ETV Bharat / state

ಪರಿಷತ್ ಸದಸ್ಯರಾಗಿ ಪುಟ್ಟಣ್ಣ ಪ್ರಮಾಣ ವಚನ ಸ್ವೀಕಾರ: ಲೋಕಸಭಾ ಚುನಾವಣೆಗೆ ಫಲಿತಾಂಶ ಮಾರ್ಗಸೂಚಿ ಎಂದ ಸಿಎಂ

author img

By ETV Bharat Karnataka Team

Published : Feb 21, 2024, 6:40 PM IST

ವಿಧಾನ ಪರಿಷತ್​ಗೆ ಆಯ್ಕೆಯಾಗಿರುವ ಕಾಂಗ್ರೆಸ್​ನ ಅಭ್ಯರ್ಥಿ ಪುಟ್ಟಣ್ಣಗೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಬೋಧಿಸಿದರು.

ಪರಿಷತ್ ಸದಸ್ಯರಾಗಿ ಪುಟ್ಟಣ್ಣ ಪ್ರಮಾಣ ವಚನ ಸ್ವೀಕಾರ
ಪರಿಷತ್ ಸದಸ್ಯರಾಗಿ ಪುಟ್ಟಣ್ಣ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಕಾಂಗ್ರೆಸ್‌ನ ಪುಟ್ಟಣ್ಣ ಇಂದು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ನೂತನ ಸದಸ್ಯ ಪುಟ್ಟಣ್ಣಗೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣವಚನ ಬೋಧನೆ ಮಾಡಿದರು. ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಂತರ ನೂತನ ಸದಸ್ಯ ಪುಟ್ಟಣ್ಣಗೆ ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪುಟ್ಟಣ್ಣನ ಫಲಿತಾಂಶ ನಿಮಗೆ ಮಾರ್ಗಸೂಚಿ. ನೀವಿಬ್ಬರು ಮೈತ್ರಿಯಾದರೂ ಶಿಕ್ಷಕರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದೀರಿ. ಮುಂದಿನ ಚುನಾವಣೆಗಳಿಗೂ ಈ ಫಲಿತಾಂಶ ಮಾರ್ಗಸೂಚಿಯಾಗಲಿದೆ ಎಂದರು. ಈ ವೇಳೆ ಬಿಜೆಪಿ ಸಚೇತಕ ರವಿಕುಮಾರ್, ಮಧ್ಯಪ್ರದೇಶ, ರಾಜಾಸ್ಥಾನ ಎಲ್ಲಕಡೆ ಬಿಜೆಪಿ ಗೆದ್ದಿದೆ ಎಂದರು. ಇದಕ್ಕೆ ಕೌಂಟರ್ ನೀಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಬಗ್ಗೆ ಮಾತಾಡಪ್ಪ, ಮೊದಲು ಕರ್ನಾಟಕದ ಬಗ್ಗೆ ಮಾತನಾಡಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 20 ಸ್ಥಾನ ಗೆಲ್ಲುತ್ತೇವೆ ಎಂದರು.

ಪುಟ್ಟಣ್ಣ 1506 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ- ಜೆಡಿಎಸ್‌ ಮೈತ್ರಿಗೆ ಸೋಲಾಗಿದೆ. ಲೋಕಸಭೆ ಚುನಾವಣೆಯಲ್ಲೂ ನೀವು ಸೋಲ್ತೀರಾ. ನಾನು ನಿಮ್ಮ ಹಾಗೆ ಸುಳ್ಳು ಹೇಳೊಲ್ಲ. 28 ರಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಹೇಳಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪುಟ್ಟಣ್ಣ ಅವರದ್ದು ವೈಯಕ್ತಿಕ ಗೆಲುವು. ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಗೆಲ್ಲುತ್ತೇವೆ ಎಂದರು. ಇದಕ್ಕೆ ಸಿದ್ದರಾಮಯ್ಯ ಏ ಸುಮ್ಮನೆ ಕೂತ್ಕೊಳಪ್ಪ, ನೀನು ದಕ್ಷಿಣ ಕನ್ನಡ ಕ್ಷೇತ್ರದಿಂದ ನಿಂತ್ಕೊ ನೋಡೋಣ ಯಾರು ಗೆಲ್ತಾರೆ ಎಂದು ಸವಾಲೆಸೆದರು.

ಇದಕ್ಕೆ ಪ್ರತಿಯಾಗಿ ಕೋಟ ಶ್ರೀನಿವಾಸ ಪೂಜಾರಿ ನೀವು ನಿಂತ್ಕೊಳಿ, ನೀವು ಗೆದ್ದು ಲೋಕಸಭೆಗೆ ಹೋಗಿ ಚರ್ಚೆ ಮಾಡಲು ಸಮರ್ಥಿರಿದ್ದೀರಾ..? ಎಂದು ಸಿಎಂ ಕಾಲೆಳೆದರು. ಇದನ್ನು ಸ್ಪೋರ್ಟಿವ್ ಆಗಿ ಪರಿಗಣಿಸಿದ ಸಿದ್ದರಾಮಯ್ಯ ನಾನು ಇಲ್ಲಿದ್ದರೂ ಸಮರ್ಥನೆ, ಲೋಕಸಭೆಗೆ ಹೊದರೂ ಸಮರ್ಥನೆ, ಅಂತಾರಾಷ್ಟ್ರೀಯ ಸಂಸತ್ತಿಗೆ ಹೋದರೂ ಅಲ್ಲೂ ಸಮರ್ಥನಿದ್ದೇನೆ ಎಂದರು.

ನಂತರ ಮಾತನಾಡಿದ ನೂತನ ಪರಿಷತ್ ಸದಸ್ಯ ಪುಟ್ಟಣ್ಣ ಬಿಜೆಪಿ ಬಿಡಲು ಏನು ಕಾರಣ ಎನ್ನುವ ಮಾಹಿತಿಯನ್ನು ಹಂಚಿಕೊಂಡರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ 140 ದಿನ ಅನುದಾನಿತ ಕಾಲೇಜಿನ ಶಿಕ್ಷಕರು ಧರಣಿ ಮಾಡಿದರು. ಮೂರು ಮಂದಿ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು. ಈ ವೇಳೆ ನಾನು, ಸಂಕನೂರು ಶಿಕ್ಷಕರ ಜೊತೆ ಶಿಕ್ಷಣ ಸಚಿವರ ಜೊತೆ ಸಭೆ ಮಾಡಿ ಎಂದು ಹೇಳಿದ್ದೆ. 3 ಮಂದಿ ಶಿಕ್ಷಕರು ಸಾವನ್ನಪ್ಪಿದ್ದಾರೆ, ಇನ್ನು ಕೆಲವರು ಸಾವನ್ನಪ್ಪುವ ಸಾಧ್ಯತೆ ಇದೆ. ಸಭೆ ಮಾಡಿ ಅವರಿಗೆ ಸಾಂತ್ವನ ಹೇಳಿ ಎಂದು ಮನವಿ ಮಾಡಿದ್ದೆ, ಆದರೆ ಸಭೆ ಮಾಡಲ್ಲ ಎಂದು ಸಚಿವರು ಹೇಳಿದರು. ಆ ಕ್ಷಣದಲ್ಲೇ ನಾನು ಬಿಜೆಪಿ ತೊರೆಯುವ ನಿರ್ಧಾರ ಮಾಡಿದ್ದೆ, ಈ ಪಕ್ಷದಲ್ಲಿ ನಾನು ಇರುವುದಿಲ್ಲ ಎಂದು ತೀರ್ಮಾನ ಮಾಡಿದ್ದೆ. ಈ ಬಾರಿ ಕಾಂಗ್ರೆಸ್‌ನಿಂದ ನಿಂತು ಗೆಲುವು ಸಾಧಿಸಿದ್ದೇನೆ. ಶಿಕ್ಷಕರು ನನ್ನ ಕೈ ಹಿಡಿದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ನಾಡಗೀತೆಯನ್ನು ಎಲ್ಲಾ ಶಾಲೆಗಳಲ್ಲಿ ಹಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮರು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.