ETV Bharat / state

ರಾಜ್ಯ ಬಿಜೆಪಿ ಒಡೆದ ಮನೆ, ಒಂದೇ ಕುಟುಂಬದ ದರ್ಬಾರ್: ಸಚಿವ ಕೃಷ್ಣ ಬೈರೇಗೌಡ - Krishna Byre Gowda

author img

By ETV Bharat Karnataka Team

Published : Apr 3, 2024, 6:05 PM IST

ಬಿಜೆಪಿ ನಾಯಕರಿಗೆ ಲೋಕಸಭೆ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ ಎಂದು ಸಚಿವ ಕೃಷ್ಣಬೈರೇಗೌಡ ವ್ಯಂಗ್ಯವಾಡಿದ್ದಾರೆ.

ಸಚಿವ ಕೃಷ್ಣಬೈರೇಗೌಡ
ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ರಾಜ್ಯ ಬಿಜೆಪಿ ಒಡೆದ ಮನೆಯಾಗಿದೆ. ಒಂದೇ ಕುಟುಂಬದ ದರ್ಬಾರ್ ನಡೆಯುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು. ನಗರದ ಫ್ರೀಡಂ ಪಾರ್ಕ್​ನಲ್ಲಿ ಇಂದು ಪ್ರೊ.ರಾಜೀವ್ ​ಗೌಡ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬೃಹತ್ ಸಮಾವೇಶಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಅವರು ಜನರ ಪ್ರತೀಕ. ಅವರು ಸ್ಥಳೀಯರು. ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ನಾವು ಸ್ಥಳೀಯರಿಗೆ ಟಿಕೆಟ್ ನೀಡಿದ್ದೇವೆ. 2004ರಲ್ಲಿ ಬಿಜೆಪಿಯವರು ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ.ಸಾಂಗ್ಲಿಯಾನ ಅವರಿಗೆ ಟಿಕೆಟ್ ಕೊಟ್ರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ನಯಾ ಪೈಸೆ ಕೆಲಸ ಮಾಡಲಿಲ್ಲ. ನಂತರ ಡಿ.ಬಿ.ಚಂದ್ರೇಗೌಡರನ್ನು ಕರೆದುಕೊಂಡು ಬಂದು ನಿಲ್ಲಿಸಿದರು. ಅವರೂ ಸಹ ಕೆಲಸ ಮಾಡಲಿಲ್ಲ ಎಂದರು.

10 ವರ್ಷ ಡಿ.ವಿ.ಸದಾನಂದ ಗೌಡರನ್ನು ಗೆಲ್ಲಿಸಿದ್ರಿ. ನಯಾಪೈಸೆ ಕೆಲಸ ಮಾಡಲಿಲ್ಲ. ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯವರೇ ಗೋ ಬ್ಯಾಕ್ ಎಂದು ತಿರಸ್ಕರಿಸಿರುವ‌ ಶೋಭಕ್ಕನನ್ನು ಇಲ್ಲಿಗೆ ಕರೆ ತಂದಿದ್ದಾರೆ. ಗೆದ್ದು ಬಂದರೆ ಬೆಂಗಳೂರು ಉತ್ತರಕ್ಕೆ ಬರುತ್ತಾರೋ, ಬೇರೆ ಕಡೆ ಹೋಗುತ್ತಾರೋ?. ಬೆಂಗಳೂರು ಉತ್ತರ ನಂತರ ತಮ್ಮ ಮುಂದಿನ ಕ್ಷೇತ್ರ ಯಾವುದು ಹೇಳಿ? ಎಂದು ವ್ಯಂಗ್ಯವಾಡಿದರು.

ಬೆಲೆ ಏರಿಕೆಯಾಗಿದೆ. ಜನರನ್ನು ಸುಲಿಗೆ ಮಾಡ್ತಿದ್ದಾರೆ. ಬಡವ‌ ಮನೆ ಕಟ್ಟಲೂ ಆಗ್ತಿಲ್ಲ. ಬೆಲೆ ಏರಿಕೆ ಹೊರೆ ನಮ್ಮ ಮೇಲೆ ಹಾಕಿದ್ದಾರೆ. ಉಪ್ಪು, ಜೀರಿಗೆ, ಮೈದಾ ಎಲ್ಲದರ ಮೇಲೆ ಜಿಎಸ್​ಟಿ ತೆರಿಗೆ‌ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬೃಹತ್ ಸಮಾವೇಶಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬೃಹತ್ ಸಮಾವೇಶಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ

ನಗರಾಭಿವೃದ್ಧಿ ಸಚಿವ ‌ಬೈರತಿ ಸುರೇಶ್ ಮಾತನಾಡಿ, ಬಿಜೆಪಿ ಜಗಳಗಂಟ ಪಕ್ಷ. ಆ ಅಮ್ಮ ಮಹಾತಾಯಿ ಕುಮಾರಿ ಶೋಭಾ ಕರಂದ್ಲಾಜೆ ಜಂಪಿಂಗ್ ಮಾಡುತ್ತಾರೆ. ಅವರಿಗೆ ಇದು ಐದನೇ ಕ್ಷೇತ್ರ. ಸದಾನಂದ ಗೌಡರ ಕಣ್ಣಲ್ಲಿ ನೀರು ಹಾಕಿಸಿದರು. ಬಿಜೆಪಿ ಹಾಗೂ ಜೆಡಿಎಸ್ ನಮಗೆ ಲೆಕ್ಕ ಇಲ್ಲ. ರಾಜ್ಯ ಸರ್ಕಾರದ ಫಂಡ್​ನಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ಓಡಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ. ಮುಂದಿನ ಐದು ವರ್ಷ ನಾವೇ ಇರುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪ್ರೊ.ರಾಜೀವ್ ಗೌಡ ಮಾತನಾಡಿ, ಬಿಜೆಪಿ ಸಂಸದರು ಕ್ಷೇತ್ರದಲ್ಲಿ ಸಿಗುವುದಿಲ್ಲ. ಮೋದಿ ನೋಡಿ ಮತ ಕೇಳುತ್ತಾರೆ. ನಮಗೆ ಡಮ್ಮಿ ಸಂಸದರು ಬೇಡ. ತಮ್ಮ ಖಾತೆಗೆ ಹಣ ಹಾಕುವುದಾಗಿ ಹೇಳಿದ್ರು. ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು.

ಈ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಬೆಂಗಳೂರಿನಲ್ಲಿ ಐಟಿ, ಬಿಟಿ ಕಟ್ಟಿದ್ದು ಕಾಂಗ್ರೆಸ್. ಬಿಜೆಪಿ ಏನೂ ಸಾಧನೆ ಮಾಡಿಲ್ಲ. ಬಿಜೆಪಿ ಬೆಂಕಿ ಹಚ್ಚಿದ್ದಾರೆ. ದುಷ್ಟರಿಗೆ ಅವಕಾಶ ನೀಡಬೇಡಿ. ನಿಮಗೆ ಒಳ್ಳೆಯ ಫಲಿತಾಂಶ ಸಿಗಲಿದೆ. ಇದು ಐತಿಹಾಸಿಕ ಚುನಾವಣೆ ಎಂದರು.

ನಮ್ಮ ಖಾತೆಯನ್ನ ಸೀಜ್ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ನಡುಗುತ್ತಿದ್ದಾರೆ. ಆಪರೇಷನ್ ಕಮಲ ಶುರು ಮಾಡಿದ್ರು. ಶಾಸಕರನ್ನು ಹೆದರಿಸಿ, ಪ್ರಜಾಪ್ರಭುತ್ವ ಬೀಳಿಸಿದ್ರು. ಸ್ವಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿದ್ರು. ಕೇಸ್ ಗಳಿರುವ ಶೋಭಾ ಕರಂದ್ಲಾಜೆ ಅವರು ಮೋದಿ ಸಂಪುಟದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಶಾಸಕ ಎ.ಸಿ.ಶ್ರೀನಿವಾಸ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ, ಮಾಜಿ ಮೇಯರ್ ಸಂಪತರಾಜ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ನಾಮಪತ್ರ ಸಲ್ಲಿಕೆ - Prof Rajeev Gowda

ETV Bharat Logo

Copyright © 2024 Ushodaya Enterprises Pvt. Ltd., All Rights Reserved.