ETV Bharat / state

ಬೆಂಗಳೂರು ಜನರು ಹನಿ ನೀರಿಗೂ ಪರದಾಡುವ ದುಸ್ಥಿತಿ ಬಂದಿದೆ, ಎಲ್ಲಿದೆ ನೀರಿನ ಗ್ಯಾರಂಟಿ : ಆರ್ ಅಶೋಕ್ ಪ್ರಶ್ನೆ

author img

By ETV Bharat Karnataka Team

Published : Feb 24, 2024, 6:06 PM IST

I.N.D.I.A ಮೈತ್ರಿಕೂಟದ ಡಿಎಂಕೆ ಜೊತೆ ದೋಸ್ತಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿತು. ಈಗ ಬೆಂಗಳೂರ ಜನರು ಖಾಸಗಿ ಟ್ಯಾಂಕರ್​ಗಳಿಗೆ ಸಾವಿರಾರು ರೂಪಾಯಿ ತೆತ್ತು ನೀರು ತರುವ ಪರಿಸ್ಥಿತಿ ತಂದಿಟ್ಟಿದೆ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

Opposition Leader R Ashok
ಪ್ರತಿಪಕ್ಷದ ನಾಯಕ ಆರ್ ಅಶೋಕ್

ಬೆಂಗಳೂರು: ಈ ವರ್ಷದ ಬೇಸಿಗೆ ಕಾಲವೇ ಇನ್ನೂ ಆರಂಭವಾಗಿಲ್ಲ. ಆದರೆ ಈಗಾಗಲೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ''ತಮ್ಮ I.N.D.I.A ಮೈತ್ರಿಕೂಟದ ಡಿಎಂಕೆ ಪಕ್ಷದ ಜೊತೆ ದೋಸ್ತಿ ಉಳಿಸಿಕೊಳ್ಳುವದಕ್ಕಾಗಿ ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಕಾವೇರಿ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿದ ನಾಡದ್ರೋಹಿ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಬೆಂಗಳೂರಿನ ಜನತೆ ಖಾಸಗಿ ಟ್ಯಾಂಕರ್​ಗಳಿಗೆ ಸಾವಿರಾರು ರೂಪಾಯಿ ತೆತ್ತು ನೀರು ತರುವ ಪರಿಸ್ಥಿತಿ ತಂದಿಟ್ಟಿದೆ'' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

''ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ'' ಎಂದು ಕಿಡಿಕಾರಿದ್ದಾರೆ.

''ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿ ಮಾತಿಗೆ ಘೋಷಣೆ ಮಾಡಿ ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟು ಕಾಂಗ್ರೆಸ್ ನಾಯಕರು ಸದಾ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಪಕ್ಕದ ರಾಜ್ಯಗಳ ಚುನಾವಣೆ ಉಸಾಬರಿ ನೋಡಿಕೊಳ್ಳಲು ಕಾಲಹರಣ ಮಾಡುತ್ತಾ ಬೆಂಗಳೂರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ ಪರಿಣಾಮ ಇವತ್ತು ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುವ ದುಸ್ಥಿತಿ ಬಂದಿದೆ'' ಎಂದು ಟೀಕಿಸಿದ್ದಾರೆ.

ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿ: ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ರಾಜಕಾರಣ ಬಿಟ್ಟು ಜನಕಾರಣದತ್ತ ಗಮನ ಹರಿಸಿ ಬೆಂಗಳೂರಿನ ಜನತೆಗೆ ಕನಿಷ್ಠ ಪಕ್ಷ ಕುಡಿಯುವ ನೀರಿನ ಗ್ಯಾರೆಂಟಿ ಆದರೂ ಕೊಡಬೇಕು ಎಂದು ಆರ್​ ಅಶೋಕ್​ ಆಗ್ರಹಿಸಿದ್ದಾರೆ.

ಆರ್ ಅಶೋಕ್ ಪೋಸ್ಟ್​
ಆರ್ ಅಶೋಕ್ ಪೋಸ್ಟ್​

ಬರ, ನೀರಿನ ಸಮಸ್ಯೆವಿದ್ದರೂ ಮೋಜು ಮಸ್ತಿಯಲ್ಲಿ ಕಾಂಗ್ರೆಸ್ ಸರ್ಕಾರ: ಎನ್ ರವಿಕುಮಾರ್

ರಾಜ್ಯದಲ್ಲಿ ಬರ ಇಲ್ಲ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇಲ್ಲ ಎನ್ನುತ್ತ ಕಾಂಗ್ರೆಸ್ ಸರ್ಕಾರ ಮೋಜು ಮಸ್ತಿಯಲ್ಲಿ ತೊಡಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸೋಮವಾರ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದ ಅವರು, ನೀರು, ವಿದ್ಯುತ್ ಸಮಸ್ಯೆ ಇದ್ದರೂ, ಬರಗಾಲ ಕಿತ್ತು ತಿನ್ನುತ್ತಿದ್ದರೂ ಕೂಡ ರೈತರಿಗೆ ಒಂದು ನಯಾಪೈಸೆ ಪರಿಹಾರ ಕೊಟ್ಟಿಲ್ಲ. 2 ಸಾವಿರ ಕೊಟ್ಟು ಕೈ ತೊಳೆದುಕೊಂಡಿದ್ದಾರೆ ಎಂದು ಅವರು ಟೀಕಿಸಿದರು.

3 ಸಾವಿರ ರೂ. ಗೆ ಟ್ಯಾಂಕರ್ ನೀರು: ಬರದ ಬೇಗೆ, ನೀರಿನ ದಾಹವನ್ನು ಎಲ್ಲ ಕಡೆಗಳಲ್ಲಿ ನಾವು ಕಾಣುತ್ತಿದ್ದೇವೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕುಡಿಯಲು ಕೂಡ ನೀರಿಲ್ಲದೆ ಜನರು ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. 500 ರೂ.ಗೆ ಒಂದು ಟ್ಯಾಂಕರ್ ಸಿಗುತ್ತಿದ್ದ ಜಾಗದಲ್ಲಿ ಈಗ 2,500 ರೂ.ನಿಂದ 3 ಸಾವಿರ ರೂ. ಗೆ ಟ್ಯಾಂಕರ್ ನೀರು ಸಿಗುವಂತಾಗಿದೆ. ಆದರೆ ಸರ್ಕಾರ ಕಣ್ತರೆಯುತ್ತಿಲ್ಲ ಎಂದು ಆರೋಪಿಸಿದರು.

ಬೋರ್​ವೆಲ್​ ಹಾಕಲು 1 ಸಾವಿರ ಅಡಿ, ಸಾವಿರದ ಇನ್ನೂರು, ಸಾವಿರದ ಐದು ನೂರು ಅಡಿವರೆಗೆ ಕೊರೆದರೂ ನೀರು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ನೀರಿನ ಬವಣೆ ಪರಿಹರಿಸಲು ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರವಿಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

84 ಜನರಿಗೆ ಕ್ಯಾಬಿನೆಟ್ ದರ್ಜೆ: ಕರ್ನಾಟಕ ಸರ್ಕಾರವು ಹಣಕಾಸಿನ ತೊಂದರೆ ಇಲ್ಲವೆಂದು ಹೇಳುತ್ತ ಸಚಿವರು ಸೇರಿ 84 ಜನರಿಗೆ ಕ್ಯಾಬಿನೆಟ್ ದರ್ಜೆ ಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆ ಕೊಡುವ ಅವಶ್ಯಕತೆ ಇದೆಯೇ. ಒಂದು ಕ್ಯಾಬಿನೆಟ್ ದರ್ಜೆ ಎಂದರೆ ಒಂದು ತಿಂಗಳಿಗೆ 5 ಲಕ್ಷ ಎಂದರೆ 84 ಜನರಿಗೆ ಒಂದು ತಿಂಗಳಿಗೆ ಎಷ್ಟು ಖರ್ಚಾಯಿತು ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ಕುರಿತು ಯೋಚಿಸಬೇಕು. 34 ಹೊಸ ಇನೋವಾ ಕಾರುಗಳನ್ನು ಖರೀದಿಸಲಾಗಿದೆ. ಸಿದ್ದರಾಮಯ್ಯನವರ ಮನೆ ನವೀಕರಣಕ್ಕೆ 6.40 ಕೋಟಿ ಖರ್ಚಾದ ಬಗ್ಗೆ ಪತ್ರಿಕೆಯಲ್ಲಿ ನೋಡಿದ್ದೇನೆ ಎಂದರು.

ಯಥಾ ರಾಜಾ ತಥಾ ಪ್ರಜೆ ಎಂಬಂತೆ ಸಚಿವರು ತಮ್ಮ ಮನೆ, ಕಚೇರಿಗಳನ್ನು ನವೀಕರಿಸಲು ಮುಂದಾಗಿದ್ದಾರೆ. ಹೊಸ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ನೀವು ಒಂದು ಕಡೆ ದುಡ್ಡಿಲ್ಲದ್ದಕ್ಕಾಗಿ ದೇವಸ್ಥಾನದಿಂದ ಶೇ 10 ಹಣ ಕೊಡಿ ಎಂದು ಕೇಳಲು ಯೋಚಿಸುತ್ತೀರಿ. ಇನ್ನೊಂದು ಕಡೆ ಖರ್ಚು ಮೋಜು ಮಾಡುತ್ತಿದ್ದೀರಿ. ಈ ಸರ್ಕಾರದ ನೀತಿ ಏನು? ಏನು ಮಾಡುತ್ತಿದೆ? ಎಂದು ಅವರು ತರಾಟೆಗೆ ತೆಗೆದುಕೊಂಡರು.

ಸಾಲದ ಬಜೆಟ್ ಮಂಡನೆ: ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡಿ ತೋರಿಸುವ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. 1 ಲಕ್ಷದ 5 ಸಾವಿರ ಕೋಟಿ ಸಾಲದ ಬಜೆಟ್ ಮಂಡಿಸಿದ್ದಾರೆ. ಈ ಸರಕಾರವು ಸಾಲ ತೀರಿಸಲು ಸಾಲ ಮಾಡಬೇಕಾಗಿದೆ. ಬಜೆಟ್‍ನಲ್ಲೂ ಹೋಪ್‍ಲೆಸ್ ಬಜೆಟ್ ಕೊಟ್ಟು, ವಿದ್ಯುತ್, ಅಬಕಾರಿ, ಹಾಲು, ದವಸ ಧಾನ್ಯ, ತರಕಾರಿ, ಬೆಲೆ ಏರಿಕೆಗಳ ಜೊತೆ ನೋಂದಣಿ ದರ ಹೆಚ್ಚಳ, ವಿದ್ಯುತ್ ಕಣ್ಣಾಮುಚ್ಚಾಲೆ ಮಾಡಿದ್ದಾರೆ. ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಲೋಕಸಭಾ ಚುನಾವಣೆಯು ಕರ್ನಾಟಕ ಸರ್ಕಾರಕ್ಕೆ ಪಾಠ ಕಲಿಸುವ ಚುನಾವಣೆ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ನೀರಿನ ಸಮಸ್ಯೆ: ಟ್ಯಾಂಕರ್ ಮೂಲಕ ನೀರು ಪೂರೈಕೆ, ಬೋರ್​​ವೆಲ್ ಕೊರೆಸಲು ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.