ETV Bharat / state

ಜಾತಿಗಣತಿ ವರದಿಯನ್ನು ಐಐಎಂ ವೈಜ್ಞಾನಿಕ ಎಂದಿದೆ, ಸಿಎಂ ಕೊಡಲೇ ವರದಿ ಸ್ವೀಕರಿಸಬೇಕು: ಹೆಚ್​ ವಿಶ್ವನಾಥ್​

author img

By ETV Bharat Karnataka Team

Published : Jan 28, 2024, 6:32 PM IST

Updated : Jan 28, 2024, 7:26 PM IST

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಂತರಾಜ ಆಯೋಗದ ವರದಿಯನ್ನು ಅವಲೋಕಿಸಿ ಇದು ವೈಜ್ಞಾನಿಕವಾಗಿದೆ ಎಂದು ಸರ್ಟಿಫಿಕೆಟ್​ ಕೊಟ್ಟಿದೆ ಎಂದು ಎಂಎಲ್​ಸಿ ಹೆಚ್​ ವಿಶ್ವನಾಥ್​ ಹೇಳಿದ್ದಾರೆ.

mlc-h-vishwanath-reaction-on-caste-census-report
ಜಾತಿಗಣತಿ ವರದಿಯನ್ನು ಐಐಎಂ ವೈಜ್ಞಾನಿಕ ಎಂದಿದೆ: ಸಿಎಂ ಕೊಡಲೇ ವರದಿ ಸ್ವೀಕರಿಸಲು ಹೆಚ್​ ವಿಶ್ವನಾಥ್​ ಆಗ್ರಹ

ಎಂಎಲ್​ಸಿ ಹೆಚ್​ ವಿಶ್ವನಾಥ್ ಪ್ರತಿಕ್ರಿಯೆ

ಮೈಸೂರು: "ರಾಜ್ಯದ ಎಲ್ಲ ಜಾತಿ, ಭಾಷಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಕಾಂತರಾಜ ಆಯೋಗ ವರದಿ ಸಲ್ಲಿಸಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಬೇಕು" ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಒತ್ತಾಯಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಕಾಂತರಾಜ ಆಯೋಗದ ವರದಿ ತಯಾರಿಕೆಗೆ 160 ಕೋಟಿ ರೂಪಾಯಿ ಖರ್ಚಾಗಿದೆ. 1,33,410 ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. 1,351 ಜಾತಿಗಳ ಸಮೀಕ್ಷೆಯಾಗಿದೆ" ಎಂದು ಹೇಳಿದರು.

"ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವರದಿಯನ್ನು ಅವಲೋಕಿಸಿ ಇದು ವೈಜ್ಞಾನಿಕವಾಗಿದೆ ಎಂಬ ಸರ್ಟಿಫಿಕೆಟ್​ ಅನ್ನು ಕೊಟ್ಟಿದೆ. ಇಷ್ಟಾದರೂ ನಮ್ಮ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಇದು ಅವೈಜ್ಞಾನಿಕ ಎನ್ನುತ್ತಾರೆ. ನಿನಗೆ ಓದಲೂ ಬರಲ್ಲ, ಬರೆಯಲೂ ಬರಲ್ಲ. ನೀನು ವಿರೋಧ ಪಕ್ಷದ ನಾಯಕ. ರಿಯಲ್​ ಎಸ್ಟೇಟ್​ ಗಿರಾಕಿಗಳೆಲ್ಲ ಅವೈಜ್ಞಾನಿಕ ಎನ್ನುತ್ತಾರೆ. ಹೆಚ್​ ಡಿ ಕುಮಾರಸ್ವಾಮಿ ಅವರೇ ನೀವು ವರದಿಯನ್ನು ಓದಿದ್ದರಾ?. ವರದಿ ಬಿಡುಗಡೆಯಾಗಿ ಚರ್ಚೆಗಳು ನಡೆದ ನಂತರ ಜನರಿಗೆ ಸರಿಯಾದ ಮಾಹಿತಿ ಸಿಗುತ್ತದೆ. ಚಿತ್ರದುರ್ಗದಲ್ಲಿ ಸಭೆ ಕರೆದಿದ್ದಾರೆ. ಮೊದಲು ವರದಿಯನ್ನು ಸ್ವೀಕರಿಸಿ ಸಭೆ ಕರೆದಿದ್ದರೆ ಚೆನ್ನಾಗಿರುತ್ತಿತ್ತು. ತಕ್ಷಣ ಸರ್ಕಾರ ವರದಿಯನ್ನು ಸ್ವೀಕಾರ ಮಾಡಬೇಕು" ಎಂದು ಆಗ್ರಹಿಸಿದರು.

ಡಿ ಕೆ ಶಿವಕುಮಾರ್ ಬಂಡೆ ಆಗಿದ್ದರೆ ಕೂಡಲೇ ಶಾಮನೂರು ಅವರನ್ನು ಉಚ್ಛಾಟಿಸಬೇಕು: "ಕಾಂಗ್ರೆಸ್​ನ ಹಿರಿಯ ಮುಖಂಡ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಪಕ್ಷ ವಿರೋಧಿ ಹೇಳಿಕೆ ನೀಡಿದ ಕಾರಣದಿಂದ ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು. ಅವರು ಕಾಂಗ್ರೆಸ್‌ನಿಂದಲೇ ಗೆದ್ದಿದ್ದಾರೆ. ಕಾಂಗ್ರೆಸ್‌ನಿಂದ ನೆರವು ಪಡೆದಿದ್ದಾರೆ. ಜಗತ್ತಿಗೆ ಇವರನ್ನು ತೋರಿಸಿದವರು ದಿವಂಗತ ದೇವರಾಜ ಅರಸು​ ಅವರು. ಅವರ ಆಶೀರ್ವಾದದಿಂದಲೇ ಬೆಳೆದರೂ ಪಕ್ಷ ಹಾಗೂ ಅರಸರ ಬಗ್ಗೆ ಇವರಿಗೆ ಕಿಂಚಿತ್ತೂ ಕೃತಜ್ಞತೆಯಿಲ್ಲ. ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ, ಡಿ ಕೆ ಶಿವಕುಮಾರ್ ಬಂಡೆ ಆಗಿದ್ದರೆ ಕೂಡಲೇ ಇವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಇವರು ಇಲ್ಲದಿದ್ದರೆ ಕಾಂಗ್ರೆಸ್ ನಡೆಯುವುದಿಲ್ಲವೇ, ವೀರಶೈವರಿಗೆ ಏನೂ ಅನುಕೂಲ ಆಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸುತ್ತಾರೆ. ಆದರೆ ಇವರಿಗೆ ಕೆಲವೇ ಮತ ವೀರಶೈವರಿಂದ ಬಿದ್ದಿವೆ. ಇವರಿಗೆ ಇತರರೇ ಹೆಚ್ಚು ಮತ ಹಾಕಿದ್ದಾರೆ. ಇವರ ಬಗ್ಗೆ ಏಕೆ ಶಾಮನೂರು ಶಿವಶಂಕರಪ್ಪ ಮಾತನಾಡುವುದಿಲ್ಲ "ಎಂದು ಪ್ರಶ್ನಿಸಿದರು.

ಈ ವೇಳೆ ಹೆಚ್​ ವಿಶ್ವನಾಥ್ ಅವರೊಂದಿಗೆ ಡಾ ವೈ ಡಿ ರಾಜಣ್ಣ, ಎಂ ಚಂದ್ರಶೇಖರ್, ಜಾಕೀರ್ ಹುಸೇನ್, ಡೈರಿ ವೆಂಕಟೇಶ್ ಇದ್ದರು.

ಇದನ್ನೂ ಓದಿ: ಬರೇ ಬಾಯಲ್ಲಿ ಅಲ್ಲ, ಹೃದಯದಲ್ಲಿ ರಾಮ ಇರಬೇಕು: ಆರ್.ಅಶೋಕ್

Last Updated : Jan 28, 2024, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.