ETV Bharat / state

ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲು

author img

By ETV Bharat Karnataka Team

Published : Feb 9, 2024, 4:19 PM IST

Updated : Feb 9, 2024, 5:50 PM IST

ಎಸ್ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿರುವ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ NSUI ಕಾರ್ಯಕರ್ತರು ಶಿವಮೊಗ್ಗದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

NSUI filed Complaint against Chakravarty Sulibele in Shivamogga
ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲು

ಶಿವಮೊಗ್ಗ: ಎಸ್​ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಧಾರ್ಮಿಕ ಭಾವನೆಯನ್ನು ಕೆರಳಿಸುವಂತೆ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಹಾಕಿದ್ದಾರೆ ಎಂದು ಆರೋಪಿಸಲಾಗಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಶಿವಮೊಗ್ಗದಲ್ಲಿ ಎಫ್​ಐಆರ್​ ದಾಖಲಾಗಿದೆ. ಎನ್‌ಎಸ್‌ಯುಐ ಕಾರ್ಯಕರ್ತರು ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ವಿವರ: ರಾಜ್ಯ ಸರ್ಕಾರ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಹೊರಡಿಸಿದ್ದು, ಪಟ್ಟಿಯಲ್ಲಿ ಮಾರ್ಚ್​ 1 ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 5.15 ರವರೆಗೆ ನಿಗದಿ ಮಾಡಿದೆ. ಆ ದಿನ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಆರಂಭವಾಗುತ್ತಿದ್ದು, ಬೆಳಗ್ಗಿನ ಸಮಯದಲ್ಲಿ ಆ ಪರೀಕ್ಷೆ ಇರುವ ಕಾರಣ, ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಒಂದು ದಿನದ ಸಮಯ ಬದಲಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ ಎಂಬವರು ಪರೀಕ್ಷಾ ವೇಳಾಪಟ್ಟಿಯಲ್ಲಿ 1.03.2024ರ ಶುಕ್ರವಾರವನ್ನು ತಕ್ಷಣ ಎದ್ದು ಕಾಣುವಂತೆ ಮಾಡಿ "KARNATAKA STATE 10 STANDARD EXAM TIME TABLE RELEASED. ALL THE EXAM IN THE MORNING SESSION BUT FOR FRIDAY. WHY ?. OH.. TIME FOR NAMAZ?" ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

"ಈ ರೀತಿ ಅನ್ಯಧರ್ಮವನ್ನು ಹೀಯಾಳಿಸಿ ಬರೆದು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಚಕ್ರವರ್ತಿ ಸೂಲಿಬೆಲೆಯವರು ಅನ್ಯ ಧರ್ಮದವರಿಗೆ ನೋವಾಗಲಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮುಸಲ್ಮಾನ ಧರ್ಮದ ಬಗ್ಗೆ ಕೆಟ್ಟ ಭಾವನೆ ಬರಲಿ ಹಾಗೂ ಈ ಮೂಲಕ ಸರ್ಕಾರ ಕೂಡ ಒಂದು ಧರ್ಮದ ಪರವಿದೆ ಎಂಬ ಭಾವನೆ ಬರುವಂತೆ ಮಾಡಿ ಸಮಾಜದ ಅಶಾಂತಿಗೆ ಕಾರಣರಾಗಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿವುಂಟಾಗಿ ಕೋಮುಗಲಭೆ ಆಗುವ ಸಾಧ್ಯತೆಗಳಿರುವುದರಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭೇದ-ಭಾವ ಉಂಟಾಗುವುದರಿಂದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು" ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆ ವೆಚ್ಚ ವಿದ್ಯಾರ್ಥಿಗಳಿಂದಲೇ ವಸೂಲಿಗೆ ಆದೇಶ: ಸರ್ಕಾರದ ವಿರುದ್ಧ ಹೆಚ್​​ಡಿಕೆ ಕಿಡಿ

Last Updated : Feb 9, 2024, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.