ETV Bharat / state

ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭ: ಬಿಜೆಪಿ - ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದ ಆರ್. ಅಶೋಕ್

author img

By ETV Bharat Karnataka Team

Published : Feb 27, 2024, 9:40 AM IST

Updated : Feb 27, 2024, 10:19 AM IST

ರಾಜ್ಯಸಭೆ ಚುನಾವಣಾ ಅಖಾಡ ರಂಗೇರಿದೆ. ರಾಜ್ಯದಿಂದ ಐವರು ಅಭ್ಯರ್ಥಿಗಳು ಇದೀಗ ಕಣದಲ್ಲಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಮತದಾನ ಶುರುವಾಗಿದ್ದು ಸಂಜೆ 4 ಗಂಟೆವರೆಗೂ ನಡೆಯಲಿದೆ.

ರಾಜ್ಯಸಭೆ ಚುನಾವಣೆ
ರಾಜ್ಯಸಭೆ ಚುನಾವಣೆ

ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭ

ಬೆಂಗಳೂರು : ಕರ್ನಾಟಕದ ರಾಜ್ಯಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿಯ ಶಾಸಕ ಸುರೇಶ್​ ಕುಮಾರ್​​ ಮೊದಲ ಮತದಾನ ಮಾಡಿದರು. ವಿಧಾನಸೌಧದಲ್ಲಿ ಇಂದು ಬೆಳಗ್ಗೆ 9 ರಿಂದ ಆರಂಭವಾಗಿರುವ ಮತದಾನ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ರಾಜ್ಯಸಭೆ ಚುನಾವಣೆಗಾಗಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹೀಗಾಗಿ ರಾಜ್ಯಸಭೆ ರಣಕಣ ರಂಗೇರಿದ್ದು, ನಂಬರ್ ಗೇಮ್ ಕಸರತ್ತು ಶುರುವಾಗಿದೆ.

ಕಾಂಗ್ರೆಸ್ ರಾಜ್ಯದಿಂದ ಅಜಯ್ ಮಕೇನ್, ಸಯ್ಯದ್ ನಸೀರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿ ನಾರಾಯಣಸಾ ಬಾಂಡಗೆಯನ್ನು ಕಣಕ್ಕಿಳಿಸಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಐದನೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ರಾಜ್ಯಸಭೆ ಚುನಾವಣಾ ಅಖಾಡ ಕಳೆಗಟ್ಟುವಂತೆ ಮಾಡಿದೆ.

ಅಭ್ಯರ್ಥಿಗಳ ಗೆಲುವಿಗೆ ಬೇಕಿದೆ 45 ಮೊದಲ ಪ್ರಾಶಸ್ತ್ಯದ ಮತಗಳು: ಅಭ್ಯರ್ಥಿಯ ಗೆಲುವಿಗೆ 45 ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ. ಕಾಂಗ್ರೆಸ್ ಶಾಸಕರ ಬಲ ಸದ್ಯಕ್ಕೆ 134 ಇದೆ. ಬಿಜೆಪಿ 66 ಶಾಸಕರ ಬಲ ಹೊಂದಿದೆ. ಇತ್ತ ಜೆಡಿಎಸ್ 19 ಶಾಸಕರ ಬಲ ಹೊಂದಿದೆ. ಸರ್ವೋದಯ ಕರ್ನಾಟಕ‌ ಪಕ್ಷದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾದ ಲತಾ ಮಲ್ಲಿಕಾರ್ಜುನ, ಗೌರಿಬಿದನೂರು ಶಾಸಕ ಪುಟ್ಟ ಸ್ವಾಮಿಗೌಡ ಮತಗಳು ಈಗ ನಿರ್ಣಾಯಕವಾಗಿವೆ.

ವಿಧಾನಸೌಧದ ಮೊದಲ ಮಹಡಿಯಲ್ಲಿ ಮತದಾನ: ಮತದಾನಕ್ಕೂ ಮೊದಲು ರಾಜ್ಯ ಸಭೆ ಚುನಾವಣೆಯ ವೀಕ್ಷಕರಾದ ಮನೋಜ್ ಕುಮಾರ್ ಮೀನಾ ಹಾಗೂ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ವಿಧಾನಸೌಧದ ಮೊದಲ ಮಹಡಿಯಲ್ಲಿನ ಮತಗಟ್ಟೆಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಕಾಂಗ್ರೆಸ್ ಶಾಸಕರು ಖಾಸಗಿ ಹೊಟೇಲ್​​ನಿಂದ ಬಸ್ ಮೂಲಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡಲಿದ್ದಾರೆ. ಇತ್ತ ಬಿಜೆಪಿ ಶಾಸಕರು ಹಾಗೂ ಜೆಡಿಎಸ್ ಶಾಸಕರು ಮತದಾನಕ್ಕೂ ಮೊದಲು ಸಭೆ ನಡೆಸಿದರು.

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಆರ್​ ಅಶೋಕ್​: ಬೆಳಗ್ಗೆ 9 ಗಂಟೆಯಿಂದ ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆ ಮತ್ತು ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲುವ ವಿಶ್ವಾಸವಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎನ್​ಡಿಎ ಅಭ್ಯರ್ಥಿ ಗೆಲ್ಲಿಸುವ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲ ಶಾಸಕರೊಂದಿಗೆ ಮಾತನಾಡಿದ್ದಾರೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಶಾಸಕ, ಚುನಾವಣಾ ಏಜೆಂಟ್ ಟಿ.ಸುನೀಲ್ ಕುಮಾರ್ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ನಾರಾಯಣ ಭಾಂಡಗೆ ಅವರಿಗೆ ನಮ್ಮ ಶಾಸಕರು ಮತ ಚಲಾಯಿಸುತ್ತಾರೆ ಎಂದು ತಿಳಿಸಿದರು.

ಹೆಚ್ಚುವರಿ ಮತಗಳನ್ನು ಎನ್​ಡಿಎ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ. ಬಿಜೆಪಿ ಎಲ್ಲ ಶಾಸಕರು ಮಧ್ಯಾಹ್ನ 12 ಗಂಟೆ ಒಳಗೆ ಪೂರ್ಣವಾಗಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ. ನಮಗೆ 45 ಮತಗಳು ಗೆಲ್ಲಲು ಬೇಕಾಗುತ್ತದೆ. ಬಿಜೆಪಿಯಿಂದ ಯಾವುದೇ ಅಡ್ಡ ಮತದಾನ ಆಗುವುದಿಲ್ಲ ಎಂದರು.

ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ದುಡ್ಡು ಕೊಟ್ಟು ಕೊಂಡುಕೊಳ್ಳುವ ಮತಗಳನ್ನು ಕೇಳಿಲ್ಲ. ವಿಶ್ವಾಸದ ಮತಗಳನ್ನು ಕೇಳಿದ್ದೇನೆ. ಆ ಪಕ್ಷ ಈ ಪಕ್ಷ ಅಂತ ಕೇಳಿಲ್ಲ. ಎಲ್ಲ ಪಕ್ಷದವರನ್ನು ಮತ ಕೇಳಿದ್ದೇನೆ. ವಿಶ್ವಾಸದ ಮತಗಳಲ್ಲಿ ನನಗೆ ನಂಬಿಕೆ ಇದೆ. ಕಾಂಗ್ರೆಸ್ನವರು ಹೊಸ ಸಿಸ್ಟಮ್ ಅನ್ನು ತಂದಿದ್ದಾರೆ. ಬೆದರಿಕೆ ಹಾಕಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂದು ಹೇಳಿದರು.

ನಾಲ್ಕು ಸ್ಥಾನ, ಐವರು ಅಭ್ಯರ್ಥಿಗಳು: ಕುತೂಹಲ ಕೆರಳಿಸಿದ ರಾಜ್ಯಸಭೆ ಚುನಾವಣಾ ಅಖಾಡ

ರಾಜ್ಯಸಭೆ ಚುನಾವಣೆ: ಕ್ರಾಸ್‌ ವೋಟಿಂಗ್‌ ಭೀತಿ, ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗೆ ಮತದಾನ ತರಬೇತಿ

Last Updated : Feb 27, 2024, 10:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.