ETV Bharat / state

ಭಾರತ್ ರೈಸ್ ಹೆಸರಲ್ಲಿ ದೇಶವನ್ನ ಆರ್ಥಿಕ ದಿವಾಳಿಗೆ ನೂಕಲಾಗುತ್ತಿದೆ: ಸಚಿವ ಮುನಿಯಪ್ಪ

author img

By ETV Bharat Karnataka Team

Published : Feb 13, 2024, 2:02 PM IST

ಭಾರತ್ ರೈಸ್ ಹೆಸರಲ್ಲಿ ಕೇವಲ ಪ್ರಚಾರಕ್ಕಾಗಿ 29 ರೂಗೆ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎಂದು ಸಚಿವ ಮುನಿಯಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Etv Bharat
ಸಚಿವ ಮುನಿಯಪ್ಪ

ಸಚಿವ ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ಹಸಿವಿನಿಂದ ಈವರೆಗೂ ಯಾರೂ ಮೃತಪಟ್ಟ ಘಟನೆ ವರದಿಯಾಗಿಲ್ಲ, ಅನ್ನಭಾಗ್ಯದಡಿ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ ಹಣ ನೀಡಲಾಗುತ್ತಿದೆ. ನಮಗೆ ಅಕ್ಕಿ ಇಲ್ಲ ಎಂದ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 20 ರೂ.ನಷ್ಟ ಮಾಡಿಕೊಂಡು ಕೇವಲ ಪ್ರಚಾರಕ್ಕೆ 29 ರೂ. ಪ್ರತಿ ಕೆಜಿಗೆ ಭಾರತ್ ರೈಸ್ ಬಿಡುಗಡೆ ಮಾಡಿ ದೇಶವನ್ನು ಆರ್ಥಿಕ ದಿವಾಳಿಯಾಗಿ ಮಾಡಲು ಹೊರಟಿದೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್​​ನ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ಮುಖ್ಯ ಸಚೇತಕ ರವಿಕುಮಾರ್, ರಾಜ್ಯದಲ್ಲಿ ಹಸಿವಿನಿಂದ ಸಾವಿನ ವರದಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ಮಾಡಿಲ್ಲ ಎನ್ನುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ನೀಡುವ ವಾಗ್ದಾನದಂತೆ ನಡೆದುಕೊಂಡಿದ್ದೇವೆ. ಹಸಿವಿನಿಂದ ಯಾರೂ ಮೃತಪಟ್ಟ ಘಟನೆ ವರದಿಯಾಗಿಲ್ಲ. ಅದಕ್ಕೆ ಬಿಡುವುದೂ ಇಲ್ಲ, ಈಗಾಗಲೇ ಫಲಾನುಭವಿಗಳಿಗೆ 4,411 ಕೋಟಿ ರೂ ಹಣ ಬಿಡುಗಡೆ ಮಾಡಿ ಡಿಬಿಟಿ ಮೂಲಕ ವಿತರಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಅಕ್ಕಿ ಇದ್ದರೂ ನಮಗೆ ಕೊಡಲಿಲ್ಲ ಹಾಗಾಗಿ ನಾವು ಮಾತುಕೊಟ್ಟಂತೆ ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ. ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ ಕೇಂದ್ರದ ಆಹಾರ ನಿಗಮ ಪೂರೈಕೆ ಮಾಡಲಿದೆ. ಆದರೆ ನಮಗೆ ಮಾತ್ರ ಹೆಚ್ಚುವರಿ ಅಕ್ಕಿ ಸರಬರಾಜಿಗೆ ನಿರಾಕರಿಸಿದೆ. ಕೇಂದ್ರದಿಂದ ಅಕ್ಕಿ ಸಿಗದ ಕಾರಣ ಬೇರೆ ಕಡೆ ಖರೀದಿಗೆ ಪ್ರಯತ್ನಿಸಿದೆವು. ಆದರೆ, ಬೇರೆ ರಾಜ್ಯಗಳಲ್ಲಿ ದರ ಹೆಚ್ಚಿದೆ. ನಮ್ಮ ದರಕ್ಕೆ ಸಿಗಲಿಲ್ಲ ಹಾಗಾಗಿ ಕೇಂದ್ರ ನಿಗದಿಪಡಿಸಿರುವ ಕೆಜಿ ಅಕ್ಕಿಗೆ 34 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿದ್ದೇವೆ ಎಂದರು.

ರವಿಕುಮಾರ್ ಆರೋಪ ಮಾಡಿರುವಂತೆ ಹಸಿವಿನಿಂದ ರಾಜ್ಯದಲ್ಲಿ ಯಾರೂ ಸತ್ತಿಲ್ಲ, ನಮಗಿರುವ ಮಾಹಿತಿಯಂತೆ ಯಾರೂ ಸತ್ತಿಲ್ಲ, ಖಚಿತ ಮಾಹಿತಿ ಇದ್ದರೆ ನೀಡಿ ಎಂದ ಮುನಿಯಪ್ಪ, ಭಾರತ ಸರ್ಕಾರ 38,39,40 ರೂ.ನಂತೆ ತೆಲಂಗಾಣ ಸೇರಿ ಇತರ ರಾಜ್ಯಗಳಿಂದ ಅಕ್ಕಿ ಖರೀದಿಸಿ ನಂತರ10 ರೂ. ಗಳನ್ನು ಪ್ರತಿ ಕೆಜಿ ಪ್ರೋಸೆಸ್ ಮಾಡಲು ವೆಚ್ಚ ಮಾಡಿದೆ. ಹಾಗಾಗಿ ಒಟ್ಟಾರೆ ಪ್ರತಿ ಕೆಜಿಗೆ 50 ರೂ ಆಸು ಪಾಸು ಇರಲಿದೆ. ಆದರೆ ಆ ಅಕ್ಕಿಯನ್ನು ಭಾರತ್ ರೈಸ್ ಹೆಸರಿನಲ್ಲಿ ಪ್ರತಿ ಕೆಜಿಗೆ 29 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆಜಿಗೆ 20 ರೂ. ನಂತ ನಷ್ಟ ಮಾಡಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದೆ. 60 ಲಕ್ಷ ಮೆಟ್ರಿಕ್ ಟನ್​​ಗೆ ಪ್ರತಿ ಕೆಜಿಗೆ 20 ರೂ ನಂತೆ ನಷ್ಟ ಮಾಡಿ ಆರ್ಥಿಕ ದಿವಾಳಿಗೆ ದೇಶವನ್ನು ನೂಕಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ; ಫೆ.17ರಿಂದ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಅಳವಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.