ಬೆಂಗಳೂರು: ಪ್ರಧಾನಿ ಮೋದಿ ಸಾಗುವ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡ ನಲಪಾಡ್ ಚೊಂಬು ಹಿಡಿದು ಪ್ರತಿಭಟಿಸಿದ್ದು, ಈ ವೇಳೆ ಭದ್ರತಾ ಲೋಪ ಆಗಿದೆ. ಈ ಹಿನ್ನೆಲೆ ಡಿಸಿಪಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅದೃಷ್ಟದ ಚೊಂಬು ಮಾರಲು ಹೋಗಿ ಯಾರೋ ಬಂಧನ ಆಗಿದ್ದಾರೆ. ನಿನ್ನೆ ಚೊಂಬು ಜಾಹೀರಾತು ಕೊಟ್ಟಿರುವವರಿಗೆ ಅದೇ ಆಗಬಹುದು. ಶನಿವಾರ ನಲಪಾಡ್ ಮತ್ತು ಸಿದ್ದಾಪುರ ಜಾನಿ ಎನ್ನುವವರು ಚೊಂಬು ಹಿಡಿದು ರಸ್ತೆಗೆ ಬಂದು ಬಂಧನ ಆಗಿದ್ದಾರೆ.
ಸಿದ್ದಾಪುರ ಜಾನಿ ರೌಡಿ ಶೀಟರ್ ಅಂತ ಪೊಲೀಸರು ಗುರುತಿಸಿದ್ದಾರೆ. ಅವನಿಂದ ಬಾಂಡ್ ಬರೆಯಿಸಿಕೊಂಡಿದ್ದಾರೆ. ರೌಡಿಗಳಿಗೆ ಚುನಾವಣೆ ವೇಳೆ ಪೊಲೀಸರು ಮಾರ್ಗದರ್ಶನ ಮಾಡೋದು ಸಹಜ. ಆದರೆ ಇವರಿಗೆ ನಿನ್ನೆ ಮೋದಿ ಬಂದಾಗ, ಹೋಗಿ ಪ್ರತಿಭಟಿಸಿ ಅಂತ ಸರ್ಕಾರ ಮಾರ್ಗದರ್ಶನ ಮಾಡಿದೆಯಾ? ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು.
ನಿನ್ನೆ ನಡೆದ ಘಟನೆ ಗಂಭೀರ ಭದ್ರತಾ ವೈಫಲ್ಯ ಆಗಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ನಾವು ದೂರು ಕೊಡುತ್ತೇವೆ. ನಲಪಾಡ್ ಅವರನ್ನು ಎರಡೂ ಹಂತದ ಚುನಾವಣಾ ಪ್ರಚಾರಕ್ಕೆ ನಿಷೇಧ ಮಾಡುವಂತೆ ದೂರು ನೀಡುತ್ತೇವೆ. ಸಿದ್ದಾಪುರ ಜಾನಿಯನ್ನು ಚುನಾವಣೆ ಮುಗಿಯುವವರೆಗೂ ರಾಜ್ಯದಿಂದ ಗಡಿಪಾರು ಮಾಡುವಂತೆ ದೂರು ಕೊಡ್ತೇವೆ ಎಂದು ತಿಳಿಸಿದರು.
ನಲಪಾಡ್, ಸಿದ್ದಾಪುರ ಜಾನಿ ವಿರುದ್ಧ ದೂರು: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ವಾಹನ ಸಾಗುವ ದಾರಿಯಲ್ಲಿ ಭದ್ರತಾ ಲೋಪ ವಿಚಾರವಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಮೊಹಮ್ಮದ್ ನಲಪಾಡ್ ಮತ್ತು ಸಿದ್ದಾಪುರ ಜಾನಿ ವಿರುದ್ಧ ದೂರು ನೀಡಲಾಗಿದೆ. ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಎರಡೂ ಹಂತದ ಚುನಾವಣೆ ಪ್ರಚಾರದಿಂದ ಮೊಹಮ್ಮದ್ ನಲಪಾಡ್ರನ್ನು ದೂರ ಇರಿಸಬೇಕು. ಸಿದ್ದಾಪುರ ಜಾನಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಹೆಚ್ಡಿಕೆ ವಿರುದ್ಧ ಎಫ್ಐಆರ್ - H D Kumaraswamy