ETV Bharat / state

ರಾಜ್ಯಸಭೆ ಚುನಾವಣೆ: ಹೈಡ್ರಾಮ ನಡೆದರೆ ಮಾತ್ರ ಅನಿರೀಕ್ಷಿತ ಅಭ್ಯರ್ಥಿ ಗೆಲ್ಲಲು ಸಾಧ್ಯ!

author img

By ETV Bharat Karnataka Team

Published : Feb 26, 2024, 7:37 PM IST

ನಾಲ್ಕು ಸ್ಥಾನಗಳಿಗೆ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾರ ಕೊರಳಿಗೆ ಗೆಲುವಿನ ಹಾರ ಎಂಬುದು ಮಂಗಳವಾರ ಗೊತ್ತಾಗಲಿದೆ.

Rajya Sabha elections
ರಾಜ್ಯಸಭೆ ಚುನಾವಣೆ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಹೈಡ್ರಾಮ ನಡೆದರೆ ಮಾತ್ರ ಅನಿರೀಕ್ಷಿತ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಅಜಯ್ ಮಾಕನ್, ನಾಸಿರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಸ್ಪರ್ಧಾ ಕಣದಲ್ಲಿದ್ದು, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದಾರೆ.

ಹೀಗಿದೆ ಗೆಲುವಿನ ಲೆಕ್ಕ: ಹಾಲಿ ವಿಧಾನಸಭೆಯಲ್ಲಿ 223 ಸದಸ್ಯರ ಬಲವಿದೆ. ತಲಾ 45 ಮತಗಳನ್ನು ಪಡೆಯುವ ಅಭ್ಯರ್ಥಿಗಳು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ತನ್ನ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಬಿಜೆಪಿ ನಿಗದಿ ಮಾಡುವ ಮತಗಳ ಸಂಖ್ಯೆಯ ಮೇಲೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪಡೆಯಬೇಕಾದ ಮತಗಳ ಸಂಖ್ಯೆ ನಿರ್ಧಾರವಾಗುತ್ತದೆ.

ಮೂಲಗಳ ಪ್ರಕಾರ, ತನ್ನ ಅಭ್ಯರ್ಥಿಗೆ ಬಿಜೆಪಿ ಕನಿಷ್ಠ 47 ಮತಗಳನ್ನು ನಿಗದಿ ಮಾಡಲಿದ್ದಾರೆ. ಉಳಿದಂತೆ 19 ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರಿಗೆ ನೀಡಲಿದೆ. ಹೀಗಾಗಿ ಸದ್ಯದ ಲೆಕ್ಕಾಚಾರದ ಪ್ರಕಾರ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ 38 ಮತಗಳು ಸಿಗುವುದು ಬಹುತೇಕ ನಿಶ್ವಿತ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ 7 ಮತಗಳನ್ನು ಕಾಂಗ್ರೆಸ್ ಇಲ್ಲವೇ ಪಕ್ಷೇತರ ಸದಸ್ಯರ ಕೂಟದಿಂದ ಸೆಳೆಯುವ ಅನಿವಾರ್ಯತೆ ಇದೆ.

ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ತನಗಿರುವ ದೊಡ್ಡ ಮಟ್ಟದ ಶಾಸಕ ಬಲದೊಂದಿಗೆ ಪಕ್ಷೇತರ ಶಾಸಕರಿಗೂ ಗಾಳ ಹಾಕಿದ್ದು, ಕರ್ನಾಟಕ ಪ್ರಗತಿ ವಿಕಾಸ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ನಾಲ್ಕು ಮಂದಿ ಪಕ್ಷೇತರರ ಬೆಂಬಲವನ್ನು ಬಹಿರಂಗವಾಗಿ ಕೇಳಿದೆ. ಕಾಂಗ್ರೆಸ್ ಪಕ್ಷದ ಈ ತಂತ್ರಕ್ಕೆ ಕುಪೇಂದ್ರ ರೆಡ್ಡಿ ತಿರುಗೇಟು ಹೊಡೆದು ಪಕ್ಷೇತರರ ಪಾಳೇಪಟ್ಟಿನಿಂದ ಎಷ್ಟು ಮತಗಳನ್ನು ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಉಳಿದಂತೆ, ಆಡಳಿತಾರೂಢ ಕಾಂಗ್ರೆಸ್ಸಿನ ಪಾಳಯದಿಂದ ಕೆಲವರನ್ನು ಸೆಳೆದು ತರುವ ಯತ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ನಡೆದಿದ್ದು, ಇಂತಹ ಪ್ರಯತ್ನ ಮಾಡುವಾಗ ಅವರು ತಮ್ಮ ಪಕ್ಷದ ಶಾಸಕರಿಗೆ ಆಫರ್ ಕೊಡುವುದಲ್ಲದೆ, ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದರು. ಈ ಮಧ್ಯೆ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಮೂರೂ ರಾಜಕೀಯ ಪಕ್ಷಗಳ ನಾಯಕರು ಇಂದು ಕಸರತ್ತು ನಡೆಸಿದ್ದಲ್ಲದೆ, ಪ್ರತ್ಯೇಕ ಸಭೆಗಳನ್ನು ನಡೆಸಿ, ಮತದಾನ ಮಾಡುವುದು ಹೇಗೆ? ಎಂಬುವುದರಿಂದ ಹಿಡಿದು ಶಾಸಕರ ಮತಗಳು ಕೈ ತಪ್ಪಬಾರದು ಎಂಬ ಕಾರಣಕ್ಕೆ ಮಾಹಿತಿ ನೀಡಿವೆ.

ವಿಪ್ ಜಾರಿ: ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ವಿಪ್ ನೀಡಿದ್ದು, ಎಚ್ಚರಿಕೆಯಿಂದ ಮತ ಚಲಾಯಿಸುವಂತೆ ಸೂಚನೆ ನೀಡಿವೆ.

ಇದನ್ನೂ ಓದಿ: ನಾಲ್ಕು ಸ್ಥಾನ, ಐವರು ಅಭ್ಯರ್ಥಿಗಳು: ಕುತೂಹಲ ಕೆರಳಿಸಿದ ರಾಜ್ಯಸಭೆ ಚುನಾವಣಾ ಅಖಾಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.