ETV Bharat / state

ರಾಜ್ಯಸಭಾ ಚುನಾವಣೆ: ಅಭ್ಯರ್ಥಿಗಳ ಆಯ್ಕೆಯ ಚರ್ಚೆಗೆ ಬಿ ವೈ ವಿಜಯೇಂದ್ರ ನಾಳೆ ದೆಹಲಿಗೆ

author img

By ETV Bharat Karnataka Team

Published : Feb 7, 2024, 7:41 PM IST

ರಾಜ್ಯಸಭಾ ಚುನಾವಣೆ ಹಾಗೂ ಮುಂಬರುವ ವಿಧಾನಪರಿಷತ್​​ನ ನಾಲ್ಕು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಳೆ ದೆಹಲಿಗೆ ತೆರಳುತ್ತಿದ್ದಾರೆ.

rajya-sabha-elections-by-vijayendra-to-meet-high-command-to-discuss-on-candidates
ರಾಜ್ಯಸಭಾ ಚುನಾವಣೆ: ಅಭ್ಯರ್ಥಿಗಳ ಆಯ್ಕೆ ಚರ್ಚೆಗೆ ನಾಳೆ ದೆಹಲಿಗೆ ವಿಜಯೇಂದ್ರ

ಬೆಂಗಳೂರು: ಪ್ರಸ್ತುತ ಘೋಷಣೆಯಾಗಿರುವ ರಾಜ್ಯಸಭಾ ಚುನಾವಣೆ ಹಾಗೂ ಸದ್ಯದಲ್ಲೇ ಎದುರಾಗಲಿರುವ ವಿಧಾನಪರಿಷತ್​​ ಚುನಾವಣೆಯ ನಾಲ್ಕು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ದೆಹಲಿಗೆ ತೆರಳುತ್ತಿದ್ದಾರೆ.

ಫೆಬ್ರವರಿ 27ರಂದು ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿಗೆ ಒಂದು ಸ್ಥಾನ ಖಚಿತವಾಗಿದೆ. ಆದರೆ ಅಭ್ಯರ್ಥಿ ಯಾರು ಎನ್ನುವ ವಿಚಾರದಲ್ಲಿ ನಿರ್ಧಾರವಾಗಿಲ್ಲ. ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತೊಂದು ಅವಧಿಗೆ ಮುಂದುವರೆಯುವ ಅಪೇಕ್ಷೆ ಹೊಂದಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರುವ ಅಧಿಕಾರವನ್ನು ವಿಜಯೇಂದ್ರ ಅವರಿಗೆ ನೀಡಲಾಗಿದೆ.

ಹಾಲಿ ಸದಸ್ಯರನ್ನೇ ಪುನರಾಯ್ಕೆ ಮಾಡಲು ಬಯಸಿದ್ದರೆ ಅಭ್ಯರ್ಥಿ ಹೆಸರು ಶಿಫಾರಸ್ಸು ಮಾಡುವುದು ಬೇಡ, ಹೊಸಬರಿಗೆ ಅವಕಾಶ ನೀಡುವ ನಿರ್ಧಾರ ಮಾಡಿದಲ್ಲಿ ಅಥವಾ ಎರಡನೇ ಅಭ್ಯರ್ಥಿ ಕಣಕ್ಕಿಳಿಸಲು ಸೂಚಿಸಿದಲ್ಲಿ ಮಾತ್ರ ಅಭ್ಯರ್ಥಿ ಹೆಸರು ಶಿಫಾರಸು ಮಾಡುವಂತೆ ಈಗಾಗಲೇ ರಾಜ್ಯ ಕೋರ್ ಕಮಿಟಿ ನಿರ್ಧರಿಸಿದೆ. ಈ ವಿಷಯವನ್ನೂ ಪ್ರಸ್ತಾಪಿಸಿ ವಿಜಯೇಂದ್ರ ಚರ್ಚೆ ನಡೆಸಲಿದ್ದಾರೆ. ಒಂದು ವೇಳೆ ಎರಡನೇ ಸ್ಥಾನ ಜೆಡಿಎಸ್​​ಗೆ ಕೊಡಬೇಕು ಎನ್ನುವ ಚಿಂತನೆ ಇದ್ದರೆ, ಆ ಬಗ್ಗೆಯೂ ಚರ್ಚಿಸಿ ಹೈಕಮಾಂಡ್ ಅಭಿಪ್ರಾಯ ಪಡೆದುಕೊಳ್ಳಲಿದ್ದಾರೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನ ಪರಿಷತ್​​ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದಕ್ಕೂ ಅಭ್ಯರ್ಥಿಗಳ ಆಯ್ಕೆ ಕುರಿತು ಈಗಲೇ ಚರ್ಚಿಸಿ ನಿರ್ಧಾರಕ್ಕೆ ಬರಲು ಹೈಕಮಾಂಡ್ ಜೊತೆ ಮಾತುಕತೆ ನಡೆಸಲಾಗುತ್ತದೆ. ಬೆಂಗಳೂರು ಪದವೀಧರರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಆಗ್ನೆಯ ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇದರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿದ್ದು, ಆ ಸ್ಥಾನವನ್ನು ಮಿತ್ರಪಕ್ಷ ಜೆಡಿಎಸ್​​ಗೆ ನೀಡಲಾಗಿದೆ. ಹಾಗಾಗಿ, ಉಳಿದ ನಾಲ್ಕು ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ವಿಚಾರ ಹಾಗೂ ಮೈತ್ರಿ ಧರ್ಮಪಾಲನೆ ಕುರಿತು ವಿಜಯೇಂದ್ರ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಬಿ. ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ. ದೇವೇಗೌಡ, ಆಗ್ನೆಯ ಶಿಕ್ಷಕರ ಕ್ಷೇತ್ರದಿಂದ ವೈ.ಎ ನಾರಾಯಣಸ್ವಾಮಿ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ಅವರ ಅವಧಿ 2024ರ ಜೂನ್ 21ಕ್ಕೆ ಕೊನೆ ಆಗಲಿದೆ. ನೈರುತ್ಯ ಪದವೀಧರ ಕ್ಷೇತ್ರದ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ರಾಜೀನಾಮೆ ನೀಡಿದ್ದು, ಈ ಸ್ಥಾನದ ಅವಧಿ 2024ರ ಜೂನ್​ವರೆಗೆ ಮಾತ್ರ ಇರುವ ಕಾರಣ ಉಪ ಚುನಾವಣೆ ಮಾಡುತ್ತಿಲ್ಲ. ಆದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಸದಸ್ಯರಾಗಿದ್ದ ಪುಟ್ಟಣ್ಣ ಮಾರ್ಚ್ 16ರಂದು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನದ ಅವಧಿ 2026ರ ನವೆಂಬರ್​ 11ರ ವರೆಗೆ ಇದೆ. ಹೀಗಾಗಿ ಉಪ ಚುನಾವಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ನಮ್ಮ ಪಕ್ಷದ ತತ್ವ ಸಿದ್ಧಾಂತವೇ ಬೇರೆ, ಬಿಜೆಪಿ ತತ್ವ ಸಿದ್ಧಾಂತವೇ ಬೇರೆ: ಜಿ.ಟಿ.ದೇವೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.