೆ ಚರ್ಚೆ ನಡೀತಿದೆ. ಲೋಕಸಭೆ ನಂತರ ಸಿದ್ದರಾಮಯ್ಯ ಕೆಳಗಿಳಿಸ್ತಾರೆ ಅಂತ ಅವರ ಪಕ್ಷದವರೇ ಚರ್ಚೆ ಮಾಡ್ತಿದ್ದಾರೆ. ಹೀಗಾಗಿ ಮೆಜಾರಿಟಿ ಬಂದ್ರೆ, ಪಕ್ಷ ಗೆದ್ದರೆ ಮಾತ್ರ ನಾನು ಉಳಿತೇನೆ, ಗೆಲ್ಲದಿದ್ರೆ ನನ್ನ ಬದಲಾವಣೆ ಮಾಡ್ತಾರೆ ಅನ್ನೋ ಸಂದೇಶ ಕೊಟ್ಟಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಯಾರು ಏನೇ ತಂತ್ರ ಮಾಡಿದರೂ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ: ದೇವೇಗೌಡ ಭವಿಷ್ಯ - HD Devegowda

ಅಮಿತ್​ ಶಾ ಸಭೆ: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಪ್ರಚಾರ ಕಾರ್ಯ ನಡೆಸುವ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಭಯ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡಿದ್ದ ಎಲ್ಲಾ ಕ್ಷೇತ್ರದಲ್ಲಿಯೂ ಜಂಟಿ ಪ್ರಚಾರ ಕಾರ್ಯ ನಡೆಸುವ, ಮಿತ್ರ ಪಕ್ಷದ ನಾಯಕರು, ಕಾರ್ಯಕರ್ತರ ವಿಶ್ವಾಸಕ್ಕೆ ಪಡೆದುಕೊಂಡು ಒಟ್ಟಾಗಿ ಹೋಗುವ ಕುರಿತು ಚರ್ಚಿಸಲಾಗುತ್ತದೆ. ಮಿತ್ರಪಕ್ಷಗಳ ನಡುವೆ ಇರುವ ಗೊಂದಲ, ಅಸಮಾಧಾನಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಮಿತ್ ಶಾ ಎಲ್ಲರ ಅಭಿಪ್ರಾಯ ಪಡೆದು ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ‌.

ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್, ಆರ್.ಅಶೋಕ್, ಪ್ರಹ್ಲಾದ್ ಜೋಶಿ, ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಗೋವಿಂದ್ ಕಾರಜೋಳ, ಸಿ.ಟಿ ರವಿ, ಶ್ರೀರಾಮುಲು, ಸಿ.ಎನ್ ಅಶ್ವಥ್ ನಾರಾಯಣ್, ನಿರ್ಮಲ್ ಕುಮಾರ್ ಸುರಾನಾ, ಜಿ.ವಿ ರಾಜೇಶ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ, ಜಿ.ಟಿ ದೇವೇಗೌಡ, ಬಂಡೆಪ್ಪ ಖಾಶೆಂಪುರ್, ವೆಂಕಟರಾವ್ ನಾಡಗೌಡ, ಪುಟ್ಟರಾಜು, ಸಾ.ರಾ ಮಹೇಶ್, ಹೆಚ್.ಕೆ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಇಂದಿನ ಅಮಿತ್ ಶಾ ಸಭೆಯಲ್ಲಿರಲಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ವಿರುದ್ಧ ಗೂಂಡಾ, ರೌಡಿ ಹೇಳಿಕೆ: ಯತೀಂದ್ರಗೆ ನೋಟಿಸ್ ಜಾರಿ - Notice to Yatindra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.