ETV Bharat / state

ಹನುಮ ಧ್ವಜ ತೆರವುಗೊಳಿಸಿರುವುದು ಕಾಂಗ್ರೆಸ್ ಅಧಃಪತನಕ್ಕೆ ನಾಂದಿ: ಶಾಸಕ ಎಸ್​.ಎನ್​ ಚನ್ನಬಸಪ್ಪ

author img

By ETV Bharat Karnataka Team

Published : Jan 29, 2024, 1:35 PM IST

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ​ ವಿರುದ್ಧ ಶಾಸಕ ಎಸ್​.ಎನ್​ ಚನ್ನಬಸಪ್ಪ ಕಿಡಿಕಾರಿದ್ದಾರೆ.

ಶಾಸಕ ಎಸ್.ಎನ್​ ಚನ್ನಬಸಪ್ಪ
ಶಾಸಕ ಎಸ್.ಎನ್​ ಚನ್ನಬಸಪ್ಪ

ಶಾಸಕ ಎಸ್​.ಎನ್​ ಚನ್ನಬಸಪ್ಪ ಹೇಳಿಕೆ

ಶಿವಮೊಗ್ಗ : ರಾಜ್ಯ ಕಾಂಗ್ರೆಸ್​ ನವರು ರಾಮನ ಭಂಟ ಹನುಮಂತನಿಗೆ ಜಾಗ ನೀಡದಿರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಹನುಮ ಧ್ವಜ ತೆರವು ಮಾಡಿರುವುದು ಕಾಂಗ್ರೆಸ್ ​ಪಕ್ಷದ ಅಧಃಪತನಕ್ಕೆ ನಾಂದಿ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ ಹೇಳಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡಿ ಸಿದ್ದರಾಮಯ್ಯ ರಾವಣನಂತೆ ಆಗಿದ್ದಾರೆ. ಸೀತೆಯನ್ನು ರಾವಣ ಹೊತ್ತುಕೊಂಡು ಹೋಗಿದ್ದಕ್ಕೆ ಲಂಕೆಯನ್ನು ಹನುಮಂತ ಏನು ಮಾಡಿದ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹನುಮ ಧ್ವಜ ಮುಟ್ಟಿದ ಸಿದ್ದರಾಮಯ್ಯ ಅವರಿಗೆ ಮುಂದೆ ಏನು ಕೇಡುಗಾಲ ಬಂದಿದೆ ಅಂತಾ ಗೊತ್ತಾಗುತ್ತದೆ. ಈ ಕೃತ್ಯದಿಂದಾಗಿ ಕಾಂಗ್ರೆಸ್​ನ ಅಧಃಪತನಕ್ಕೆ ನಾಂದಿ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಸರ್ಕಾರಿ‌ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಚನ್ನಬಸಪ್ಪ ಅವರು, ಅದು ಸರ್ಕಾರಿ ಜಾಗ, ಅವರ ಮನೆ ಜಾಗ ಅಲ್ಲವಲ್ಲ. ಸರ್ಕಾರಿ ಜಾಗದಲ್ಲಿ ಯಾವೆಲ್ಲಾ ಧ್ವಜಗಳಿವೆ ಎಂಬುದು ಗೊತ್ತಿಲ್ವ? ಮೊದಲು ಆ ಧ್ವಜಗಳನ್ನು ತೆರವುಗೊಳಿಸುವ ಧೈರ್ಯ ಮಾಡಲಿ. ಇಲ್ಲಿ ಹನುಮ ಧ್ವಜ ತೆಗೆಸಿದಂತೆ ಎಲ್ಲೆಲ್ಲಿ ಬೇರೆ ಬೇರೆ ಧ್ವಜ ಇದೆಯೋ ಅಲ್ಲೆಲ್ಲಾ ತೆಗೆಸಿದ್ದೀರಾ? ಎಂದು ಪ್ರಶ್ನಿಸಿದರು.

ರಾಷ್ಟ್ರಪತಿಗೆ ಸಿಎಂ ಏಕವಚನ ಬಳಕೆ ವಿಚಾರ : ಸಿದ್ದರಾಮಯ್ಯನವರು ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾರಿಗೂ ಏಕವಚನದಲ್ಲಿ ಮಾತನಾಡುತ್ತಾರೆ. ಇದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋಕೆ ಲಾಯಕ್ಕಿಲ್ಲ ಎಂದು ಎಸ್.ಎನ್ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ​ : ಇಂದು ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಅದೇ ರೀತಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಆದರೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡದೇ ಫ್ರೀಡಂ ಪಾರ್ಕ್ ನಲ್ಲಿ ಅನುಮತಿ ಪಡೆದು ಪ್ರತಿಭಟನೆ ನಡೆಸುವಂತೆ ಪೊಲೀಸರು ತಿಳಿಸಿದರು. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ ಅವರಿಗೆ ಪ್ರತಿಭಟನೆಗೆ ಉದ್ದೇಶಿಸಿರುವ ಸ್ಥಳದಲ್ಲೇ ನೋಟೀಸ್ ನೀಡಿ ಸ್ಥಳದಿಂದ ನಿರ್ಗಮಿಸುವಂತೆ ಸೂಚಿಸಿದರು.

ಇದಕ್ಕೆ ಒಪ್ಪದ ಬಿಜೆಪಿ ನಾಯಕರು ಫ್ರೀಡಂ ಪಾರ್ಕ್ ನಲ್ಲಿ ಬೇರೆ ಪ್ರತಿಭಟನೆ ನಡೆಯುತ್ತಿದೆ, ಜಾಗ ಇಲ್ಲ ಎಂದರು. ಪೊಲೀಸ್ ನೋಟಿಸ್ ಮಧ್ಯೆಯೂ ಮೈಸೂರು ಬ್ಯಾಂಕ್ ವೃತ್ತದಲ್ಲೇ ಪ್ರತಿಭಟನೆಗೆ ಮುಂದಾದರು. ಈ ವೇಳೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಧರ್ಮಧ್ವಜ ಹಾರಿಸಲು ಪಂಚಾಯಿತಿಯ ಅನುಮತಿ ಇತ್ತು: ಸಿ.ಟಿ.ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.