ETV Bharat / state

ಸಂಸತ್​ನಲ್ಲಿ ಮೋದಿ ಪರ ಕೈ ಎತ್ತಬೇಕೆಂಬುದು ನನ್ನ ಕೊನೆಯ ಆಸೆ: ರಮೇಶ್ ಜಿಗಜಿಣಗಿ - Ramesh Jigajinagi

author img

By ETV Bharat Karnataka Team

Published : Apr 8, 2024, 6:21 PM IST

ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ರಮೇಶ್ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Ramesh jigajinagi
ರಮೇಶ್ ಜಿಗಜಿಣಗಿ

ಬಬಲೇಶ್ವರ(ವಿಜಯಪುರ): ವಿಕಸಿತ‌ ಭಾರತದ ಸಂಕಲ್ಪ ತೊಟ್ಟಿರುವ ಸಮರ್ಥ ನಾಯಕ ನರೇಂದ್ರ ಮೋದಿ ಮೂರನೇ ಬಾರಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ‌ ಸಾಧ್ಯವಿಲ್ಲ. ಅವರು ಮತ್ತೆ ಪ್ರಧಾನಿಯಾಗಲು ಸಂಸತ್​ನಲ್ಲಿ ನಾನು ಅವರ ಪರವಾಗಿ ಮತ್ತೆ ಕೈ ಎತ್ತಬೇಕೆಂಬುದು ನನ್ನ ಕೊನೆಯ ಆಸೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದ ಎನ್​ಡಿಎ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅಭಿಲಾಷೆ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣಾ ಪ್ರಚಾರಾರ್ಥ ಇಂದು ಬಬಲೇಶ್ವರ ಮತಕ್ಷೇತ್ರದ ಮಮದಾಪುರ ಬಿಜೆಪಿ ಮಹಾಶಕ್ತಿ‌ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ‌ ಅವರು ಮಾತನಾಡಿದರು.

ದೇಶದ ರಕ್ಷಣೆ ಮತ್ತು ಉಳಿವಿಗಾಗಿ ಈ ಹಿಂದೆ ಎರಡು ಬಾರಿ ಮೋದಿಯವರ ಪರವಾಗಿ ಕೈ ಎತ್ತಲು ವಿಜಯಪುರ ಜನ ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಇನ್ಮುಂದೆ ನಾನು‌ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಮೋದಿಯವರನ್ನು ಮೂರನೇ ಸಲ ಪ್ರಧಾನಿ ಮಾಡಲು ನಾನು ಈ ಬಾರಿಯೂ ಕೈ ಎತ್ತಬೇಕು ಎಂಬುದು ನನ್ನ ಕೊನೆಯ ಆಸೆ. ಹಾಗಾಗಿ ಈ ಬಾರಿಯೂ ವಿಜಯಪುರ ಜನತೆ ನನಗೆ ಆಶೀರ್ವದಿಸಬೇಕೆಂಬುದು ನನ್ನ ಪ್ರಾರ್ಥನೆ. ಪ್ರಧಾನಿಯಾಗಲು ಉತ್ಕೃಷ್ಠ ವ್ಯಕ್ತಿತ್ವ ಹೊಂದಿರುವ ಸಮರ್ಥ ನಾಯಕನಾಗಿರಬೇಕು. ಕಾಂಗ್ರೆಸ್​ನವರು ಪಪ್ಪು ಎಂದು ಕರೆಯುವ ಹುಡುಗನನ್ನು ದೇಶದ ಪ್ರಧಾನಿ ಮಾಡಲು ಹೊರಟಿದ್ದಾರೆ. ಇಂತಹ ವ್ಯಕ್ತಿಯನ್ನು ಜನ ಒಪ್ಪಲು ಸಾಧ್ಯವೇ ಎಂದು ಜಿಗಜಿಣಗಿ ಪ್ರಶ್ನಿಸಿದರು.

ಈ ಹಿಂದೆ ನಾನು ಚಿಕ್ಕೋಡಿ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಜನ ನನ್ನನ್ನು ಲಕ್ಷಾಂತರ‌ ಮತಗಳ ಅಂತರದಿಂದ‌ ಗೆಲ್ಲಿಸಿದರು. ರಾಮಕೃಷ್ಣ ಹೆಗಡೆ ನಿಧನದ ನಂತರ ಬಹಳಷ್ಟು ಜನ ನನಗೆ ಕಾಂಗ್ರೆಸ್ ಸೇರಿಕೊಳ್ಳುವಂತೆ ಒತ್ತಡ ಹಾಕಿದರು. ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕೇವಲ 6 ಅಡಿ ಜಾಗವನ್ನೂ ನೀಡಲಿಲ್ಲ. ಅಂತಹ ಪಕ್ಷಕ್ಕೆ ನಾನು ಸೇರುವುದಿಲ್ಲ ಎಂದು ತಿರಸ್ಕರಿಸಿದೆ. ಆಗಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿ ನಾನು ಬಿಜೆಪಿ ಸೇರಿಕೊಂಡೆ.‌ ಅಂದಿನಿಂದ ಇಂದಿನವರೆಗೂ ಬಿಜೆಪಿಯಲ್ಲಿ ನಿಷ್ಠನಾಗಿದ್ದೇನೆ ಎಂದರು.

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 2004ರಿಂದ ವಿಜಯಪುರ ಜನ ಸತತ ಮೂರು ಬಾರಿ ನನ್ನನ್ನು ಆರಿಸಿದ್ದೀರಿ. ಹಾಗೆಂದು ನಾನು ಸುಮ್ಮನೆ ಕೂಡದೇ ಮತಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಕಾಂಗ್ರೆಸ್ ಸಂಸದರಾರೂ ತರಲಾರದಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ‌ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಹೇಗೆ ದೈವಿಶಕ್ತಿ ಇದೆಯೋ ವಿಜಯಪುರದಲ್ಲಿ ಜಿಗಜಿಣಗಿಗೂ ದೈವಿ ಶಕ್ತಿ ಇದೆ: ಸಂಸದ ರಮೇಶ್​ ಜಿಗಜಿಣಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.