ETV Bharat / state

ನಾಡಗೀತೆ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ

author img

By ETV Bharat Karnataka Team

Published : Feb 21, 2024, 12:39 PM IST

Updated : Feb 21, 2024, 4:45 PM IST

ಶಾಲೆಗಳಲ್ಲಿ ನಾಡಗೀತೆ ಆದೇಶ ವಿಚಾರವಾಗಿ ಹೊರಡಿಸಿದ್ದ ಸುತ್ತೋಲೆ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

minister-shivaraj-tangadagi-clarification-on-naada-geethe-order
'ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ' ಆದೇಶ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ

ನಾಡಗೀತೆ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್ ಆಗಿತ್ತು: ಸಚಿವ ತಂಗಡಗಿ ಸ್ಪಷ್ಟನೆ

ಬೆಂಗಳೂರು: ''ನಾಡಗೀತೆ ಸುತ್ತೋಲೆಯಲ್ಲಿ ಪ್ರಿಂಟ್ ಮಿಸ್ಟೇಕ್'' ಆಗಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳಿಗೆ ನಾಡಗೀತೆ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿ, ''ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ.‌ ನೋಟ್​ ಶೀಟ್​​ನಲ್ಲಿ ಎಲ್ಲ ಶಾಲೆಗಳು ಎಂದಿದೆ. ಅದು ಮುದ್ರಣ ತಪ್ಪಿನಿಂದ ಆಗಿದೆ. ಅದನ್ನು ಸರಿಪಡಿಸಿ, ಮರು ಆದೇಶ ಹೊರಡಿಸಲಾಗುವುದು. ನಮಗೆ ಎಲ್ಲ ಶಾಲೆಗಳು ಒಂದೇ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ, ಅನುದಾನಿತ‌ ಶಾಲೆ ಅಂತಾ ಹಾಕಿದ್ದಾರೆ'' ಎಂದು ಸ್ಟಷ್ಟಪಡಿಸಿದರು.

''ತಿದ್ದುಪಡಿ ಆದೇಶದಲ್ಲಿ ಎಲ್ಲ ಶಾಲೆಗಳಲ್ಲಿ ಕಡ್ಡಾಯ ನಾಡಗೀತೆ ಅಂತಾ ಹಾಕಿಸುತ್ತೇವೆ. ನಮ್ಮ ಸರ್ಕಾರ ಕನ್ನಡದ ಬಗ್ಗೆ ಕಾಳಜಿ ಇಟ್ಟಿದೆ. ನಾವು ಬಹಳ ಸ್ಪಷ್ಟವಾಗಿದ್ದೇವೆ. ಆದೇಶ ಪ್ರತಿಯ ಸಾಧಕ - ಬಾಧಕ ಪರಿಶೀಲಿಸಬೇಕು. ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಬೇಕು ಅಂತಲೇ ಬಂದೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ. ಸಂಜೆಯೊಳಗೆ ತಿದ್ದುಪಡಿ ಮಾಡಿ ಮರು ಆದೇಶ ಹೊರಡಿಸುತ್ತೇವೆ'' ಎಂದು ಹೇಳಿದರು.‌

ಶೇಕಡ 60ರಷ್ಟು ಕನ್ನಡ ಫಲಕ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿ, ''ವಿಧಾನಸಭೆ, ಪರಿಷತ್​​ನಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕನ್ನಡದಲ್ಲಿ ಬೋರ್ಡ್ ಹಾಕಬೇಕು ಅಂತಾ ಚರ್ಚೆ ಮಾಡಲಾಗಿದೆ. ಕೆಲವರು ಸಲಹೆ ಕೊಟ್ಟಿದ್ದಾರೆ. ಕೈಗಾರಿಕೆಗಳಲ್ಲಿ ಹೆಸರು ಹಾಕುವ, ಡಿಸ್​​ಪ್ಲೇ ಹಾಕುವ ಪದ್ಧತಿ ಬರುತ್ತಿದೆ'' ಎಂದರು.

ಭುವನೇಶ್ವರಿ ಪ್ರತಿಮೆ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯಿಸಿ, ''ಅದರ ಬಗ್ಗೆ ಚರ್ಚೆ ಆಗುತ್ತಿದೆ, ಆದಷ್ಟು ಬೇಗ ನಿಮಗೆ ತಿಳಿಸುತ್ತೇವೆ. ವಿಧಾನಸೌಧದ ಮುಂಭಾಗದಲ್ಲಿ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲೇ ಇದರ ಬಗ್ಗೆ ಮಾಹಿತಿ ಒದಗಿಸುತ್ತೇವೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಮತದಾರರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೃತಘ್ಞತೆ

ಬಿಜೆಪಿ ನಾಯಕರ ಆಕ್ರೋಶ: ಕುವೆಂಪು ಅವರು ರಚಿಸಿದ 'ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ' ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂದು ಆದೇಶ ಹೊರಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ದೋರಣೆ ತೋರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅಶೋಕ್, ಎರಡು ದಿನಗಳ ಹಿಂದಷ್ಟೇ ಕುವೆಂಪು ಅವರ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಎಂಬ ಘೋಷವಾಕ್ಯವನ್ನ ಬದಲಾಯಿಸುವ ಹುನ್ನಾರ ಬಯಲಾದ ಬೆನ್ನಲ್ಲೇ, ಈಗ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಮತೊಮ್ಮೆ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ಕನ್ನಡಾಂಬೆಗೆ ಅಪಮಾನ ಎಸಗಿದೆ ಎಂದು ಆರೋಪಿಸಿದ್ದಾರೆ.

ಆದೇಶದ ಪ್ರಮಾದ ಕುರಿತಂತೆ ಮಾತನಾಡಿರುವ ಬಿಜೆಪಿ ಶಾಸಕ ಅಶ್ವತ್ಥನಾರಾಯಣ, ನಮ್ಮ ರಾಜ್ಯ ಸರ್ಕಾರವು ಅಧಿಕಾರಿಗಳ ಸರ್ಕಾರವಾಗಿದೆ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಅಧಿಕಾರಿಗಳು ಮನಬಂದಂತೆ ನಿರ್ಧಾರ ಮಾಡುತ್ತಿದ್ದಾರೆ. ನಾಡಗೀತೆಗೆ ಅವಮಾನ ಮಾಡುವ ನಿರ್ಧಾರ ಮಾಡಿರುವುದನ್ನು ಖಂಡಿಸುತ್ತೇನೆ.‌ ಕನ್ನಡ ಅಸ್ಮಿತೆ, ಸಂಸ್ಕೃತಿ ಬಗ್ಗೆ ಕಾಂಗ್ರೆಸ್ ಅವರು ಮಾತನಾಡುತ್ತಾರೆ. ಈ ನೋಟಿಸ್​ಗಳು, ಆದೇಶಗಳು ಅದಕ್ಕೆ ಉತ್ತಮ ಉದಾಹರಣೆ. ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬುದನ್ನು ಜ್ಞಾನ ದೇಗುಲ ಧೈರ್ಯವಾಗಿ ಪ್ರಶ್ನಿಸು ಅಂತಾ ಮಾಡಲು ಹೋಗುತ್ತಾರೆ ಎಂದು ಕಿಡಿಕಾರಿದರು.

ಮಣಿವಣ್ಣನ್ ಅವರು ಆತ್ಮಸಾಕ್ಷಿ ಇಲ್ಲದ ಅಧಿಕಾರಿ. ಇದು ಸದೃಢ ಸರ್ಕಾರವೇ ಆಗಿದ್ದರೆ ಕ್ರಮ ತೆಗೆದುಕೊಳ್ಳಿ. ಸಿದ್ದರಾಮಯ್ಯ ಅವರ ಕೈ ಕಾಲು ಬಹಳ ಜೋರಾಗಿ ಓಡಾಡುತ್ತಿರುತ್ತೆ. ಕೂಡಲೇ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಕೇರಳ ಆನೆ ತುಳಿತಕ್ಕೆ ಒಳಗಾದ ವ್ಯಕ್ತಿಗೆ ಪರಿಹಾರ ನೀಡಿರುವ ವಿಚಾರ ಪ್ರತಿಕ್ರಿಯಿಸಿ, ನೀವಂತೂ ನಿಮ್ಮ ಜೀವನದಲ್ಲಿ ತೆರಿಗೆ ಹಣ ಕಟ್ಟಿಲ್ಲ. ಪಕ್ಕದ ನಾಡು ವಯನಾಡಿಗೆ ಕೊಡುವಂತಹದ್ದು ಏನಿದೆ?. ನಿಮ್ಮ ದುಡ್ಡು ಕೊಡಿ, ಸರ್ಕಾರದ ಹಣ ಯಾಕೆ ಕೊಡುತ್ತೀರಿ ಎಂದು ಪ್ರಶ್ನಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಆಗುತ್ತಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಉತ್ತರಿಸಿ, ದೇಶದಲ್ಲಿ ಏನಾದರೂ ವ್ಯಾಪಾರ ಇದ್ದರೆ ಅದು ಕಾಂಗ್ರೆಸ್ ಅವರೇ ಮಾಡಿರುತ್ತಾರೆ. ಅದರ ಭಯ ಅವರಿಗೆ ಕಾಡುತ್ತಿರುತ್ತೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ. ಅವರ ಶಾಸಕರಲ್ಲೇ ಅಸಂತೃಪ್ತಿ ಇದೆ. ಕೆಲವರಿಗೆ ಹಣ ಹೊಳೆ ರೀತಿಯಲ್ಲಿ ಹೋಗುತ್ತೆ. ಕೆಲವರಿಗೆ ಬೋರ್​​ವೆಲ್ ಹೊಡಿಸುವುದಕ್ಕೂ ಹಣವಿಲ್ಲ ಎಂದರು.

Last Updated :Feb 21, 2024, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.