ETV Bharat / state

ರಾಮೇಶ್ವರಂ ಕೆಫೆ ಸ್ಫೋಟ: ಯುವಕನ ಜೀವ ಉಳಿಸಿದ ಅಮ್ಮನ ಫೋನ್​ ಕರೆ, ’MOM=GOD’

author img

By PTI

Published : Mar 2, 2024, 10:14 PM IST

ಅಮ್ಮ ಕರೆ ಮಾಡಿದ್ದರಿಂದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟದ ಅಪಾಯದಿಂದ ಪಾರಾದೆ ಎಂದು ಬಿಹಾರ ಮೂಲದ ಸಾಫ್ಟ್ ವೇರ್ ಎಂಜಿನಿಯರ್​ರೊಬ್ಬರು ವಿವರಿಸಿದ್ದಾರೆ.

mothers-phone-call-saved-young-mans-life-from-bengaluru-rameshwaram-cafe-blast
ರಾಮೇಶ್ವರಂ ಕೆಫೆ ಸ್ಫೋಟ: ಯುವಕನ ಜೀವ ಉಳಿಸಿದ ಅಮ್ಮನ ಫೋನ್​ ಕರೆ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದರಲ್ಲಿ ಓರ್ವ ಯುವಕನ ತಾಯಿಯಿಂದ ಬಂದ ಫೋನ್​ ಕರೆಯಿಂದಾಗಿ ಸ್ಫೋಟ ಸಂಭವಿಸಿದ ಸ್ಥಳದಿಂದ ದೂರ ತೆರಳಿ ಅಪಾಯದಿಂದ ಪಾರಾಗಿದ್ದಾನೆ. ಈ ವಿಚಾರವನ್ನು ಖುದ್ದಾಗಿ ಯುವಕನೇ ಶನಿವಾರ ಬಹಿರಂಗ ಪಡಿಸಿದ್ದಾನೆ.

ಹೌದು, ಬಿಹಾರದ ಪಾಟ್ನಾ ಮೂಲದ 24 ವರ್ಷದ ಕುಮಾರ್ ಅಲಂಕೃತ್ ಎಂಬ ಸಾಫ್ಟ್​ವೇರ್ ಎಂಜಿನಿಯರ್​ ನಿನ್ನೆ ರಾಮೇಶ್ವರಂ ಕೆಫೆಗೆ ಹೋಗಿದ್ದರು ಅಲ್ಲಿ ದೋಸೆ ಆರ್ಡರ್​ ಮಾಡಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಕುಳಿತುಕೊಳ್ಳಲು ಯೋಜಿಸಿದ್ದರು. ಅಷ್ಟರಲ್ಲಿ ಅವರಿಗೆ ತಾಯಿಯಿಂದ ಕರೆ ಬಂದಿದೆ ಹೀಗಾಗಿ ಮಾತನಾಡಲು ಅವರು ತಾವಿದ್ದ ಸ್ಥಳದಿಂದ ಕೊಂಚ ದೂರ ಹೋಗಿದ್ದಾರೆ ಇದಾದ ಸ್ಪಲ್ಪ ಹೊತ್ತಿನಲ್ಲೇ ಸ್ಫೋಟ ಸಂಭವಿಸಿದೆ. ತಾಯಿಯಿಂದ ಬಂದ ಫೋನ್​ ಕರೆಯು ಆತನನ್ನು ಅನಾಹುತದಿಂದ ರಕ್ಷಿಸಿದೆ.

ಅಮ್ಮನ ಫೋನ್ ಕರೆ ನನ್ನನ್ನು ಉಳಿಸಿತು: ಈ ಕುರಿತು ಕುಮಾರ್ ಅಲಂಕೃತ್ ಮಾತನಾಡಿ, "ನಾನು ಕೌಂಟರ್ ನಿಂದ ದೋಸೆ ತೆಗೆದುಕೊಂಡು ಕೆಫೆಯೊಳಗೆ ಕುಳಿತುಕೊಳ್ಳಲು ಹೊರಟಿದ್ದೆ. ಪ್ರತಿ ಬಾರಿ ನಾನು ಕೆಫೆಗೆ ಭೇಟಿ ನೀಡಿದಾಗಲೂ ನಾನು ಆ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದೆ (ಸ್ಫೋಟ ಸಂಭವಿಸಿದ ಸ್ಥಳ). ಅದು ನನ್ನ ನೆಚ್ಚಿನ ಸ್ಥಳವಾಗಿತ್ತು. ಈ ಬಾರಿಯೂ ನಾನು ಅಲ್ಲಿ ಕುಳಿತುಕೊಳ್ಳಲು ಯೋಜಿಸುತ್ತಿದ್ದೆ. ಆದರೆ ನನ್ನ ತಾಯಿಯಿಂದ ನನಗೆ ಫೋನ್ ಕರೆ ಬಂತು. ಆದ್ದರಿಂದ ನಾನು ಕೆಫೆಯಿಂದ ಕೆಲವು ಮೀಟರ್ ದೂರದಲ್ಲಿರುವ ಶಾಂತ ಪ್ರದೇಶಕ್ಕೆ ಹೋಗಿ, ಅವರೊಂದಿಗೆ ಮಾತನಾಡುತ್ತಿದ್ದೆ. ಸ್ಪಲ್ಪ ಸಮಯದ ನಂತರ ನನಗೆ ಭಾರಿ ಶಬ್ದ ಕೇಳಿಸಿತು. ಅದೊಂದು ದೊಡ್ಡ ಸ್ಫೋಟವಾಗಿತ್ತು. ಎಲ್ಲರೂ ಭಯಭೀತರಾಗಿ ಹೊರಗೆ ಓಡುತ್ತಿದ್ದರು. ಎಲ್ಲೆಡೆ ಹೊಗೆ ಆವರಿಸಿತ್ತು. ಆದರೆ, ಅದೃಷ್ಟವಶಾತ್, ನನ್ನ ತಾಯಿಯಿಂದ ಬಂದ ಆ ಫೋನ್ ಕರೆ ನನ್ನನ್ನು ಉಳಿಸಿತು. ಇಲ್ಲದಿದ್ದರೆ ನಾನು ನನ್ನ ನೆಚ್ಚಿನ ಸ್ಥಳ (ಸ್ಫೋಟ ಸಂಭವಿಸಿದ ಸ್ಥಳ)ದಲ್ಲಿಯೇ ಕುಳಿತುಕೊಳ್ಳುತ್ತಿದ್ದೆ" ಎಂದು ವಿವರಿಸಿದ್ದಾರೆ.

ಕೆಫೆಯಲ್ಲಿ ನಡೆದ ಸ್ಫೋಟದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಹಂಚಿಕೊಂಡಿರುವ ಕುಮಾರ್ ಅಲಂಕೃತ್​, "ನಿನ್ನೆ ಮಧ್ಯಾಹ್ನ 1 ಗಂಟೆಗೆ ನಾನು ರಾಮೇಶ್ವರಂ ಕೆಫೆ ಊಟ ಮಾಡಲು ಹೋಗಿದ್ದೆ. ಈ ವೇಳೆ, ಕೆಫೆಯೊಳಗೆ ದೊಡ್ಡ ಸ್ಫೋಟ ಸಂಭವಿಸಿದೆ. ನಾನು ಸ್ಫೋಟ ಸಂಭವಿಸಿದ ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿದ್ದೆ. ನಾನು ಸುರಕ್ಷಿತವಾಗಿದ್ದೇನೆ. ಹಲವಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಕೌಂಟರ್‌ನಿಂದ ದೋಸೆ ಹಿಡಿದು ನನ್ನ ನೆಚ್ಚಿನ ಸ್ಥಳದಲ್ಲಿ ಕುಳಿತುಕೊಳ್ಳಲು ಯೋಜಿಸಿದ್ದೆ. ಆದರೆ, ನನ್ನ ತಾಯಿ ನನಗೆ ಫೋನ್​ ಕರೆ ಮಾಡಿದರು, ಆದ್ದರಿಂದ ನಾನು ಸಾಮಾನ್ಯವಾಗಿ ಕುಳಿತುಕೊಳ್ಳುವ ಸ್ಥಳದಿಂದ (ಬಾಂಬ್ ಸ್ಫೋಟಿಸಿದ ಸ್ಥಳ)ದಿಂದ 10 ಮೀಟರ್​ ದೂರ ಹೋದೆ. ಆನಂತರ ಸ್ಫೋಟ ಸಂಭವಿಸಿದೆ, MOM=GOD" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತನ ಚಹರೆ ಪತ್ತೆ, ಪೊಲೀಸ್​ ತನಿಖೆ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.