ETV Bharat / state

ರಾಜ್ಯಕ್ಕೆ ಮೋದಿ ಕೊಡುಗೆಯೇನು ಎನ್ನುವ ಸಿದ್ದರಾಮಯ್ಯಗೆ ಜನತೆಯೇ ಉತ್ತರ ನೀಡುತ್ತಾರೆ: ವಿಜಯೇಂದ್ರ

author img

By ETV Bharat Karnataka Team

Published : Mar 17, 2024, 1:06 PM IST

ಕರ್ನಾಟಕಕ್ಕೆ ಮೋದಿ ಕೊಡುಗೆ ಏನು ಎನ್ನುವ ಸಿದ್ದರಾಮಯ್ಯ ಪ್ರಶ್ನೆಗೆ ಲೋಕಸಭಾ ಚುನಾವಣೆಯಲ್ಲಿ ಜನತೆ ಉತ್ತರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Prime Minister Narendra Modi  CM Siddaramaiah  Lok Sabha Elections 2024  Lok Sabha Polls
ರಾಜ್ಯಕ್ಕೆ ಮೋದಿ ಕೊಡುಗೆ ಏನು ಎನ್ನುವ ಸಿದ್ದರಾಮಯ್ಯ ಪ್ರಶ್ನೆಗೆ ಜನತೆಯೇ ಉತ್ತರ ನೀಡುತ್ತಾರೆ: ವಿಜಯೇಂದ್ರ

ಬೆಂಗಳೂರು: ''ಕರ್ನಾಟಕಕ್ಕೆ ಮೋದಿ ಏನು ಕೊಡುಗೆ ನೀಡಿದ್ದಾರೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಡಿನ ಜನತೆಯೇ ಉತ್ತರ ನೀಡಲಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ನಗರದ ಮಿಷನ್ ರೋಡ್ ಸಮೀಪ ಬೆಂಗಳೂರು ಕೇಂದ್ರ ಜಿಲ್ಲೆ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿದ ನಂತರ ವಿಜಯೇಂದ್ರ ಮಾತನಾಡಿದರು.

''2024ರ ಲೋಕಸಭಾ ಚುನಾವಣೆ ಫಲಿತಾಂಶ ಮಾತ್ರವೇ ಅಧಿಕೃತವಾಗಿ ಘೋಷಣೆ ಆಗಬೇಕು. ಅದಷ್ಟೇ ಬಾಕಿ ಇರೋದು. ಬಿಜೆಪಿ ಕೇಂದ್ರದಲ್ಲಿ 3ನೇ ಬಾರಿ ಅಧಿಕಾರಕ್ಕೆ ಬರಲಿದೆ. ಮೋದಿ 3ನೇ ಬಾರಿ ಪ್ರಧಾನಿ ಆಗುವುದನ್ನು ಯಾವ ದುಷ್ಟಶಕ್ತಿಯಿಂದಲೂ ತಡೆಯಲು ಆಗಲ್ಲ. ಮೋದಿ 2047ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಲು ಹೊರಟಿದ್ದಾರೆ. ಈ ಕನಸು ನನಸಾಗಲು ಮೋದಿ ಮತ್ತೆ ಪ್ರಧಾನಿಯಾಗಬೇಕು. ಅದಕ್ಕಾಗಿ ಚುನಾವಣೆಯವರೆಗೂ ವಿರಮಿಸದೇ ಕೆಲಸ ಮಾಡಿ'' ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ''ನಿನ್ನೆ ಚುನಾವಣೆ ಘೋಷಣೆಯಾಗಿದೆ. ಇಂದು ಕಾರ್ಯಾಲಯ ಉದ್ಘಾಟನೆಯಾಗಿದೆ. ಇಷ್ಟು ಜನ ಸೇರಿದ್ದಾರೆ. ಇದು ವಿಜಯೋತ್ಸವದ ರೀತಿ ಇದೆ. 2014ರಲ್ಲಿ ಯುಪಿಎ ಅವಧಿಯ ಭ್ರಷ್ಟಾಚಾರ ಪುಸ್ತಕ ತೆಗೆದುಕೊಂಡು ಚುನಾವಣೆಗೆ ಹೋಗಿದ್ದೆವು. ಈಗ ಹತ್ತು ವರ್ಷ ಮೋದಿಯವರ ಆಡಳಿತದ ಮಾಹಿತಿ ತೆಗೆದುಕೊಂಡು ಹೋಗುತ್ತಿದ್ದೇವೆ. ಹತ್ತು ವರ್ಷಗಳ ಹಲವು ಯೋಜನೆ ಜನರ ಮುಂದೆ ತೆಗೆದುಕೊಂಡು ಹೋಗೋಣ. ಮನೆ ಮನೆಗೆ ತೆರಳಿ ಬಿಜೆಪಿ ಪರ‌ ಮತ ಯಾಚನೆ ಮಾಡೋಣ. ಸುಳ್ಳು ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡೋಣ'' ಎಂದರು.

ಶಾಸಕರಾದ ಎಸ್.ಸುರೇಶ್ ಕುಮಾರ್, ಎಸ್.ರಘು, ಮಂಜುಳಾ ಲಿಂಬಾವಳಿ ಹಾಗೂ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಮಾಜಿ ಪಾಲಿಕೆ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಪಾಕಿಸ್ತಾನದಿಂದ ಹಣ ಬಂದಿರಬೇಕು, ಬಿಜೆಪಿಗೆ ಅಂತಹ ಹಣದ ಅವಶ್ಯಕತೆಯಿಲ್ಲ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.