ETV Bharat / state

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 213 ಕೋಟಿ ಹಣ ಬಾಕಿ: ಸಾರಿಗೆ ಸಚಿವರ ಸ್ಪಷ್ಟನೆ ಹೀಗಿದೆ

author img

By ETV Bharat Karnataka Team

Published : Feb 10, 2024, 11:02 PM IST

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ ನವೆಂಬರ್ ತಿಂಗಳವರೆಗೂ 213 ಕೋಟಿ ರೂ. ಹಣ ಬಾಕಿ ಉಳಿದಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 213 ಕೋಟಿ ಹಣ ಬಾಕಿ
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 213 ಕೋಟಿ ಹಣ ಬಾಕಿ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸರ್ಕಾರದಿಂದ 213 ಕೋಟಿ ಬಾಕಿ ಹಣ ಬರಬೇಕಿದೆ. ಇದರಿಂದ ಸಾರಿಗೆ ಸಂಸ್ಥೆಗೆ ಆರ್ಥಿಕ‌ ಸಂಕಷ್ಟ ಎದುರಾಗಿದೆ.

ಕಳೆದ ನವೆಂಬರ್ ತಿಂಗಳವರೆಗೂ ಸಂಸ್ಥೆಗೆ ಬರೋಬ್ಬರಿ 213 ಕೋಟಿ ಹಣ ಬರಬೇಕಿದೆ. ಶಕ್ತಿ ಯೋಜನೆ ಆರಂಭವಾದಗಿನಿಂದ 631 ಕೋಟಿ ರೂಪಾಯಿ ಖರ್ಚಾಗಿದ್ದು, ಇದರಲ್ಲಿ 412 ಕೋಟಿ ರೂಪಾಯಿಯನ್ನು ಸರ್ಕಾರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೀಡಿದೆ. ಇದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ 213 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ.

ಶಕ್ತಿ ಯೋಜನೆ ಆರಂಭಕ್ಕಿಂತ ಮುಂಚೆ ನಿತ್ಯ 18 ಲಕ್ಷ ಜನ ಸಂಚಾರ ಮಾಡುತ್ತಿದ್ದರು. ಈಗ ಪ್ರತಿನಿತ್ಯ ಸಂಸ್ಥೆಯಲ್ಲಿ 24 ಲಕ್ಷ ಜನ ಸಂಚಾರ ಮಾಡುತ್ತಿದ್ದಾರೆ. ಜನ ಸಂಚಾರ ಜಾಸ್ತಿ ಪ್ರಮಾಣದಲ್ಲಿ ಆಗುತ್ತಿದ್ದರೂ, ಹೆಚ್ಚಿನ ಬಸ್​​ಗಳು ಮಾತ್ರ ರಸ್ತೆಗಿಳಿಯುತ್ತಿಲ್ಲ.

ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ: ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ‌ನೀಡಿದ್ದು, ''ಶಕ್ತಿ ಯೋಜನೆ ಆರಂಭಕ್ಕೂ ಮುನ್ನ ನಾಲ್ಕು ವಿಭಾಗಗಳಲ್ಲಿ 84 ಲಕ್ಷ ಜನ ಪ್ರತಿ ದಿನ ಓಡಾಡುತ್ತಿದ್ದರು. ಅದರಲ್ಲಿ ಅರ್ಧ ಮಹಿಳೆಯರು ಅಂತ ಲೆಕ್ಕಾಚಾರ ಮಾಡಲಾಗಿತ್ತು. ಅದರ ಮೌಲ್ಯ 2,800 ಕೋಟಿ ಅಂದಾಜು ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಪ್ರತಿದಿನ 1 ಕೋಟಿ 10 ಲಕ್ಷ ಜನ ಓಡಾಡುತ್ತಿದ್ದಾರೆ. ಅದರಲ್ಲಿ ಮಹಿಳೆಯರೇ 60 ಲಕ್ಷ ಜನ ಓಡಾಡುತ್ತಿದ್ದಾರೆ. ಹೀಗಾಗಿ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. 1600 ಕೋಟಿ ರೂ. ಸರ್ಕಾರ ಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸಾರಿಗೆ ಸಿಬ್ಬಂದಿಗೆ ಸಂಬಳ ನೀಡುವಲ್ಲಿ ವಿಳಂಬವಾಗಿಲ್ಲ'' ಎಂದು ಸ್ಪಷ್ಟಪಡಿಸಿದರು.

ಬಸ್ ಸಂಖ್ಯೆ ಕಡಿಮೆ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ, ''ಕೊರೊನಾ ಮುಂಚೆಯೇ 3,800 ಟ್ರಿಪ್ ಕಡಿಮೆ ಆಗಿವೆ. ಪ್ರತಿ ವರ್ಷ ಬಸ್​ಗಳು ಹಳೆಯದಾಗುತ್ತವೆ. ಹೊಸ ಬಸ್ ಖರೀದಿ ಮಾಡಬೇಕು. ನಾಲ್ಕು ವರ್ಷಗಳಿಂದ ಒಂದು ಬಸ್ ಖರೀದಿ ಮಾಡಿಲ್ಲ. ಹೊಸದಾಗಿ 5,800 ಬಸ್ ಖರೀದಿ ಮಾಡಲಾಗುತ್ತಿದೆ. ವಾಯುವ್ಯ ಸಾರಿಗೆಗೆ 884 ಬಸ್ ಕೊಡಲಾಗುವದು. ಅದರಲ್ಲಿ 100 ಬಸ್ ಹುಬ್ಬಳ್ಳಿ - ಧಾರವಾಡಕ್ಕೆ ನೀಡಲಾಗುವದು. ಫೆಬ್ರವರಿ ಒಳಗೆ ಎಲ್ಲಾ ಬಸ್​ಗಳು ಬಂದರೆ ಸಮಸ್ಯೆ ಪರಿಹಾರವಾಗಲಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಯಾವಾಗ ಬರ ಪರಿಹಾರ ನೀಡುತ್ತೀರಿ, ರಾಜ್ಯಕ್ಕೆ ಬರುವ ಮೊದಲು ಉತ್ತರಿಸುವಿರಾ?: ಅಮಿತ್ ಶಾಗೆ ಸಿಎಂ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.