ETV Bharat / state

ಕಾವೇರಿ ನದಿ ನೀರಿನ ವಿಚಾರದಲ್ಲಿ ಸರ್ಕಾರ ಸಮರ್ಥ ನಿಲುವು ತಳೆಯಬೇಕು: ಆರ್.ಅಶೋಕ್ ಒತ್ತಾಯ - R ASHOK CRITICIZE GOVT

author img

By ETV Bharat Karnataka Team

Published : May 22, 2024, 7:18 PM IST

ಕಾವೇರಿ ನೀರು ಉಳಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಆರ್.ಅಶೋಕ್
ಆರ್.ಅಶೋಕ್ (ETV Bharat)

ಬೆಂಗಳೂರು: ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನ್ನ ಸಮರ್ಥ ನಿಲುವನ್ನು ಕೋರ್ಟ್ ಮುಂದೆ ತಿಳಿಸಬೇಕಿದೆ. ಪದೇ ಪದೆ ಕನ್ನಡಿಗರಿಗೆ ಆಗುವ ಅನ್ಯಾಯ ತಡೆಯಬೇಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದುಡ್ಡು ಹೊಡೆಯೋಕೆ, ಲೂಟಿ ಮಾಡುವುದರಲ್ಲಿಯೇ ಈ ಸರ್ಕಾರ ಸಮಯ ಕಳೆಯುತ್ತಿದೆ. ಕಾವೇರಿ ನೀರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ಟೀಕಿಸಿದರು.

ಕೋರ್ಟ್, ಕಾವೇರಿ ಟ್ರಿಬ್ಯೂನಲ್‍ನಲ್ಲಿ ಪದೇ ಪದೆ ಹಿನ್ನಡೆ ಆಗುತ್ತಿದ್ದರೂ ಮುಖ್ಯಮಂತ್ರಿಗಳು ಸಭೆ ಕರೆದು ನಮ್ಮ ನಮ್ಮ ನಿಲುವನ್ನು ಕೋರ್ಟ್ ಮತ್ತು ಟ್ರಿಬ್ಯೂನಲ್‍ನಲ್ಲಿ ಮಂಡಿಸಲು ವ್ಯವಸ್ಥೆ ಮಾಡಿಲ್ಲ. ಕಾವೇರಿ ಜಲಾನಯನ ಪ್ರದೇಶದ ರೈತರು ನಿರಂತರ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ರೈತರನ್ನು ಸರ್ಕಾರ ಕಡೆಗಣಿಸುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ದುರಹಂಕಾರದ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಶಾಸಕ ಹರೀಶ್ ಪೂಂಜ ಅವರ ಬಂಧನ ಪ್ರಯತ್ನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ, ಹಿಂದೂ ಕಾರ್ಯಕರ್ತರ ಬಗೆಗಿನ ಸರ್ಕಾರದ ಧೋರಣೆ ನಿಜಕ್ಕೂ ಅಕ್ಷಮ್ಯ. ಇದು ಖಂಡನೀಯ ಎಂದರಲ್ಲದೇ, ಇದೇ ಥರ ಮುಂದುವರಿದರೆ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಆರ್​ಆರ್ ನಗರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕಪಾಳಕ್ಕೆ ಹೊಡೆದಿರೋರನ್ನ ಸರ್ಕಾರ ಇನ್ನೂ ಬಂಧಿಸಿಲ್ಲ, ಕಾರ್ಯಕರ್ತರ ಪರ ಮಾತನಾಡಿದ ಶಾಸಕರನ್ನು ಬಂಧಿಸೋದು ಎಷ್ಟು ಸರಿ?. ಇದು ಕಾಂಗ್ರೆಸ್​ನ ದ್ವಿಮುಖ ನೀತಿ ತೋರಿಸುತ್ತದೆ ಎಂದು ಟೀಕಿಸಿದರು.

ವಿಪಕ್ಷ ಸದಸ್ಯರ ಮೇಲೆ ನಿರಂತರವಾಗಿ ಒಂದಲ್ಲ ಒಂದು ಕೇಸ್ ಹಾಕ್ತಿದ್ದಾರೆ. ಹರೀಶ್ ಪೂಂಜಾ ಬಂಧನ ಮಾಡಲು ಹೋಗಿರೋದು ಖಂಡನೀಯ ಶಾಸಕರ ದನಿಯನ್ನು ಅಡಗಿಸುವ ಕೆಲಸವನ್ನು ಸರ್ಕಾರ ಮಾಡ್ತಿದೆ. ಹೀಗೇ ಮಾಡ್ತಾ ಹೋದರೆ ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಕಿಡಿಕಾರಿದರು.

ಬೆಂಗಳೂರು ನಗರ ಪ್ರದಕ್ಷಿಣೆ ಹೆಸರಲ್ಲಿ ಫೋಟೋ ಶೂಟ್ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ಬೆಂಗಳೂರು ನಗರ ಪ್ರದಕ್ಷಿಣೆ ಮಾಡಬೇಕಾದದ್ದು ಈಗಲ್ಲ. ಮಳೆಗಾಲ ಆರಂಭವಾಗುವ ಮುನ್ನ ಒಂದು ತಿಂಗಳ ಹಿಂದೆಯೇ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಅಧಿಕಾರಿಗಳೊಂದಿಗೆ ವಲಯವಾರು ಸಭೆ ನಡೆಸಿ ಮಳೆ ನೀರು ನುಗ್ಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳಲ್ಲಿ, ರಸ್ತೆ ಗುಂಡಿಗಳು ಹೆಚ್ಚಾಗಿರುವ ಕಡೆ, ರಾಜ ಕಾಲುವೆಗಳು ಒತ್ತುವರಿ ಆಗಿರುವ ಕಡೆಗಳಲ್ಲಿ, ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಬೇಕಿತ್ತು ಎಂದರು.

ನಂತರ ಕಾಲಕಾಲಕ್ಕೆ ಸ್ಥಳಕ್ಕೆ ಬೇಟಿ ನೀಡಿ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲನೆ ನಡೆಸಬೇಕಿತ್ತು. ಅದು ಬಿಟ್ಟು, ಊರೆಲ್ಲ ಕೊಳ್ಳೆಹೊಡೆದ ಮೇಲೆ ಊರು ಬಾಗಿಲು ಮುಚ್ಚಿದಂತೆ, ಈಗ ಎಸಿ ಬಸ್ಸಿನಲ್ಲಿ ಬಂದು ಮಾಧ್ಯಮಗಳ ಮುಂದೆ ಫೋಸ್ ಕೊಟ್ಟರೆ ಜನರಿಗೆ ಏನು ಉಪಯೋಗ? ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅಂದರೆ ರಾಜ್ಯಕ್ಕೆ ಅವಮಾನ, ಮೊದಲು ಕನ್ನಡ ಕಲಿಸಿ: ಸಿ ಟಿ ರವಿ - Former Minister C T Ravi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.