ETV Bharat / state

ಮಂಗಳೂರು: 18 ದಿನಗಳ ಹಿಂದೆ ದಫನಗೊಂಡ ವ್ಯಕ್ತಿಯ ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ - postmortem

author img

By ETV Bharat Karnataka Team

Published : May 24, 2024, 6:37 PM IST

18 ದಿನಗಳ ಹಿಂದೆ ಮೃತಪಟ್ಟು ದಫನಗೊಂಡ ವ್ಯಕ್ತಿಯ ಶವವನ್ನು ಹೊರತೆಗೆದು ಮಂಜೇಶ್ವರ ಹಾಗೂ ವಿಟ್ಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.

Police in front of Ashrafs house
ಮೃತ ಅಶ್ರಫ್ ದಫನಗೊಂಡ ಸ್ಥಳದಲ್ಲಿ ಪೊಲೀಸರು (ETV Bharat)

ಮಂಗಳೂರು (ದಕ್ಷಿಣ ಕನ್ನಡ) : 18 ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಸಾವಿನ ಕುರಿತು ಸಹೋದರ ಶಂಕೆ ವ್ಯಕ್ತಪಡಿಸಿ, ಪೊಲೀಸ್ ಠಾಣೆಗೆ ದೂರು ದಾಖಲಿಸಿದ ಹಿನ್ನೆಲೆ ದಫನ ಮಾಡಿರುವ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಮಂಜೇಶ್ವರ ಹಾಗೂ ವಿಟ್ಲ ಠಾಣಾ ಪೊಲೀಸರು ಮುಂದಾಗಿದ್ದಾರೆ.

ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಮೃತಪಟ್ಟ ವ್ಯಕ್ತಿ. ಅಶ್ರಫ್ ಅವರದ್ದು ಸಹಜ ಸಾವಲ್ಲ, ಕೊಲೆಯ ಶಂಕೆಯಿರುವುದಾಗಿ ಸಂಶಯ ವ್ಯಕ್ತಪಡಿಸಿ ಮೃತರ ಸಹೋದರ ಇಬ್ರಾಹೀಂ ಮಂಜೇಶ್ವರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಫನಗೊಂಡ ಮೃತದೇಹವನ್ನು ಮೇಲಕ್ಕೆತ್ತಿ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದರು.

Police in front of Ashrafs house
ಮೃತ ಅಶ್ರಫ್ ಮನೆ ಮುಂದೆ ಪೊಲೀಸರು (ETV Bharat)

ಈ ಬಗ್ಗೆ ನ್ಯಾಯಾಲಯದ ಆದೇಶ ಪಡೆದ ಮಂಜೇಶ್ವರ ಪೊಲೀಸರು, ವಿಟ್ಲ ಠಾಣಾ ಪೊಲೀಸರ ಸಹಕಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಗುರುವಾರ ಬೆಳಗ್ಗೆ ಅಶ್ರಫ್ ಅವ​ರನ್ನು ದಫನ ಮಾಡಿರುವ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮಾ ಮಸೀದಿಗೆ ಆಗಮಿಸಿದ್ದರು.

ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಸಿಬ್ಬಂದಿ, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೆರವಿನಲ್ಲಿ ಅಶ್ರಫ್​ರ ಮೃತದೇಹವನ್ನು ದಫನ ಮಾಡಿದಲ್ಲಿಂದ ಮೇಲೆತ್ತುವ ಕಾರ್ಯ ಮಾಡಿದ್ದಾರೆ. ಈ ವೇಳೆ, ಬಂಟ್ವಾಳ ತಹಶೀಲ್ದಾರ್ ಸ್ಥಳದಲ್ಲಿ ಉಪಸ್ಥಿತರಿದ್ದರು.

ಕನ್ಯಾನ ಬಳಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ ತಮ್ಮ ವಾಸದ ಮನೆ ಸಮೀಪ ಗೂಡಂಗಡಿ ನಡೆಸುತ್ತಿದ್ದರು. ಮೇ 5ರಂದು ರಾತ್ರಿ ಗೂಡಂಗಡಿ ಮುಚ್ಚಿ ಮನೆಯಲ್ಲಿ ಆಹಾರ ಸೇವಿಸಿ ನಿದ್ರಿಸಿದ್ದ ಅಶ್ರಫ್ ಮರುದಿನ ಬೆಳಗ್ಗೆ ಮೃತಪಟ್ಟಿದ್ದರು. ಮಲಗಿದಲ್ಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ ಇತರರಿಗೆ ಮಾಹಿತಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಬಳಿಕ ಅಂದು ಸಂಜೆ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮಾ ಮಸೀದಿಯ ದಫನಭೂಮಿಯಲ್ಲಿ ಅಶ್ರಫ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.

ಅಶ್ರಫ್ ಮೃತಪಟ್ಟ ಸಂದರ್ಭ ಅವರ ಸಹೋದರ ಇಬ್ರಾಹೀಂ ಪುಣೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಅವರು ಊರಿಗೆ ಆಗಮಿಸಿ ತನ್ನ ಅಣ್ಣ ಅಶ್ರಫ್ ಸಾವಿನಲ್ಲಿ ನಿಗೂಢತೆ ಇರುವುದಾಗಿ ಸಂಶಯಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ: ವಿದ್ಯುತ್ ಪ್ರವಹಿಸಿ ಯುವಕ ಸಾವು - Man Died By Electrocution

ETV Bharat Logo

Copyright © 2024 Ushodaya Enterprises Pvt. Ltd., All Rights Reserved.