ETV Bharat / state

ಬೆಳಗಾವಿಯಲ್ಲಿ ಕೆಟ್ಟು ನಿಂತ 12 ಶುದ್ಧ ಕುಡಿಯುವ ನೀರಿನ ಘಟಕಗಳು; ಮಹಾನಗರ ಪಾಲಿಕೆ ಆಯುಕ್ತರು ಏನಂತಾರೆ? - DRINKING WATER PROBLEM

author img

By ETV Bharat Karnataka Team

Published : May 16, 2024, 6:26 PM IST

ಬೆಳಗಾವಿಯಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ.

pure-drinking-water
ಕುಡಿಯುವ ನೀರಿನ ಘಟಕ (ETV Bharat)

ಬೆಳಗಾವಿಯಲ್ಲಿ ಕೆಟ್ಟು ನಿಂತ 12 ಶುದ್ಧ ಕುಡಿಯುವ ನೀರಿನ ಘಟಕಗಳು; ಸಾರ್ವಜನಿಕರ ಹಿಡಿಶಾಪ (ETV Bharat)

ಬೆಳಗಾವಿ : ಜನ ಶುದ್ಧವಾದ ನೀರು ಕುಡಿಯಲಿ ಎನ್ನುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಕಳೆದ ಮೂರು ವರ್ಷದಿಂದ ಅವು ಸ್ಥಗಿತಗೊಂಡಿವೆ. ಆದ್ರೂ ಕೂಡ ಅಧಿಕಾರಿಗಳು ಇತ್ತ ಗಮನಹರಿಸಿಲ್ಲವೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ 2 ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ 12 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಇವುಗಳ ಪೈಕಿ ಕೇವಲ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬೇಸಿಗೆಯಲ್ಲಿ ಬೆಳಗಾವಿ ಜನರ ದಾಹ ತಣಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ಣ ಬಂದ್ ಆಗಿವೆ. ಅದರಲ್ಲೂ ನಿತ್ಯ ಸಾವಿರಾರು ರೋಗಿಗಳು ಬರುವ ಜಿಲ್ಲಾಸ್ಪತ್ರೆ ಆವರಣದಲ್ಲಿನ ಘಟಕ ಇದ್ದೂ ಇಲ್ಲದಂತಾಗಿದೆ. ಅವು ಧೂಳು ತಿನ್ನುತ್ತಿದ್ದು, ಗ್ಲಾಸ್​ಗಳು ಒಡೆದು ಹೋಗಿವೆ. ಶುದ್ಧ ನೀರಿಗಾಗಿ ಜನ ಹೆಚ್ಚಿಗೆ ದುಡ್ಡು ಕೊಟ್ಟು ನೀರಿನ ಬಾಟಲ್ ಖರೀದಿಸುವ ಸ್ಥಿತಿಯಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣ, ಜಿಲ್ಲಾಸ್ಪತ್ರೆ ಆವರಣ, ಧರ್ಮವೀರ ಸಂಭಾಜಿ ವೃತ್ತ, ಚವ್ಹಾಟಗಲ್ಲಿ, ಶ್ರೀನಗರ ಸೇರಿ‌ ನಗರದ ವಿವಿದೆಡೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ನೀರು ಬರುತ್ತದೆ ಎಂದು ನಾಣ್ಯ ಹಾಕಿದರೂ, ನೀರಿಲ್ಲದ್ದರಿಂದ ಜನ ಬರೀಗೈಯಲ್ಲಿ ವಾಪಸಾಗುವುದು ಸಾಮಾನ್ಯವಾಗಿದೆ. ಒಂದೊಂದು ಘಟಕ ನಿರ್ಮಿಸಲು 8 ರಿಂದ 10 ಲಕ್ಷ ರೂ. ಖರ್ಚಾಗಿದೆ. ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ನಿರ್ಮಿಸಿದರೂ ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಇವು ಜನರ ಉಪಯೋಗಕ್ಕೆ ಬರುತ್ತಿಲ್ಲ. ಅಲ್ಲದೇ ಡಿಸ್ಟಲರಿ ಫ್ಯಾಕ್ಟರಿಗಳ ಮಾಫಿಯಾದಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲವಾ? ಎಂಬ ಅನುಮಾನ ಮೂಡಿದೆ.

ಈ ಬಗ್ಗೆ ಬಿ. ವಿ ಹಿರೇಮಠ ಎಂಬುವರು ಈಟಿವಿ ಭಾರತ ಜೊತೆಗೆ ಮಾತನಾಡಿ, ''ಶಿಂಧೋಳಿಯಿಂದ ನಾವು ಆಸ್ಪತ್ರೆಗೆ ಬಂದಿದ್ದೇವೆ. ನಮಗೆ ನೀರು ಬೇಕಾದರೆ ಕ್ಯಾಂಟೀನ್ ಅಥವಾ ಹೋಟೆಲ್​ಗೆ ಹೋಗಬೇಕು. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಈ ಘಟಕ ಉಪಯೋಗಕ್ಕೆ ಬರುತ್ತಿಲ್ಲ. ಹಾಗಾಗಿ, ಜಿಲ್ಲಾಡಳಿತ ಮತ್ತು ಪಾಲಿಕೆಯವರು ಇತ್ತ ಗಮನಹರಿಸಬೇಕು. ಇದನ್ನು ರಿಪೇರಿ ಆದ್ರೂ ಮಾಡಬೇಕು. ಇಲ್ಲವಾದರೆ ಹೊಸ ಘಟಕ ಆದ್ರೂ ನಿರ್ಮಿಸಬೇಕು'' ಎಂದು ಆಗ್ರಹಿಸಿದರು.

ವೈದ್ಯ ವಿದ್ಯಾರ್ಥಿನಿ ಚೈತ್ರಾ ಮತ್ತು ನಾಗರಿಕ ಪುಂಡಲೀಕ ಸಾಣಿಕೊಪ್ಪ ಅವರು ಮಾತನಾಡಿ, ''ನಿತ್ಯ ಸಾವಿರಾರು ಜನರು ಆಗಮಿಸುವ ಜಿಲ್ಲಾಸ್ಪತ್ರೆ ಆವರಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ. ಸರ್ಕಾರ ಜನರಿಗೆ ಉಪಯೋಗ ಆಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು, ಸರಿಯಾಗಿ ನಿರ್ವಹಿಸಿದರೆ ಮಾತ್ರ ಸರ್ಕಾರದ ಉದ್ದೇಶ ಈಡೇರಿದಂತೆ ಆಗುತ್ತದೆ'' ಎಂದು ಅಭಿಪ್ರಾಯಪಟ್ಟರು.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತ ಪಿ. ಎನ್ ಲೋಕೇಶ ಪ್ರತಿಕ್ರಿಯೆ ನೀಡಿದ್ದು, ''ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ 12 ಶುದ್ಧ ಕುಡಿಯುವ ನೀರಿನ ಘಟಕಗಳನ್ನು 2021ರಲ್ಲಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಕೋವಿಡ್ ಸಂದರ್ಭ ಮತ್ತು ನಂತರದಲ್ಲಿ ಸರಿಯಾಗಿ ಬಳಕೆ ಮಾಡದೇ ಇರುವುದರಿಂದ ಅವು ನಿಷ್ಕ್ರಿಯವಾಗಿವೆ. ಈಗ ಟೆಂಡರ್ ಕರೆಯಲಾಗಿದ್ದು, ತಕ್ಷಣವೇ ರಿಪೇರಿ ಮಾಡಿ, ಅವುಗಳನ್ನು ಪುನರ್ ಆರಂಭಿಸಲು ಕ್ರಮ ವಹಿಸುತ್ತೇವೆ'' ಎಂದು ಹೇಳಿದರು.

ಇದನ್ನೂ ಓದಿ : ಯಾದಗಿರಿ : ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.