ETV Bharat / state

ಜುಲೈ 1ರ ಒಳಗಾಗಿ ಬೆಂಗಳೂರಿಗೆ ಸಿಗಲಿದೆ ಸಫೀಶಿಯೆಂಟ್‌ ನೀರು: ರಾಮ್‌ ಪ್ರಸಾತ್‌ ಮನೋಹರ್‌ - Bangalore

author img

By ETV Bharat Karnataka Team

Published : Mar 21, 2024, 9:25 PM IST

ಜುಲೈ 2026 ರ ಒಳಗಾಗಿ ಬೆಂಗಳೂರನ್ನು ವಾಟರ್‌ ಸರ್‌ಪ್ಲಸ್‌ ಮಾಡುವುದು ನಮ್ಮ ಗುರಿಯಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

Dr. Ram prasath Manohar spoke to the media.
ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಂಗಳೂರು: ಜುಲೈ 1ರ ಒಳಗಾಗಿ ಬೆಂಗಳೂರು ವಾಟರ್‌ ಸಫೀಶಿಯೆಂಟ್‌ ಆಗಲಿದ್ದು, ಈ ನಿಟ್ಟಿನಲ್ಲಿ ಮಂಡಳಿಯಿಂದ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಗುರುವಾರ ಮಂಡಳಿಯ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಸಕ್ತ ವರ್ಷದ ಜುಲೈ 1 ರ ಒಳಗಾಗಿ ಬೆಂಗಳೂರನ್ನು ವಾಟರ್‌ ಸಫೀಶಿಯೆಂಟ್‌ ಮಾಡುವುದು. ಜುಲೈ 2026 ರ ಒಳಗಾಗಿ ಬೆಂಗಳೂರನ್ನು ವಾಟರ್‌ ಸರ್‌ಪ್ಲಸ್‌ ಮಾಡುವುದು ನಮ್ಮ ಗುರಿಯಾಗಿದೆ. ಈ ಎಲ್ಲ ಪ್ರಮುಖ ಯೋಜನೆಗಳ ಆಧಾರದ ಮೇಲೆ ಬೃಹತ್‌ ಅಭಿಯಾನ ಹಮ್ಮಿಕೊಳ್ಳಲಿದ್ದೇವೆ.

ಈ ಅಭಿಯಾನದಲ್ಲಿ ನೀರಿನ ಉಳಿತಾಯ ಹಾಗೂ ಅದರಿಂದಾಗುವ ಗಳಿಕೆಯ ಬಗ್ಗೆಯೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಿದ್ದೇವೆ. ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರು ಮರುಪೂರಣದ ಮೂರು ಪ್ರಮುಖ ಯೋಜನೆಯಡಿ ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನೀರಿನ ದುರ್ಬಳಕೆ ತಪ್ಪಿಸಿ ಉಳಿತಾಯಕ್ಕೆ ಆದ್ಯತೆ: ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ಮೂಲಕ ಲಭ್ಯವಾಗುತ್ತಿರುವ ಶುದ್ದ ನೀರಿನ ಸಮರ್ಪಕ ಬಳಕೆ ಹಾಗೂ ಅದರ ದುರ್ಬಳಕೆಯನ್ನು ತಪ್ಪಿಸಿ ಉಳಿತಾಯಕ್ಕೆ ಒತ್ತು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕರಿಗೆ ಹಲವಾರು ಸೂಚನೆ ನೀಡಿದ್ದೇವೆ. ಕುಡಿಯುವ ನೀರನ್ನು ಅನಗತ್ಯವಾಗಿ ಬಳಕೆ ಮಾಡದಂತೆ, ವಾಹನಗಳನ್ನು ತೊಳೆಯಲು ಬಳಸದಂತೆ ಹಾಗೂ ಏರಿಯೇಟರ್‌ ಮತ್ತು ಫ್ಲೋ ಕಂಟ್ರೋಲ್‌ ಬಳಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆ ಆದಷ್ಟು ಕಡಿಮೆ ನೀರನ್ನು ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಅಂತರ್ಜಲ ಕುಸಿತದ ಕಾರಣ ಎದುರಾಗಿರುವ ಅಭಾವವನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಈಗಾಗಲೇ ಬಲ್ಕ್‌ ಯೂಸರ್ಸ್‌ ಗಳಿಗೆ ಹಂತ ಹಂತವಾಗಿ ಶೇಕಡಾ 20 ರಷ್ಟು ನೀರನ್ನು ಕಡಿತಗೊಳಿಸುವ ಸೂಚನೆ ನೀಡಿದ್ದೇವೆ. ಅವರ ಸ್ವಚ್ಚತೆ ಹಾಗೂ ಇನ್ನಿತರ ಅವಶ್ಯಕತೆಗಳಿಗಾಗಿ ರಿಯಾಯಿತಿ ದರದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರನ್ನು ಒದಗಿಸುತ್ತಿದ್ದೇವೆ. ಸಂಸ್ಕರಿಸಿದ ನೀರಿನ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗೆ ಅಗತ್ಯವಿರುವಷ್ಟು ಸಂಸ್ಕರಿಸಿದ ನೀರನ್ನು ನೀಡಲಾಗುತ್ತಿದೆ. 49 ಸಂಸ್ಥೆಗಳು ಸಂಸ್ಕರಿಸಿದ ನೀರನ್ನು ಈಗಾಗಲೇ ಬಳಸುತ್ತಿವೆ. 1300 ಎಂಎಲ್‌ಡಿ ಅಷ್ಟು ಸಂಸ್ಕರಿಸಿದ ನೀರು ನಮಗೆ ಲಭ್ಯವಿದ್ದು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ತಮ್ಮ ನಿತ್ಯದ ಕುಡಿಯುವ ಅವಶ್ಯಕತೆಯನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಉಪಯೋಗಿಸುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ಶೇಕಡಾ 40 ನೀರಿನ ಬೇಡಿಕೆ ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದೇವೆ. 1300 ಎಂ ಎಲ್ ಡಿ ನೀರನ್ನು ಬಳಸಿಕೊಂಡು ಈಗಾಗಲೇ 14 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಇನ್ನು ಹೆಚ್ಚಿನ ಕೆರೆಗಳನ್ನು ತುಂಬಿಸುವುದು ನಮ್ಮ ಆದ್ಯತೆಯಾಗಿದೆ. ಅದಲ್ಲದೇ, ನಮ್ಮ ವ್ಯಾಪ್ತಿ ಬತ್ತಿಹೋಗಿರುವ ಕೊಳವೆ ಬಾವಿಗಳನ್ನ ಬಳಸಿಕೊಂಡು ಅಂತರ್ಜಲ ಮತ್ತು ಮಳೆ ನೀರು ಮರುಪೂರಣಕ್ಕೆ ಆದ್ಯತೆ ನೀಡಿದ್ದೇವೆ. ಉಪಯೋಗಿಸುತ್ತಿರುವಷ್ಟು ಅಂತರ್ಜಲ ಮರುಪೂರಣಗೊಳಿಸಬೇಕಿದೆ. ಇದಕ್ಕಾಗಿ ಪ್ರತಿಯೊಂದು ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಸಂದರ್ಭದಲ್ಲಿ 2 ಇಂಗುಗುಂಡಿಗಳನ್ನು ನಿರ್ಮಿಸುವುದನ್ನು ಕಡ್ಡಾಯಗೊಳಿಸಲಿದ್ದೇವೆ. ಸರಕಾರಿ ಸಂಸ್ಥೆಯಾದ ನಮ್ಮಿಂದಲೇ ಈ ಅಭಿಯಾನ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ನೀರಿನ ದುರ್ಬಳಕೆ ವಿರುದ್ದ ದಂಡ ವಿಧಿಸುವ ಅಭಿಯಾನ: ನೀರಿನ ದುರ್ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕರಿಗೆ ಗೈಡ್‌ಲೈನ್ಸ್‌ ಕೊಡಲಾಗಿತ್ತು. ಆದರೂ ಕೆಲ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಇನ್ನೂ ನೀರಿನ ದುರ್ಬಳಕೆಯನ್ನು ಮುಂದುವರೆಸಿದ್ದಾರೆ ಎನ್ನುವ ದೂರುಗಳು ಮಂಡಳಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಹಾಗೂ ಜನರಿಗೆ ಇನ್ನಷ್ಟು ತಿಳಿವಳಿಕೆ ನೀಡುವ ಉದ್ದೇಶದಿಂದ ದಂಡ ವಿಧಿಸುವ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.
ಇದನ್ನೂಓದಿ:ಮೇಕೆದಾಟು ಯೋಜನೆ ಸಂಬಂಧ ಸ್ಟಾಲಿನ್ ಹೇಳಿಕೆ ಕುರಿತು ಕಾಂಗ್ರೆಸ್ ನಿಲುವೇನು?: ಅಶ್ವಥನಾರಾಯಣ ಪ್ರಶ್ನೆ - MEKEDATU PROJECT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.