ETV Bharat / state

ಪೋಕ್ಸೋ ಪ್ರಕರಣ: ವಿಚಾರಣಾ ಕೈದಿಯಾಗಿರುವ ಸ್ವಾಮೀಜಿಗೆ ಮನೆ ಊಟದ ವ್ಯವಸ್ಥೆಗೆ ಹೈಕೋರ್ಟ್ ಅವಕಾಶ - High Court

author img

By ETV Bharat Karnataka Team

Published : May 9, 2024, 9:24 PM IST

ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆಗಿರುವ ತುಮಕೂರಿನ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಪೀಠಾಧಿಪತಿಗೆ ಮಠದಿಂದ ಖಾಸಗಿ/ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಹೈಕೋರ್ಟ್‌ ಅನುಮತಿ ನೀಡಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕುಣಿಗಲ್‌ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರಹಳ್ಳಿ ಗ್ರಾಮದ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀಮಠದ) ಪೀಠಾಧಿಪತಿ ಬಾಲ ಮಂಜುನಾಥ ಅವರಿಗೆ ಮಠದಿಂದ ಖಾಸಗಿ/ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಹೈಕೋರ್ಟ್‌ ಅನುಮತಿಸಿದೆ.

ತಮಗೆ ಮಠದಿಂದ ಖಾಸಗಿ/ಮನೆ ಊಟ ಹಾಗೂ ಹಾಸಿಗೆ ಪೂರೈಕೆಗೆ ಅನುಮತಿ ನೀಡುವಂತೆ ತುಮಕೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಾಲ ಮಂಜುನಾಥ ಸ್ವಾಮೀಜಿ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠ, ಈ ನಿರ್ದೇಶನ ನೀಡಿದೆ.

ಅರ್ಜಿದಾರರು ತಮ್ಮ ರಿಸ್ಕ್‌ನಲ್ಲಿ ಮಠದಿಂದ ಖಾಸಗಿ/ಮನೆ ಊಟವನ್ನು ತರಿಸಿಕೊಳ್ಳಬಹುದು. ಅದನ್ನು ಜೈಲು ಅಧಿಕಾರಿಗಳು ಪರೀಕ್ಷೆ ಮಾಡಬೇಕು. ನಂತರವೇ ಅರ್ಜಿದಾರರು ಸೇವನೆಗೆ ಅವಕಾಶ ಕಲ್ಪಿಸಬೇಕು. ಇನ್ನು ಅರ್ಜಿದಾರರು ತಮ್ಮದೇ ಆದ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ತುಮಕೂರು ಕಾರಾಗೃಹ ಅಧೀಕ್ಷಕರಿಗೆ ನ್ಯಾಯಪೀಠ ಸೂಚಿಸಿದೆ. ಜೊತೆಗೆ, ಅಗತ್ಯವಿದ್ದರೆ ಈ ಆದೇಶ ಮಾರ್ಪಾಡಿಗೆ ಜೈಲು ಅಧಿಕಾರಿಗಳು ನ್ಯಾಯಾಲಯವನ್ನು ಕೋರಬಹುದು ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಬಾಲ ಮಂಜುನಾಥ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬರು 2024 ರ ಮಾರ್ಚ್​​ 7 ರಂದು ಹುಲಿಯೂರುದುರ್ಗ ಪೊಲೀಸ್​​ ಠಾಣೆಗೆ ದೂರು ಸಲ್ಲಿಸಿದ್ದರು. ಅದರ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಸ್ವಾಮೀಜಿ ಅವರನ್ನು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಸ್ವಾಮೀಜಿಯನ್ನು ಮಾರ್ಚ್​​ 14 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಸದ್ಯ ತುಮಕೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ವಾಮೀಜಿ, ಜೈಲಿನಲ್ಲಿ ಪೂರೈಸಿರುವ ಊಟ ತಮಗೆ ಸರಿ ಹೊಂದುತ್ತಿಲ್ಲ. ಇದರಿಂದ ಮಠದಿಂದ ಖಾಸಗಿ/ಮನೆ ಊಟ, ಹಾಸಿಗೆ ತರಿಸಿಕೊಳ್ಳಲು ತಮಗೆ ಅನುಮತಿ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರಿದ್ದರು. ಅದಕ್ಕೆ ಜೈಲಾಧಿಕಾರಿಗಳು ಸಮ್ಮಿತಿಸದ್ದರಿಂದ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಬೀದಿ ನಾಯಿಗಳಿಗೆ ಮೈಕ್ರೋಚಿಪ್​ ಅಳವಡಿಕೆ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.