ETV Bharat / state

ಪೊಲೀಸ್​ ಇಲಾಖೆಯಲ್ಲಿನ ಭ್ರಷ್ಟಾಚಾರದಿಂದ ಅಪರಾಧ ಹೆಚ್ಚಳ: ಶಾಸಕ ಅರವಿಂದ್​ ಬೆಲ್ಲದ್​ ಆರೋಪ - MLA Aravind bellad

author img

By ETV Bharat Karnataka Team

Published : May 19, 2024, 6:57 PM IST

ಬಿಜೆಪಿ ಶಾಸಕ ಅರವಿಂದ್​ ಅವರು ಮೃತ ಅಂಜಲಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು.

ಮೃತ ಅಂಜಲಿ ಕುಟುಂಬಸ್ಥರ ಭೇಟಿಯಾದ ಶಾಸಕ ಅರವಿಂದ್​ ಬೆಲ್ಲದ್
ಮೃತ ಅಂಜಲಿ ಕುಟುಂಬಸ್ಥರ ಭೇಟಿಯಾದ ಶಾಸಕ ಅರವಿಂದ್​ ಬೆಲ್ಲದ್ (ETV Bharat)

ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅಕ್ರಮ ಚಟುವಟಿಕೆ ನಡೆಸುವವರ ಜೊತೆ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ್​ ಬೆಲ್ಲದ್​​ ಆರೋಪಿಸಿದರು.

ನಗರದಲ್ಲಿ ಈಚೆಗೆ ಕೊಲೆಯಾದ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ, ಆರ್ಥಿಕ ನೆರವು​ ನೀಡಿದ ಬಳಿಕ ಅವರು ಮಾತನಾಡಿದರು. ಪೊಲೀಸ್​ ಅಧಿಕಾರಿಗಳು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಪಡೆದುಕೊಳ್ಳಲು ರಾಜಕಾರಣಿಗಳಿಗೆ ಹಣ ನೀಡಿರುತ್ತಾರೆ. ಆ ಹಣವನ್ನು ವಾಪಸ್ ಸಂಗ್ರಹಿಸಲು ಅಪರಾಧ ಕೃತ್ಯ ಎಸಗುವವರೊಂದಿಗೆ ಕೈಜೋಡಿಸುತ್ತಾರೆ ಎಂದು ದೂರಿದರು.

ಅವಳಿ ನಗರಗಳಾದ ಹುಬ್ಬಳ್ಳಿ - ಧಾರವಾಡದಲ್ಲಿ ಗಾಂಜಾ, ಮದ್ಯ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದನ್ನು ಮೊದಲು ಮಟ್ಟ ಹಾಕಬೇಕು. ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳ ಮಕ್ಕಳೂ ಪೊಲೀಸರೊಂದಿಗೆ ಶಾಮೀಲಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಅಂಜಲಿ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಿ: ಜಿಲ್ಲೆಯಲ್ಲಿ ಕೆಳಹಂತದ ಪೊಲೀಸರನ್ನು ಅಂತರ್​ ಜಿಲ್ಲೆಗೆ ವರ್ಗಾವಣೆ ಮಾಡುವ ಕಾನೂನನ್ನು ಜಾರಿಗೆ ತರಬೇಕು. ಹೀಗಾದಾಗ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದೆ. ಸಿಎಂ ಸಿದ್ದರಾಮಯ್ಯ ಅವರು ಜನರ ರಕ್ಷಣೆ ಮಾಡಲಿ. ಹಿಂದುಳಿದ, ಮಹಿಳೆಯರ ಪರ ಎನ್ನುವ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಂಜಲಿ ಕುಟುಂಬಸ್ಥರಿಗೆ ನಗರದಲ್ಲಿ ನಿವೇಶನ ಒದಗಿಸಿ, ಇಲ್ಲವೇ ಮನೆ ನಿರ್ಮಿಸಿ ಕೊಡಬೇಕು. ಕುಟುಂಬಕ್ಕೆ ಭದ್ರತೆಯನ್ನು ಒದಗಿಸಬೇಕು. ಸರ್ಕಾರ ಕಣ್ಣು ಒರೆಸುವ ತಂತ್ರವನ್ನು ಮಾಡಬಾರದು ಎಂದರು.

ಶಾಸಕರ ವಿರುದ್ಧ ಗರಂ: ಸ್ಥಳೀಯ ಶಾಸಕರು ಸಂತ್ರಸ್ತರಿಗೆ ಸರ್ಕಾರದಿಂದ ಮನೆ, 50 ಲಕ್ಷ ರೂಪಾಯಿ ಪರಿಹಾರ ಕೊಡಿಸುವಲ್ಲಿ ಕಾರ್ಯಪ್ರವೃತರಾಗಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಕೊಲೆ ಆಗಿದ್ದರೆ, ಈಗಾಗಲೇ ಪರಿಹಾರದ ಹಣವನ್ನು ಘೋಷಣೆ ಮಾಡುತ್ತಿದ್ದರು. ಹಿಂದೂ ಹುಡುಗಿ ಎಂಬ ಕಾರಣಕ್ಕೆ ಪರಿಹಾರ ಘೋಷಣೆ ಮಾಡಿಲ್ಲ. ನೀತಿ ಸಂಹಿತೆ ನೆಪವೊಡ್ಡಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಮೃತ ಅಂಜಲಿ ಕುಟುಂಬಕ್ಕೆ ಆರ್ಥಿಕ ನೆರವು: ನಗರದ ವೀರಾಪೂರ ಓಣಿಯಲ್ಲಿರುವ ಹತ್ಯೆಗೀಡಾದ ಅಂಜಲಿ ಅಂಬಿಗೇರ ಅವರ ಕುಟುಂಬಕ್ಕೆ ಶಾಸಕ ಅರವಿಂದ್ ಬೆಲ್ಲದ್ ಸಾಂತ್ವನ ತಿಳಿಸಿದ ಬಳಿಕ, ಅಂಜಲಿ ಅವರ ಅಜ್ಜಿ ಗಂಗಮ್ಮಾ ಅವರಿಗೆ ಆರ್ಥಿಕ ನೆರವು ನೀಡಿದರು.

ಇದನ್ನೂ ಓದಿ: ಗೃಹ ಇಲಾಖೆ ಪರಮೇಶ್ವರ್ ಕೈಯಲ್ಲಿಲ್ಲ, ಬೇರೆ ಯಾರೋ ಹೈಜಾಕ್‌‌ ಮಾಡುತ್ತಿದ್ದಾರೆ: ಆರ್‌.ಅಶೋಕ್ ಆರೋಪ - R AShok Slam Congress

ETV Bharat Logo

Copyright © 2024 Ushodaya Enterprises Pvt. Ltd., All Rights Reserved.