ETV Bharat / state

ರಾಜ್ಯಸಭೆ ಚುನಾವಣೆ: ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ

author img

By ETV Bharat Karnataka Team

Published : Feb 8, 2024, 5:47 PM IST

ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಪಕ್ಷೇತರ ಅಭ್ಯರ್ಥಿಯಾಗಿ ಡಾ. ಕೆ. ಪದ್ಮರಾಜನ್​ ಎಂಬುವರು ನಾಮಪತ್ರ ಸಲ್ಲಿಸಿದರು.

ರಾಜ್ಯಸಭೆ ಚುನಾವಣೆ: ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ
ರಾಜ್ಯಸಭೆ ಚುನಾವಣೆ: ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ

ಬೆಂಗಳೂರು: ರಾಜ್ಯಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲನೆಯ ದಿನವಾದ ಇಂದು ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ವಿಧಾನಸೌಧದಲ್ಲಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ಡಾ. ಕೆ.ಪದ್ಮರಾಜನ್ ಎಂಬುವವರು ನಾಮಪತ್ರ ಸಲ್ಲಿಸಿದರು.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕ ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಇಂದು ಅಧಿಸೂಚನೆ ಹೊರಬಿದ್ದಿದ್ದು, ಇಂದಿನಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. ಫೆ.15 ನಾಮಪತ್ರಗಳ ಸಲ್ಲಿಕೆಗೆ ಕಡೆದಿನವಾಗಿದ್ದು, ಫೆ.16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಫೆ.20 ರವರೆಗೂ ಕಾಲಾವಕಾಶವಿದೆ. ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೆ. ಫೆ.27 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯಸಭಾ ಸ್ಥಾನದಿಂದ ಏಪ್ರಿಲ್ 2 ರಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸದಸ್ಯರಾದ ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಹಾಗೂ ಸಯ್ಯದ್ ನಾಸಿರ್ ಹುಸೇನ್‍ ಅವರು ನಿವೃತ್ತಿಯಾಗಲಿದ್ದಾರೆ. ರಾಜೀವ್ ಚಂದ್ರಶೇಖರ್ ಬಿಜೆಪಿಯಿಂದ ಚುನಾಯಿತರಾಗಿದ್ದರೆ, ಉಳಿದ ಮೂವರು ಸದಸ್ಯರು ಕಾಂಗ್ರೆಸ್‍ನಿಂದ ಚುನಾಯಿತರಾಗಿದ್ದರು. ಇವರ ನಿವೃತ್ತಿಯಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

15 ರಾಜ್ಯಗಳಲ್ಲಿ ಚುನಾವಣೆ: ಕರ್ನಾಟಕ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ತೆರವಾಗುವ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಉದ್ದೇಶಿರುವ ಸ್ಥಾನಗಳ ಅವಧಿಯು ಏಪ್ರಿಲ್ 2ಕ್ಕೆ ಮುಕ್ತಾಯಗೊಳ್ಳಲಿದೆ. ಸಂಸದರ ಸ್ಥಾನ ತೆರವಾಗುವ ನಿಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ಗರಿಷ್ಠ 10 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ 6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ತಲಾ 5, ಕರ್ನಾಟಕ ಮತ್ತು ಗುಜರಾತ್‌ನಿಂದ ತಲಾ 4, ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ತಲಾ ಮೂರು, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶದಿಂದ ತಲಾ ಒಬ್ಬ ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ.

ರಾಜ್ಯಸಭೆಯು ಸಂಸತ್ತಿನ ಮೇಲ್ಮನೆಯಾಗಿದೆ. ಅಲ್ಲಿನ ಸದಸ್ಯರನ್ನು ರಾಜ್ಯಗಳ ವಿಧಾನಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಅವರು ನೀಡುವ ಒಂದು ಮತದ ಮೂಲಕ ಅನುಪಾತದ ಪ್ರಾತಿನಿಧ್ಯದ ಮೇಲೆ ಆಯ್ಕೆಯಾಗಲಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿ ಆಯ್ಕೆ ನಿರ್ಧಾರದ ಅಧಿಕಾರ ವಿಜಯೇಂದ್ರ ಹೆಗಲಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.