ETV Bharat / state

ಸಿದ್ದರಾಮಯ್ಯ ಅವರೇ ಐದು ವರ್ಷ ನಾನೇ ಸಿಎಂ ಅಂತಾ ಹೇಳಿ ನೋಡೋಣ: ಆರ್​ ಅಶೋಕ್ ಸವಾಲು

author img

By ETV Bharat Karnataka Team

Published : Mar 20, 2024, 3:45 PM IST

ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಕಂಡ ಅತ್ಯಂತ ದುರ್ಬಲ, ಅಸಹಾಯಕ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಆರ್​ ಅಶೊಕ್​ ಟೀಕಿಸಿದ್ದಾರೆ.

opposition-leader-r-ashok-reaction-on-cm-siddaramaiah-statement
ಸಿದ್ದರಾಮಯ್ಯ ಅವರೇ ಐದು ವರ್ಷ ನಾನೇ ಸಿಎಂ ಅಂತಾ ಹೇಳಿ ನೋಡೋಣ: ಆರ್​ ಅಶೋಕ್ ಸವಾಲು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವೀಕ್ ಪಿಎಂ ಎಂದು ಟೀಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಒಮ್ಮೆ ಹೇಳಿ ನೋಡೋಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಟ್ವೇಟ್​ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕ ಕಂಡ ಅತ್ಯಂತ ದುರ್ಬಲ, ಅಸಹಾಯಕ ಮುಖ್ಯಮಂತ್ರಿ ಎಂದಿದ್ದಾರೆ.

ಬಿ ಕೆ ಹರಿಪ್ರಸಾದ್ ಅವರು ತಮ್ಮ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗದಷ್ಟು, ಕನಿಷ್ಠ ಪಕ್ಷ ಪ್ರತ್ಯುತ್ತರ ಕೂಡ ನೀಡಲಾಗದಷ್ಟು ಅಸಹಾಯಕರು ತಾವು. ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬಣ ಅವಕಾಶ ಸಿಕ್ಕಾಗಲೆಲ್ಲ ಬಂಡಾಯದ ಬಾವುಟ ಹಾರಿಸಿ ತಮ್ಮ ಕುರ್ಚಿಯ ಎಕ್ಸ್​​ಪೆರಿ ಡೇಟ್​ ಮುಗಿಯುತ್ತದೆ ಎಂದು ಕಾಲೆಳೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಿಮ್ಮದು ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರೇ ಮತ್ತೊಮ್ಮೆ ಮುಂದಿನ ಐದು ವರ್ಷ ಈ ದೇಶದ ಸ್ಟ್ರಾಂಗ್ ಪ್ರಧಾನಿ ಆಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಧೈರ್ಯ ನನಗಿದೆ. ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಒಮ್ಮೆ ಹೇಳಿ ನೋಡೋಣ. ನಿಮಗೆ ಖಂಡಿತ ಹೇಳಲು ಆಗಲ್ಲ. ಅದಕ್ಕೆ ತಮ್ಮನ್ನು ಈ ರಾಜ್ಯ ಕಂಡ ಅತ್ಯಂತ ವೀಕ್ ಮುಖ್ಯಮಂತ್ರಿ ಎಂದು ಜನ ಮಾತಾಡಿಕೊಳ್ಳುವುದು ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ''ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ'' : ಸಿಎಂ ಸಿದ್ದರಾಮಯ್ಯ

ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ - ಸಿ ಟಿ ರವಿ: ಮತ್ತೊಂದೆಡೆ, ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ. ಮೋದಿ ಒನ್ ಆಫ್ ದಿ ಸ್ಟ್ರಾಂಗ್ ಲೀಡರ್. ಇಡೀ ವಿಶ್ವವೇ ಮೆಚ್ಚುವ ಪ್ರಭಾವಿ ಪ್ರಧಾನಿ ಎನ್ನುವ ನರೇಂದ್ರ ಮೋದಿಯನ್ನು ವೀಕ್ ಪಿಎಂ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಮೋದಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಭಯದಿಂದಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಒಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್​ ನಲ್ಲಿ 'ನಾನು ಸ್ಟ್ರಾಂಗ್ ಸಿಎಂ, ಮೋದಿ ವೀಕ್ ಪಿಎಂ' ಅಂತ ಹೇಳಿದ್ದಾರೆ. ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.