ETV Bharat / state

2 ಲಕ್ಷ ಉದ್ಯೋಗ ಸೃಜನೆ ಗುರಿಯ ಹೊಸ ಜವಳಿ ನೀತಿ: ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಉತ್ತೇಜನ

author img

By ETV Bharat Karnataka Team

Published : Feb 16, 2024, 1:43 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್​ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ನೀಡಿದ ಯೋಜನೆಗಳ ಮಾಹಿತಿ ಇಲ್ಲಿದೆ.

New textile policy aimed at creating 2 lakh jobs Boost to commerce and industrial sector
New textile policy aimed at creating 2 lakh jobs Boost to commerce and industrial sector

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಜೆಟ್​-2024ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಮುಖ್ಯವಾಗಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯಿಂದ ಯೋಜನೆಗಳನ್ನು ಘೋಷಿಸಲಾಗಿದೆ. 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿ ಜಾರಿಗೊಳಿಸುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸ್ಟಾಕ್ ಎಕ್ಸ್​ಚೇಂಜ್​​ಗಳಲ್ಲಿ ಐಪಿಓ ಬಿಡುಗಡೆ ಮಾಡಲು ತಗಲುವ ವೆಚ್ಚದಲ್ಲಿ ಗರಿಷ್ಠ ಮಿತಿ 25 ಲಕ್ಷ ರೂ. ಗಳಿಗೆ ಒಳಪಟ್ಟು ಶೇ 50 ರಷ್ಟು ಸಹಾಯಧನ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕ ಸರ್ಕಾರ 2023-24ನೇ ಸಾಲಿನಲ್ಲಿ ಸುಮಾರು 88,150 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಿದೆ. Electronic System Design and Manufacturing (ESDM), ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ, ತಯಾರಿಕಾ ವಲಯ, ಆಟೊಮೊಬೈಲ್, ಡೇಟಾ ಸೆಂಟರ್ ಮತ್ತಿತರ ವಲಯಗಳಲ್ಲಿ ಈ ಹೂಡಿಕೆಗಳನ್ನು ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

  • ಬೆಂಗಳೂರು ಸಮೀಪ ಸುಮಾರು 2000 ಎಕರೆ ಪ್ರದೇಶದಲ್ಲಿ Knowledge Health Care, Innovation and Research City (KHIR) ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು, ಈ ಯೋಜನೆಯಿಂದ ಅಂದಾಜು 40,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 80,000 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ.
  • ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕದ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು.
  • ರಾಜ್ಯಕ್ಕೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಫೆಬ್ರವರಿ 2025ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು (Global Investor’s Meet) ಆಯೋಜಿಸಲಾಗುವುದು.
  • ಗ್ರಾಮೀಣ ಜನರಲ್ಲಿ ಆರ್ಥಿಕ ಶಿಸ್ತು ಮತ್ತು ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಎಂ.ಎಸ್.ಐ.ಎಲ್. ವತಿಯಿಂದ ಚಿಟ್‌ಫಂಡ್‌ ಅನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು.
  • ಯಶವಂತಪುರದಲ್ಲಿ ಕೆ.ಎಸ್‌.ಡಿ.ಎಲ್ ವತಿಯಿಂದ ಜಮೀನಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಛೇರಿ ಸಂಕೀರ್ಣವನ್ನು ನಿರ್ಮಿಸಲಾಗುವುದು.
  • ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕೈಗಾರಿಕಾ ವಸಾಹತುಗಳನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ 39 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ನಿಗಮದ (KSSIDC) ಮೂಲಕ ಮೇಲ್ದರ್ಜೆಗೇರಿಸಲಾಗುವುದು.
  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬಯಿ ಎಕನಾಮಿಕ್‌ ಕಾರಿಡಾರ್‌ ಯೋಜನೆಯಡಿ ಧಾರವಾಡ ಸಮೀಪ ಸುಮಾರು 6,000 ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆರ್ಥಿಕ ಬೆಳವಣಿಗೆಗಳಿಗೆ ಉತ್ತೇಜನ ನೀಡಲು ತೀರ್ಮಾನಿಸಿದೆ.
  • ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಐಪಿಓ ಬಿಡುಗಡೆ ಮಾಡಲು ತಗಲುವ ವೆಚ್ಚದಲ್ಲಿ ಗರಿಷ್ಠ ಮಿತಿ 25 ಲಕ್ಷ ರೂ. ಗಳಿಗೆ ಒಳಪಟ್ಟು ಶೇ.50 ರಷ್ಟು ಸಹಾಯಧನ ನೀಡಲಾಗುವುದು.
  • ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು ಮತ್ತು ಎಂ.ಎಸ್.ಎಂ.ಇ.ಗಳನ್ನು TReDS ವೇದಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಂ.ಎಸ್.ಎಂ.ಇ. ಗಳಿಗೆ ಬರಬೇಕಾದ ಪಾವತಿಗಳು ಕಾಲಮಿತಿಯೊಳಗೆ ಸ್ವೀಕೃತಿಯಾಗಿ ಅವುಗಳ ನಗದು ಹರಿವು ಸಧೃಡಗೊಳಿಸಬೇಕು ಎಂಬ ಉದ್ದೇಶದಿಂದ TReDS ಸೇವಾ ಪೂರೈಕೆದಾರರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗುವುದು.
  • ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷ ಘಟಕ ಯೋಜನೆಯಡಿ ಕರ್ನಾಟಕ ಚರ್ಮ ಮತ್ತು ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಲ್ಲಿ (ಕೆಐಎಲ್‌ಟಿ) ಡಿಪ್ಲೊಮಾ ಇನ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಮಾಡಲು ಪ್ರೋತ್ಸಾಹಧನ ನೀಡಲಾಗುವುದು.
  • ರಾಜ್ಯದಲ್ಲಿನ ಕಟ್ಟಡಕಲ್ಲು ಸೇರಿದಂತೆ ಎಲ್ಲಾ ಉಪ ಖನಿಜಗಳ ಅನಧಿಕೃತ ಗಣಿಗಾರಿಕೆಯನ್ನು ನಿಯಂತ್ರಿಸುವ ಜೊತೆಗೆ ಸಂಪೂರ್ಣ ಖನಿಜ ಬಳಕೆ ಪ್ರಮಾಣವನ್ನು ಡ್ರೋನ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಅಂದಾಜಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಿ, ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಲಾಗುವುದು. ಇದರಿಂದ ಉದ್ಯಮ ಸ್ನೇಹಿ, ಸರಳ ಮತ್ತು ಉತ್ತರದಾಯಿತ್ವ ಹೊಂದಿರುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
  • ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಬೆಲೆಯಲ್ಲಿ ಮರಳು ಲಭ್ಯಪಡಿಸಲು ಹೊಸ ಮರಳು ನೀತಿ 2020 ಅನ್ನು ಅನುಮೋದಿಸಲಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಈ ನೀತಿಯನ್ನು ಜಾರಿಗೊಳಿಸುವಲ್ಲಿನ ಗೊಂದಲಗಳನ್ನು ನಿವಾರಿಸಿ ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ಯೋಗ್ಯ ದರದಲ್ಲಿ ಮರಳನ್ನು ಒದಗಿಸಲಾಗುವುದು.
  • ಮಂಡ್ಯದ ಮೈಶುಗರ್‌ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ರ್ಮಿಸಲಾಗುವುದು. ಸರ್ಕಾರದ ಅನುದಾನ, ಇತರ ಮೂಲಗಳು ಹಾಗೂ ಕಾರ್ಖಾನೆಯ Asset Monetisation ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು.
  • ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು 2024-29ರ ಅವಧಿಗೆ 10,000 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲಾಗುವುದು.
  • ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಟೆಕ್ಸ್​ಟೈಲ್ ಪಾರ್ಕ್ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆಯಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
  • ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್​​ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಇದರಿಂದ ಸುಮಾರು 10,000 ಉದ್ಯೋಗ ಸೃಷ್ಟಿಯಾಗಲಿವೆ.
  • ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪಾರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು.
  • ಜವಳಿ ಪಾರ್ಕ್​ಗಳು ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್​ಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿಯನ್ವಯ ಸಹಾಯಧನವನ್ನು ನೀಡಲಾಗುವುದು.
  • ಮಹಾತ್ಮಾ ಗಾಂಧೀಜಿಯವರು ಭೇಟಿ ನೀಡಿದ್ದ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಕ್ಕಾಗಿ ಕ್ರಮವಹಿಸಲಾಗುವುದು.

ಇದನ್ನು ಓದಿ: ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ: ಸಿದ್ದರಾಮಯ್ಯ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.