ETV Bharat / state

ರಾಮೇಶ್ವರಂ ಕೆಫೆ ಸ್ಫೋಟ: ಎರಡು ಆಯಾಮಗಳಿಂದ ತನಿಖೆ, ಸಿಸಿಬಿಗೆ ಪ್ರಕರಣ ಹಸ್ತಾಂತರ

author img

By ETV Bharat Karnataka Team

Published : Mar 2, 2024, 12:08 PM IST

Updated : Mar 2, 2024, 2:32 PM IST

ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಪ್ರಕರಣವನ್ನು ಎಚ್​ಎಎಲ್​ ಠಾಣೆ ಪೊಲೀಸರು ಸಿಸಿಬಿಗೆ ಹಸ್ತಾಂತರಿಸಿದ್ದಾರೆ.

Rameswaram Cafe Blast: Investigation from two dimensions, case handed over to CCB
ರಾಮೇಶ್ವರಂ ಕೆಫೆ ಸ್ಫೋಟ: ಎರಡು ಆಯಾಮಗಳಿಂದ ತನಿಖೆ, ಸಿಸಿಬಿಗೆ ಪ್ರಕರಣ ಹಸ್ತಾಂತರ

ಬೆಂಗಳೂರು: ದೇಶಾದ್ಯಂತ ಸುದ್ದಿಯಾಗಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎನ್ಐಎ, ಕೇಂದ್ರ ಗುಪ್ತಚರ ಸೇರಿದಂತೆ ರಾಜ್ಯ ಪೊಲೀಸ್ ಇಲಾಖೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿವೆ.

ಆರೋಪಿಯು ಬಿಎಂಟಿಸಿ ಬಸ್​ನಲ್ಲಿ ಬಂದು ಕೆಫೆಯಲ್ಲಿ ರವೆ ಇಡ್ಲಿ ತಿಂದು ಟೈಮರ್ ಬಾಂಬ್ ಇಟ್ಟು ಸ್ಫೋಟಕ್ಕೆ ಕಾರಣನಾಗಿದ್ದ.‌ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಸಿಸಿಟಿವಿ ಮೊರೆಹೋಗಿದ್ದಾರೆ. ಕ್ಯಾಪ್ ಧರಿಸಿ ಕನ್ನಡಕ ಹಾಕಿಕೊಂಡು ಮುಖ ಚಹರೆ ತಿಳಿಯದಂತೆ ಬಾಂಬ್ ಇಟ್ಟುಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಅನುಮಾನಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.‌ ಮತ್ತೊಂದೆಡೆ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

ಸಿಸಿಬಿಗೆ ಪ್ರಕರಣ ಹಸ್ತಾಂತರ: ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿಕೊಂಡಿದ್ದ ಎಚ್​ಎಎಲ್ ಪೊಲೀಸರು ಇದೀಗ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿದ್ದಾರೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅಜ್ಞಾತಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡು ಆಯಾಮಗಳಿಂದ ತನಿಖೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಯಾವ ಕಾರಣಕ್ಕಾಗಿ ಬಾಂಬ್ ಸ್ಫೋಟ ಮಾಡಲಾಗಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ನಿಷೇಧಿತ ಭಯೋತ್ಪಾದನಾ ಸಂಘಟನೆಗಳ ಜೊತೆ ಸೇರಿ ಉದ್ದೇಶಪೂರ್ವಕವಾಗಿ ಉಪಹಾರ ಗೃಹದಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆಯಾ ಎಂಬ ಪ್ರಶ್ನೆ‌ಯೂ ಮೂಡಿದೆ‌. ಎಫ್​ಎಸ್​ಎಲ್ ಅಧಿಕಾರಿಗಳು ಸ್ಥಳದಲ್ಲಿ ಸ್ಫೋಟಕ್ಕೆ ಬಳಸಿರುವ ವಸ್ತುಗಳ ಪರಿಶೀಲನೆ ನಡೆಸಿ, ನಂತರ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಫೋಟ ಸ್ಥಳದಲ್ಲಿ ತಂತಿ, ಟೈಮರ್ ಮತ್ತು ಡಿಟೋನೇಟರ್‌ನೊಂದಿಗೆ ಅತ್ಯಾಧುನಿಕ ನಟ್‌ಗಳು ಮತ್ತು ಬೋಲ್ಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ನಿನ್ನೆ ತಡರಾತ್ರಿ ಸ್ಫೋಟದ ಸ್ಥಳದಿಂದ ಹೆಚ್ಚುವರಿ ಸಾಕ್ಷಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಯಾವ ರೀತಿಯ ಸ್ಫೋಟಕ ಎಂಬುದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಬಹಿರಂಗ ಆಗಲಿದೆ.

ವಿಧಿವಿಜ್ಞಾನ ಪರೀಕ್ಷೆಯಲ್ಲಿ ಮಾತ್ರ ಯಾವ ರೀತಿಯ ಸ್ಫೋಟಕ ಎನ್ನುವುದು ಬಹಿರಂಗ ಆಗಲಿದೆ. ಸ್ಫೋಟಕ್ಕೆ ಬಳಸಿರೋದು ಕಚ್ಚಾ IED ಅಲ್ಲ. ತಂತಿ, ಟೈಮರ್ ಮತ್ತು ಡಿಟೋನೇಟರ್‌ನೊಂದಿಗೆ ಅತ್ಯಾಧುನಿಕ ನಟ್‌ಗಳು ಮತ್ತು ಬೋಲ್ಟ್‌ಗಳನ್ನು ಬಿಗಿಯಾಗಿ ಪ್ಯಾಕ್ ಮಾಡಿ ಬ್ಯಾಗ್‌ನೊಳಗೆ ಪತ್ತೆಯಾಗಿವೆ. ನಿನ್ನೆ ತಡರಾತ್ರಿ ಸ್ಫೋಟದ ಸ್ಥಳದಿಂದ ಹೆಚ್ಚುವರಿ ಸಾಕ್ಷಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸದ್ಯ ಇದೊಂದು ಯೋಜಿತ ಪಿತೂರಿ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ರಾಮೇಶ್ವರಂ ಕೆಫೆ ಪ್ರಸಿದ್ಧಿಯಾಗಿದ್ದು, ಇಲ್ಲಿ ದಿನಕ್ಕೆ ನೂರಾರು ಸಂಖ್ಯೆಯ ಗ್ರಾಹಕರು ಬಂದು ಹೋಗುತ್ತಾರೆ. ಕುಂದಲಹಳ್ಳಿ ಸೇರಿದಂತೆ ಇಂದಿರಾನಗರ, ರಾಜಾಜಿನಗರದಲ್ಲಿ‌ ಕೆಫೆಯ ಶಾಖೆಗಳಿದ್ದು, ಬ್ಯುಸಿನೆಸ್ ಚೆನ್ನಾಗಿ ನಡೆಯುತಿತ್ತು. ಹೀಗಾಗಿ ಕೆಫೆ​ ವ್ಯವಹಾರ ಕೆಡಿಸಲು ಆರೋಪಿ ದುಷ್ಕೃತ್ಯ ಎಸಗಿದ್ದಾನಾ? ಎನ್ನುವ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬಾಂಬ್ ಸ್ಫೋಟದ ಬಗ್ಗೆ ಗಂಭೀರವಾಗಿ ತನಿಖೆ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

Last Updated : Mar 2, 2024, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.