ETV Bharat / state

ಕಾಂಗ್ರೆಸ್ ಸೃಷ್ಟಿಸಿರುವ ಭಯದ ವಾತಾವರಣಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು: ಅಶೋಕ್, ವಿಜಯೇಂದ್ರ ಆಗ್ರಹ - Lok Sabha Election

author img

By ETV Bharat Karnataka Team

Published : Apr 11, 2024, 11:40 AM IST

ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ ಹಾಗೂ ವಿಶ್ವಾಸ ತುಂಬುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

r-ashok-and-by-vijayendra-post-on-bjp-activist-assault-case
ಕಾಂಗ್ರೆಸ್ ಸೃಷ್ಟಿಸಿರುವ ಭಯದ ವಾತಾವರಣಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು: ಅಶೋಕ್, ವಿಜಯೇಂದ್ರ ಆಗ್ರಹ

ಬೆಂಗಳೂರು: ''ಸೋಲುವ ಭಯದಿಂದಾಗಿ ಡಿಕೆ ಸಹೋದರರು ಗೂಂಡಾಗಿರಿಗೆ ಇಳಿದು ಭಯದ ವಾತಾವರಣ ಸೃಷ್ಟಿಸುತ್ತಿದ್ದು, ಕೂಡಲೇ ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮ ಕೈಗೊಂಡು ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ, ವಿಶ್ವಾಸ ತುಂಬುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

''ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರಂಟಿ ಆಗುತ್ತಿದ್ದಂತೆ, ಶಾಶ್ವತವಾಗಿ ಸಿಎಂ ಇನ್ ವೈಟಿಂಗ್ (CM-in-Waiting) ಆಗಿ ಉಳಿಯಬೇಕಾಗುತ್ತಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ'' ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​​ ಮೂಲಕ ಅಶೋಕ್ ಆರೋಪಿಸಿದ್ದಾರೆ.

''ಬಿಜೆಪಿ ಕಾರ್ಯಕರ್ತ‌ ಸಹೋದರ ನವೀನ್ ಮೇಲೆ ಕಾಂಗ್ರೆಸ್​​ನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೇ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯನವರೇ? ಸ್ಟ್ರಾಂಗ್ ಸಿಎಂ ಎಂದು ಹೇಳಿಕೊಳ್ಳುವ ನೀವು ಡಿಕೆ ಸಹೋದರರ ಮುಂದೆ ಅಷ್ಟೊಂದು ವೀಕ್ ಯಾಕಾಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡುವ ವಾತಾವರಣ ಕೆಡಿಸಿ, ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಈ ದುಷ್ಕೃತ್ಯಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು'' ಎಂದು ಅಶೋಕ್​ ಒತ್ತಾಯಿಸಿದ್ದಾರೆ.

ವಿಜಯೇಂದ್ರ ಆರೋಪ: ''ಹಣ, ಹೆಂಡ ಹಾಗೂ ತೋಳ್ಬಲದ ಗೂಂಡಾಗಿರಿ ರಾಜಕೀಯಕ್ಕೆ ಹೆಸರಾಗಿರುವ ರಾಜ್ಯ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಬಂಡೆ ಪುಡಿ ಪುಡಿಯಾಗುವ ವಾತಾವರಣ ಉದ್ಭವಿಸಿರುವ ಹಿನ್ನೆಲೆಯಲ್ಲಿ ಹತಾಶರಾಗಿದ್ದಾರೆ. ಇವರಿಗೆ ವಿರುದ್ಧವಾಗಿ ನಿಂತಿರುವ ಮತದಾರರು ಹಾಗೂ ಬಿಜೆಪಿ - ಜೆಡಿಎಸ್ ಕಾರ್ಯಕರ್ತರ ಮೇಲೆ ಅಮಾನುಷ ಹಲ್ಲೆ ನಡೆಸಿ, ಕ್ಷೇತ್ರದಲ್ಲಿ ಭಯ ಮೂಡಿಸುವ ಕೃತ್ಯ ಆರಂಭಿಸಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್​ನಲ್ಲಿ ಆರೋಪಿಸಿದ್ದಾರೆ.

''ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ‌ ಶೇಖರ್ ಅವರ ಮೇಲೆ ಕಾಂಗ್ರೆಸ್​​ನ ಗೂಂಡಾ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೇ ಇರುವುದು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.‌ ಜಿಲ್ಲೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಡಿ.ಕೆ. ಬ್ರದರ್ಸ್ ಅಧಿಕಾರ ದರ್ಪ ನೆತ್ತಿಗೇರಿದಂತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮತದಾರರನ್ನು ಬೆದರಿಸುವ ಕೆಲಸ ಮುಂದಾಗಿರುವುದು ಅಕ್ಷಮ್ಯ ಅಪರಾಧ'' ಎಂದಿದ್ದಾರೆ.

''ಕೂಡಲೇ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಕಾಂಗ್ರೆಸ್ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡು ನಿಷ್ಪಕ್ಷಪಾತ ತನಿಖೆ ನಡೆಸಿ, ಶಾಂತಿಯುತ ಮತದಾನ ನಡೆಸಲು ಅಗತ್ಯ ಇರುವ ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸಲಿ ಹಾಗೂ ಗ್ರಾಮಾಂತರ ಮತದಾರರ ರಕ್ಷಣೆಗೆ ಮುಂದಾಗಬೇಕು'' ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: "ಮತ ಕೇಳಲು ಬರುವ ಅಭ್ಯರ್ಥಿಗೆ ಛೀಮಾರಿ ಹಾಕಿ, ಗ್ರಾಮಗಳಿಗೆ ಪ್ರವೇಶ ನಿರ್ಬಂಧಿಸಿ": ಕುರುಬೂರು ಶಾಂತಕುಮಾರ ಕರೆ - Kuruburu Shanthakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.