ETV Bharat / state

ಬಣ್ಣದೋಕುಳಿಗೆ ಕುಂದಾನಗರಿ ಸಜ್ಜು: ಮಾರುಕಟ್ಟೆಗೆ ಲಗ್ಗೆ ಇಟ್ಟ ಬಗೆ ಬಗೆಯ ಪಿಚಕಾರಿಗಳು - holi festival in Belagavi

author img

By ETV Bharat Karnataka Team

Published : Mar 24, 2024, 11:01 PM IST

ಬೆಳಗಾವಿಯಲ್ಲಿ ಹೋಳಿ ಹುಣ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸಲು ಜನರು ಸಜ್ಜಾಗಿದ್ದಾರೆ. ಬಗೆಬಗೆಯ ಬಣ್ಣ, ಪಿಚಕಾರಿಗಳು ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ.

people-are-gearing-up-to-celebrate-holi-festival-in-belagavi
ಬಣ್ಣದೋಕುಳಿಗೆ ಕುಂದಾನಗರಿ ಸಜ್ಜು: ಮಾರುಕಟ್ಟೆಗೆ ಲಗ್ಗೆ ಇಟ್ಟ ಬಗೆ ಬಗೆಯ ಪಿಚಕಾರಿಗಳು

ಬೆಳಗಾವಿ: ಹೋಳಿ ಹುಣ್ಣಿಮೆಗೆ ಕುಂದಾನಗರಿ ಸಜ್ಜುಗೊಂಡಿದ್ದು, ಬಣ್ಣದೋಕುಳಿಯಲ್ಲಿ ಮಿಂದೆಳಲು ಜನರು ಕಾತುರರಾಗಿದ್ದಾರೆ. ಇನ್ನು ಬಗೆಬಗೆಯ ಬಣ್ಣ, ಪಿಚಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ವ್ಯಾಪಾರದಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ಕಂಡು ಬಂದಿದೆ. ಹೌದು, ಬೆಳಗಾವಿಯಲ್ಲಿ ಪ್ರತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೋಮವಾರ ಹೋಳಿ ಹಬ್ಬ ಬಂದಿರುವ ಹಿನ್ನೆಲೆಯಲ್ಲಿ ಭಾನುವಾರ ನಗರದ ಗಣಪತ ಗಲ್ಲಿ, ರವಿವಾರ ಪೇಟೆ, ಖಡೇಬಜಾರ್ ಸೇರಿ ಮುಂತಾದ ಕಡೆ ಅಂಗಡಿಗಳಲ್ಲಿ ಯುದ್ಧವಿಮಾನ, ರಾಕೆಟ್, ತಲವಾರ್, ಡ್ರ್ಯಾಗನ್, ಪಿಸ್ತೂಲ್ ಸೇರಿ ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಪಿಚಕಾರಿಗಳು, ಮಕ್ಕಳು ಮತ್ತು ಯುವಕರು ಬಳಸುವ ಮುಖವಾಡಗಳನ್ನು ಮಾರಾಟಕ್ಕೆ ಇರಿಸಲಾಗಿದೆ.

ಇವು ಒಂದಕ್ಕಿಂತ ಒಂದು ವಿಶಿಷ್ಟವಾಗಿವೆ. ಆದರೆ, ವ್ಯಾಪಾರ ಮಾತ್ರ ಹೆಚ್ಚಿರಲಿಲ್ಲ. ಪಿಚಕಾರಿಗಳ ದರ 20 ರೂ ಯಿಂದ 1,350 ರೂ. ವರೆಗೆ ಇದ್ದರೆ, ಮುಖವಾಡಗಳು 100 ರಿಂದ 250 ರೂ.ಗೆ ಹಾಗೂ 10 ರಿಂದ 40 ರೂ. ವರೆಗೆ ಒಂದು ಬಣ್ಣದ ಪಾಕೆಟ್ ಮಾರಾಟ ಮಾಡಲಾಗುತ್ತಿದೆ. ಪ್ರತಿವರ್ಷ ಹೋಳಿ ಹುಣ್ಣಿಮೆಯಲ್ಲಿ ಖರೀದಿ ಭರಾಟೆ ಜೋರಾಗಿರುತ್ತಿತ್ತು. ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದರು. ಆದರೆ, ಮಾರ್ಚ್‌ 25ರಂದು ಎಸ್ಸೆಸ್ಸೆಲ್ಸಿ ಸೇರಿದಂತೆ ವಿವಿಧ ತರಗತಿಗಳ ಪರೀಕ್ಷೆಗಳಿವೆ. ಅಲ್ಲದೇ ಮೊದಲೇ ಭೀಕರ ಬರವಿದೆ. ಆದ್ದರಿಂದ ಇವು ಈ ಬಾರಿಯ ಬಣ್ಣದ ಹಬ್ಬದ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಮಾತನಾಡಿದ ವ್ಯಾಪಾರಿಗಳಾದ ಪ್ರಕಾಶ ಮತ್ತು ಸೂರಜ್, ಬಗೆ ಬಗೆಯ ಬಣ್ಣ, ಪಿಚಕಾರಿಗಳನ್ನು ಮಾರಾಟಕ್ಕೆ ತಂದಿಟ್ಟಿದ್ದೇವೆ. ಆದರೆ, ನಿರೀಕ್ಷೆಯಷ್ಟು ವ್ಯಾಪಾರ ಆಗುತ್ತಿಲ್ಲ. ಇಂದಿನ‌ ಮಕ್ಕಳಿಗೆ ಹಬ್ಬ, ಹರಿದಿನಗಳ ಬಗ್ಗೆ ಗೊತ್ತೆ ಇಲ್ಲ. ಬರೀ ಮೊಬೈಲ್ ಗೇಮ್ ಆಡುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದರು.

ಮಗ ಮತ್ತು ಪತಿ ಜೊತೆಗೆ ಬಣ್ಣದ ಖರೀದಿಗೆ ಬಂದಿದ್ದ ಸೋನಲ್ ಸೂರ್ಯವಂಶಿ ಮಾತನಾಡಿ, ನಾವು ಚಿಕ್ಕವರಿದ್ದಾಗ ನಮಗೆ ಅಷ್ಟೊಂದು ವೆರೈಟಿ ವೆರೈಟಿ ಪಿಚಕಾರಿಗಳು ಸಿಗುತ್ತಿರಲಿಲ್ಲ. ಆದರೆ, ಈಗ ವಿವಿಧ ಬಗೆಯ ಪಿಚಕಾರಿಗಳಿದ್ದು, ನಾಳೆ ನಮ್ಮ ಮಗ ಮತ್ತು ಅಪಾರ್ಟಮೆಂಟ್ ಜನರ ಜೊತೆಗೆ ಬಣ್ಣದೋಕುಳಿ ಆಡಿ ಸಖತ್ ಎಂಜಾಯ್ ಮಾಡುತ್ತೇವೆ ಎಂದರು. ಮಕ್ಕಳು ಮತ್ತು ಪತ್ನಿ ಜೊತೆಗೆ ವ್ಯಾಪಾರಕ್ಕೆ ಬಂದಿದ್ದ ಭರತೇಶ ಯಕ್ಸಂಬಿ ಮಾತನಾಡಿ, ಹೋಳಿ ಹಬ್ಬಕ್ಕೆ ಮಕ್ಕಳಿಗೆ ಪಿಚಕಾರಿ, ಬಣ್ಣ, ಬಂದೂಕು ಖರೀದಿ ಮಾಡಲು ಬಂದಿದ್ದೇವೆ. ಇಂದು ರಾತ್ರಿ ಪೂಜೆ‌ ಪುನಸ್ಕಾರದ ಮೂಲಕ ಕಾಮಣ್ಣನ ದಹನ ಮಾಡುತ್ತೇವೆ. ಆ ಬಳಿಕ‌ ನಾಳೆ ಬೆಳಿಗ್ಗೆ ಹೋಳಿ ಹಬ್ಬ ಆಚರಿಸಲಾಗುತ್ತದೆ ಎಂದರು.

ಇದನ್ನೂ ಓದಿ: ಬೆಂಗಳೂರು: ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯಿಂದ ಹೋಳಿ ಹಬ್ಬ ಆಚರಣೆ - Holi festival celebration

ETV Bharat Logo

Copyright © 2024 Ushodaya Enterprises Pvt. Ltd., All Rights Reserved.