15 ವರ್ಷಗಳ ಹಿಂದಿನ ನಾಣ್ಯ, ನೋಟಿನಲ್ಲಿ ಮೂಡಿಬಂದ ರಾಮಮಂದಿರ

author img

By ETV Bharat Karnataka Desk

Published : Jan 21, 2024, 10:28 AM IST

Updated : Jan 21, 2024, 11:42 AM IST

rama mandir

ಹಳೆಯ ನಾಣ್ಯ ಹಾಗೂ ನೋಟುಗಳಿಂದ ಇಲ್ಲೊಬ್ಬ ವ್ಯಕ್ತಿ ತಮ್ಮ ಮನೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದ್ದಾರೆ.

ಹುಬ್ಬಳ್ಳಿ: ದೇಶಾದ್ಯಂತ ರಾಮ‌ಲಲ್ಲಾನ ಜಪ ಮುಂದುವರೆದಿದೆ. ಪ್ರಭು ಶ್ರೀರಾಮನ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಹವ್ಯಾಸಿ ನಾಣ್ಯ ಹಾಗು ನೋಟು ಸಂಗ್ರಹಕಾರರು ವಿಶೇಷ ರಾಮ ಮಂದಿರ ರಚಿಸಿ ಗಮನ ಸೆಳೆದಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಸವೇಶರ ನಗರದ ಸುನೀಲ್​ ಕಮ್ಮಾರ ಎಂಬವರೇ ನಾಣ್ಯಗಳಲ್ಲಿ ದೇವಾಲಯ ರಚಿಸಿದವರು. ಜ.22ರಂದು ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ 15 ವರ್ಷಗಳ ಹಿಂದಿನ ನಾಣ್ಯಗಳನ್ನು ಬಳಸಿ ಮನೆಯಲ್ಲಿ ಮಂದಿರ ರಚಿಸಿ ಭಕ್ತಿ ಮೆರೆದಿದ್ದಾರೆ‌‌.

ಇದಕ್ಕೂ ಮುನ್ನ ಎರಡು ಬಾರಿ ಮಂದಿರ ರಚಿಸಲು ಯತ್ನಿಸಿ ಇವರು ವಿಫಲರಾಗಿದ್ದರು. ಆದರೆ ಛಲ ಬಿಡದೆ ಮೂರನೇ ಬಾರಿಗೆ ಜೈ ಶ್ರೀರಾಮ ಘೋಷಣೆಯೊಂದಿಗೆ ನಾಣ್ಯ ಹಾಗೂ ನೋಟುಗಳನ್ನು ಜೋಡಿಸುತ್ತಾ ಸುಂದರ ಮಂದಿರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಐದೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ನಾಳೆಯವರೆಗೆ ಇದನ್ನು ನೋಡುವ ಅವಕಾಶ ಮಾಡಿಕೊಟ್ಟಿದ್ದಾರೆ. "ನಾವು ಅಯೋಧ್ಯೆಗೆ ಹೋಗಿ‌ ಮಂದಿರ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ‌ಇಲ್ಲಿಯೇ ನಿರ್ಮಾಣ ಮಾಡಿದ್ದೇನೆ" ಎಂದು ಸುನೀಲ್​ ಹೇಳಿದರು.

ರಾಮಮಂದಿರ ರಚಿಸಲು 955ಕ್ಕೂ ಅಧಿಕ ನಾಣ್ಯ, 83ಕ್ಕೂ ಅಧಿಕ ನೋಟು ಬಳಕೆ ಮಾಡಲಾಗಿದೆ. ಬೆಳ್ಳಿ, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ, ಸ್ಟೈನ್‌ಲೆಸ್ ಸ್ಟೀಲ್ ನಾಣ್ಯಗಳನ್ನು ಬಳಸಲಾಗಿದೆ‌. ಗೋಪುರ ರಚನೆಗೆ ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣನ ಜೊತೆಗೆ ಹನುಮಾನ್ ಭಾವಚಿತ್ರವಿರುವ ನಾಣ್ಯ ಬಳಸಿರುವುದು ವಿಶೇಷ.

karwar
ವಿದ್ಯಾರ್ಥಿಗಳಿಂದ ಮೂಡಿ ಬಂದ 'ಜಯ ಶ್ರೀರಾಮ'

ಕುಮಟಾದಲ್ಲಿ ವಿದ್ಯಾರ್ಥಿಗಳಿಂದ ವಿಶೇಷ ರಾಮವಂದನೆ: ಕಾರವಾರದ ಕೊಂಕಣ ಎಜುಕೇಶನ್​ ಟ್ರಸ್ಟ್​ನ ಸರಸ್ವತಿ ವಿದ್ಯಾಕೇಂದ್ರದ 300 ವಿದ್ಯಾರ್ಥಿಗಳು ಸೇರಿ ಸರತಿ ಸಾಲಿನಲ್ಲಿ ನಿಂತು ಸಂಸ್ಕೃತ ಭಾಷೆಯಲ್ಲಿ 'ಜಯ ಶ್ರೀರಾಮ' ಎಂಬುದಾಗಿ ಬರೆದಿದ್ದಾರೆ. ಇದರ ಜೊತೆಯಲ್ಲಿ ಕೋದಂಡರಾಮನ ಬಿಲ್ಲು, ಬಾಣವನ್ನು ರಚಿಸಿ ರಾಮವಂದನೆ ಸಲ್ಲಿಸಿದ್ದಾರೆ. ಫುಲ್‌ಫ್ರೇಮ್​ ಫೋಟೋಗ್ರಫಿಯ ಗಜು ಹೆಗಡೆ ಎಂಬವರು ವಿದ್ಯಾರ್ಥಿಗಳ ಈ ವಿಶೇಷ ರಾಮವಂದನೆಯ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಮಕ್ಕಳ ವಿಭಿನ್ನ ಪ್ರಯತ್ನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: 20 ವರ್ಷದ ಹಿಂದೆ ಮನೆ ಹೆಬ್ಬಾಗಿಲಿನಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ ನಿತ್ಯ ಪೂಜೆ.. ಭಕ್ತ ಮಹಾದೇವಪ್ಪನ ಕಾರ್ಯಕ್ಕೆ ಶ್ಲಾಘನೆ

Last Updated :Jan 21, 2024, 11:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.